ದಾವಣಗೆರೆ: ಕಾಂಗ್ರೆಸ್ (Congress) ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ (Shamanuru Shivashankarappa) ಅಂತ್ಯಸಂಸ್ಕಾರ ಇಂದು ಸಂಜೆ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ನಡೆಯಲಿದೆ.
ವೀರಶೈವ ಲಿಂಗಾಯತ ಸಂಪ್ರದಾಯದಂತೆ ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ.
ಬೆಂಗಳೂರಿನ (Bengaluru) ಸದಾಶಿವನಗರದ ನಿವಾಸದಿಂದ ಮಧ್ಯರಾತ್ರಿ ಹೊರಟಿದ್ದ ಮೃತದೇಹ ಇಂದು ಬೆಳಗ್ಗೆ 4 ಗಂಟೆಯ ವೇಳೆಗೆ ದಾವಣಗೆರೆಗೆ ತಲುಪಿತು. ಮೊದಲು ಹಿರಿಯ ಮಗ ಎಸ್ಎಸ್ ಬಕ್ಕೇಶ್ ನಿವಾಸ ನಂತರ ಎಸ್ ಎಸ್ ಗಣೇಶ ಮನೆ, ಕೊನೆಗೆ ಮೂರನೇ ಮಗ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮನೆಯಲ್ಲಿ ಕಣ್ವೆಕುಪ್ಪೆ ಶ್ರೀ ಗಳ ಸಮ್ಮುಖದಲ್ಲಿ ವಿಧಿ ವಿಧಾನ ನಡೆಯಿತು.
ಮೂರು ಮನೆಗಳಲ್ಲಿ ವಿಧಿ ವಿಧಾನ ಮುಕ್ತಾಯದ ನಂತರ ಶಾಮನೂರು ಶಿವಶಂಕರಪ್ಪ ನಿವಾಸದ ಮುಂಭಾಗ ಸಾರ್ವಜನಿಕ ದರ್ಶನಕ್ಕೆ ಮೃತದೇಹವನ್ನು ಇಡಲಾಗಿದೆ. ಮಧ್ಯಾಹ್ನ 12 ಗಂಟೆಗೆ ಹೈಸ್ಕೂಲ್ ಮೈದಾನದಲ್ಲಿಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ.
ಸಾರ್ವಜನಿಕ ದರ್ಶನ ಮುಕ್ತಾಯವಾದ ನಂತರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಹೈಸ್ಕೂಲ್ ಮೈದಾನದಿಂದ ಕಲ್ಲೇಶ್ವರ ರೈಸ್ ಮಿಲ್‌ವರೆಗೆ ಅಂತಿಮ ಯಾತ್ರೆ ನಡೆಯಲಿದೆ.
ಹಳೇ ಕೋರ್ಟ್ ಮೈದಾನ, ಎಸಿ ಕ್ರಾಸ್ ಎಡಕ್ಕೆ ತಿರುಗಿ ರೇಣುಕಾ ಮಂದಿರ ಸರ್ಕಲ್, ಅರುಣ ಸರ್ಕಲ್, ಹೊಂಡದ ಸರ್ಕಲ್, ದುರ್ಗಾಂಬಿಕ ದೇವಾಸ್ಥಾನ, ಹಗೆದಿಬ್ಬಸರ್ಕಲ್, ಕಾಳಿಕಾಂಬ ದೇವಸ್ಥಾನ ರಸ್ತೆ, ಗ್ಯಾಸ್ ಕಟ್ಟೆ ಸರ್ಕಲ್, ಬಕ್ಕೇಶ್ವರ ದೇವಸ್ಥಾನದ ಮುಂಭಾಗ, ಹಾಸಭಾವಿ ಸರ್ಕಲ್, ಗಣೇಶ ದೇವಸ್ಥಾನ, ಅರಳಿ ಮರ ಸರ್ಕಲ್, ವೆಂಕಟೇಶ್ವರ ಸರ್ಕಲ್ ಮೂಲಕ ಕಲ್ಲೇಶ್ವರ ರೈಸ್ ಮಿಲ್‌ಗೆ ತರಲಾಗುತ್ತದೆ.
ದಾವಣಗೆರೆಯಲ್ಲಿ ಅಭಿವೃದ್ಧಿ ಮಾಡಿರುವ ಶಾಮನೂರು ಅವರಿಗೆ ಗೌರವ ಸಲ್ಲಿಸಲು ನಗರದಲ್ಲಿ ಮೆರವಣಿಗೆ ಮಾಡಬೇಕು ಎನ್ನುವುದು ದಾವಣಗೆರೆ ದಕ್ಷಿಣ ಕ್ಷೇತ್ರದ ಕಾರ್ಯಕರ್ತರು ಅಭಿಮಾನಿಗಳ ಒತ್ತಾಸೆಯಾಗಿತ್ತು. ಅಭಿಮಾನಿಗಳ ಮನವಿಯಂತೆ 15 ಕಿ.ಮೀ ಅಂತಿಮಯಾತ್ರೆ ಮೆರವಣಿಗೆ ಸಾಗಿದ ಬಳಿಕ ಸಂಜೆ 6 ಗಂಟೆಯ ವೇಳೆಗೆ ಅಂತ್ಯಸಂಸ್ಕಾರ ನಡೆಯಲಿದೆ.

