ಢಾಕಾ: ಬಾಂಗ್ಲಾದೇಶದ (Bangladesh) ಮೈಮನ್‌ಸಿಂಗ್ ಜಿಲ್ಲೆಯ ಭಾಲುಕಾ ಪ್ರದೇಶದಲ್ಲಿ ನಡೆದ ಹಿಂದೂ ಯುವಕನ ಕ್ರೂರ ಹತ್ಯೆ ಪ್ರಕರಣ ಸಂಬಂಧ 7 ಮಂದಿಯನ್ನ ಬಂಧಿಸಲಾಗಿದೆ ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ (Muhammad Yunus) ದೃಢಪಡಿಸಿದ್ದಾರೆ.
ದೀಪು ಚಂದ್ರ ದಾಸ್ ಎನ್ನುವ ಗಾರ್ಮೆಂಟ್ ಕಾರ್ಖಾನೆ ಕಾರ್ಮಿಕನನ್ನ ಗುರುವಾರ ರಾತ್ರಿ ಸ್ಥಳೀಯರ ಗುಂಪೊಂದು ಥಳಿಸಿ ಕೊಂದಿತ್ತು. ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದನೆಂದು ಆರೋಪಿಸಿ ಸ್ಥಳೀಯ ನಿವಾಸಿಗಳ ಗುಂಪು ಹತ್ಯೆ ಮಾಡಿತ್ತು. ಬಳಿಕ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂಸಾಚಾರಕ್ಕೆ ಅವಕಾಶ ಇಲ್ಲ – ಹಿಂದೂ ವ್ಯಕ್ತಿಯ ಗುಂಪುಹತ್ಯೆ ಖಂಡಿಸಿದ ಯೂನಸ್ ಸರ್ಕಾರ

ರ‍್ಯಾಪಿಡ್ ಆಕ್ಷನ್ ಬೆಟಾಲಿಯನ್ (RAB) ವಿಶೇಷ ಕಾರ್ಯಾಚರಣೆ ನಡೆಸಿ ವಿವಿಧೆಡೆಗಳಿಂದ 7 ಆರೋಪಿಗಳನ್ನು ಬಂಧಿಸಿದೆ. ಬಂಧಿತರಲ್ಲಿ ಮೊಹಮ್ಮದ್ ಲಿಮೋನ್ ಸೊರ್ವಾರ್ (19), ಮೊಹಮ್ಮದ್ ತಾರೆಕ್ ಹುಸೇನ್, ಮೊಹಮ್ಮದ್ ಮಾನಿಕ್ ಮಿಯಾ (20), ಇರ್ಶಾದ್ ಅಲಿ (39), ನಿಜುಮ್ ಉದ್ದೀನ್ (2೦), ಅಲಮ್‌ಗೀರ್ ಹುಸೇನ್ (38) ಮತ್ತು ಮೊಹಮ್ಮದ್ ಮಿರಾಜ್ ಹುಸೇನ್ ಅಕೋನ್ (47) ಸೇರಿದ್ದಾರೆ. ತನಿಖೆ ಮುಂದುವರಿದಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ಈ ಘಟನೆಯನ್ನ ತೀವ್ರವಾಗಿ ಖಂಡಿಸಿರುವ ಯೂನಸ್ ಸರ್ಕಾರ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೂರ್ಣ ಬದ್ಧವಾಗಿದೆ. ತಪ್ಪಿತಸ್ಥರನ್ನ ನ್ಯಾಯದ ಮುಂದೆ ತರಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದಾರೆ. ಈ ಘಟನೆ ಮಾನವತೆಗೆ ವಿರೋಧವಾದ ಅಪರಾಧ ಮಾತ್ರವಲ್ಲ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗುಂಡೇಟಿಗೆ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಬಲಿ – ಬಾಂಗ್ಲಾ ಮತ್ತೆ ಧಗಧಗ
ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಮರಣದ ನಂತರ ಉಂಟಾದ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಗಮನ ಸೆಳೆದಿದೆ. ಸರ್ಕಾರವು ಎಲ್ಲಾ ನಾಗರಿಕರನ್ನ ಹಿಂಸಾಚಾರ, ದ್ವೇಷ ಮತ್ತು ಉತ್ತೇಜನೆಯನ್ನು ತಿರಸ್ಕರಿಸಿ ಶಾಂತಿಯನ್ನು ಕಾಪಾಡುವಂತೆ ಸರ್ಕಾರ ಕರೆ ನೀಡಿದೆ.

ಭಯೋತ್ಪಾದಕ ಗುಂಪುಗಳ ಬಗ್ಗೆ ಎಚ್ಚರ ವಹಿಸಿ
ಇನ್ನೂ ಬಾಂಗ್ಲಾದಲ್ಲಿ ಕೆಲ ಭಯೋತ್ಪಾದಕ ಗುಂಪುಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ ಅನ್ನೋ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆ ನಾಗರಿಕರು ಎಚ್ಚರದಿಂದಿರುವಂತೆ ಬಾಂಗ್ಲಾ ಮಧ್ಯಂತರ ಸರ್ಕಾರ ಸಲಹೆ ನೀಡಿದೆ. ಕೆಲವು ಪ್ರತ್ಯೇಕ ಭಯೋತ್ಪಾದಕ ಗುಂಪುಗಳು ನಡೆಸುತ್ತಿರುವ ಎಲ್ಲಾ ರೀತಿಯ ಹಿಂಸಾಚಾರದ ವಿರುದ್ಧ ಜಾಗರೂಕವಾಗಿರಬೇಕು. ಹಿಂಸಾತ್ಮಕ ಘಟನೆಗಳನ್ನ ನಾವು ಬಲವಾಗಿ ಖಂಡಿಸುತ್ತೇವೆ, ದೇಶದಲ್ಲಿ ಅಶಾಂತಿ ಸೃಷ್ಟಿಸಲು ನಾವು ಬಿಡೋದಿಲ್ಲ ಎಂದು ಹೇಳಿದೆ.
ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?
2024ರ ಡಿ.12ರಂದು ಬಾಂಗ್ಲಾದೇಶ ವಿದ್ಯಾರ್ಥಿ ದಂಗೆಯ ನೇತೃತ್ವವಹಿಸಿದ್ದ ಷರೀಫ್ ಉಸ್ಮಾನ್ ಹಾದಿ ಅವರ ಮೇಲೆ, ಕಳೆದ ವಾರ ಮುಸುಕುಧಾರಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿತ್ತು. ಹಾದಿ ಅವರಿಗೆ ಸಿಂಗಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತೆ ಫಲಕಾರಿಯಾಗದೇ ಹಾದಿ ಮೃತಪಟ್ಟಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಹಿಂಸಾಚಾರ ಭುಗಿಲೆದ್ದಿತ್ತು. ಉಸ್ಮಾನ್ ಹಾದಿ ಭಾರತ ವಿರೋಧಿ ಭಾಷಣಗಳಿಂದ ಹೆಚ್ಚು ಫೇಮಸ್ ಆಗಿದ್ದ.

