– ಬಸವ ತಾಲಿಬಾನಿ ಪದ ಬಳಕೆಗೆ ವಿಷಾದವಿಲ್ಲ
ಚಿಕ್ಕೋಡಿ: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಲಿಂಗಾಯತ ಸಮಾಜ ಒಡೆಯಬೇಕಿದೆ ಹಾಗೂ ಸಂಘಟಿತರಾಗಿರಬಾರದು ಎಂಬ ಉದ್ದೇಶವಿದೆ ಕನ್ನೇರಿ ಮಠದ (Kanneri Shri) ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಲಿಂಗಾಯತ ಸಮಾಜದಲ್ಲಿ ಬೇಧ ಮಾಡಿ, ಸಮಾಜ ಒಡೆಯಬೇಕಿದೆ. ಲಿಂಗಾಯತ ಸಮಾಜ ಸಂಘಟಿತವಾಗಿರಬಾರದು ಎನ್ನುವ ಉದ್ದೇಶ ಸಿಎಂ ಅವರಿಗಿದೆ. ದೊಡ್ಡದಾದ ಲಿಂಗಾಯತ ಸಮಾಜವನ್ನ ಒಡೆದು ಐದನೇ ಸ್ಥಾನಕ್ಕೆ ತರಬೇಕು. ಸರ್ಕಾರದ ಸೌಲಭ್ಯಗಳು ಈ ಸಮಾಜಕ್ಕೆ ಸಿಗದಂತೆ ಮಾಡುತ್ತಿದ್ದಾರೆ ಎಂದಿದ್ದಾರೆ.ಇದನ್ನೂ ಓದಿ: ಶೌಚಾಲಯ ನಿರ್ಮಾಣವಾಗಿದ್ದರೂ ವಿದ್ಯಾರ್ಥಿನಿಯರಿಗೆ ಬಯಲು ಶೌಚಾಲಯವೇ ಗತಿ!
ವೈಯಕ್ತಿಕವಾಗಿ ಕೆಲವೊಂದು ರಾಜಕೀಯ ಶಕ್ತಿಗಳು ನನ್ನನ್ನ ಟಾರ್ಗೆಟ್ ಮಾಡುತ್ತೀವೆ. ರೌಡಿ ಶೀಟರ್‌ಗಳ ರೀತಿ ನನ್ನನ್ನು ಬ್ಯಾನ್ ಮಾಡಲಾಗುತ್ತಿದೆ. ಚೀಫ್ ಸೆಕ್ರೆಟರಿಗಳಿಂದ ನನ್ನನ್ನು ಬ್ಯಾನ್ ಮಾಡಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ ಪಾಟೀಲ್ ನನ್ನನ್ನ ಟಾರ್ಗೆಟ್ ಮಾಡಿದ್ದಾರೆ. ಬಸವ ತತ್ವ ಹಿಂದೂತ್ವವನ್ನ ಬಿಟ್ಟಿಲ್ಲ. ನಾಲ್ಕು ವಚನ ತೆಗೆದುಕೊಂಡು ಲಿಂಗಾಯತರನ್ನ ಹಿಂದೂ ಧರ್ಮದಿಂದ ಬೇರ್ಪಡಿಸುವ ಹುನ್ನಾರ ತಾಲಿಬಾನಿಗಳು ನಡೆಸಿದ್ದಾರೆ. ಹಿಂದೂ ಧರ್ಮವನ್ನ ಸಣ್ಣ ಸಣ್ಣ ತುಣಕು ಮಾಡುತ್ತಾ ಹೋದರೇ ಈ ದೇಶದಲ್ಲೇ ಹಿಂದೂಗಳೇ ಅಲ್ಪಸಂಖ್ಯಾತರಾಗಬೇಕಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇನ್ನೂ ಇದೇ ವೇಳೆ ಬಸವ ತಾಲಿಬಾನಿ ಪದ ಬಳಕೆಗೆ ವಿಷಾದವಿಲ್ಲ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಅವರು, ತಾಲಿಬಾನಿಗಳು ಅಂದರೆ ಅತಿರೇಕಿಗಳು. ಯಾವುದೇ ವಿಷಯ ಅತಿರೇಕವಾದಲ್ಲಿ ಮಾನವೀಯ ವಿಚಾರಗಳು ಸಂಕುಚಿತವಾಗುತ್ತವೆ. ಮೊಟಕುಗೊಳ್ಳುತ್ತವೆ ಅದು ಆಗಬಾರದು. ಬಸವಣ್ಣನವರ ಹೆಸರು ಹೇಳಿಕೊಂಡು ಕೆಲವು ಜನ ಧರ್ಮದ ದೃಷ್ಟಿಯಿಂದ, ಸಂಸ್ಕಾರದ ದೃಷ್ಟಿಯಿಂದ ಆಚರಣೆಗಳನ್ನು ಕಡಿಮೆ ಮಾಡಲು ಪ್ರಯತ್ನ ಮಾಡುತ್ತಾರೆ. ತಾಲಿಬಾನಿಗಳು ಅನ್ನುವ ಪದಕ್ಕೆ ಯಾವುದೇ ವಿಷಾದವಿಲ್ಲ. ಅವರು ಮಾಡುತ್ತಿರುವುದು ಅದೇ, ಅದನ್ನು ಮಾಡುವವರಿಗೆ ಮತ್ತೇನು ಅನ್ನಬೇಕು? ಕುಂಬಳಕಾಯಿ ಕಳ್ಳ ಎಂದರೆ ಹೆಗಲಮುಟ್ಟಿಕೊಂಡು ನೋಡುವರು ಬಹಳ ಜನ ಇದ್ದಾರೆ. ಇದ್ದದ್ದು ಇದ್ದಂಗೆ ಹೇಳಿದರೆ ಕೆಲವರಿಗೆ ಎದೆಗೆ ಬಂದು ಒದ್ದಂಗಾಗುತ್ತದೆ ಅನ್ನುತ್ತಾರೆ ಎಂದಿದ್ದಾರೆ.
ಬಸವಣ್ಣನವರ ತತ್ವಗಳನ್ನು ಆಚರಿಸುವವರು ಈ ನಾಡಿನಲ್ಲಿ ತುಂಬಾ ಜನ ಇದ್ದಾರೆ. ಆದರೆ ಬೆರಳೆಣಿಕೆಯಷ್ಟು ಕೆಲವು ಜನ ತಾಲಿಬಾನಿಗಳ ರೀತಿ ನಡೆದುಕೊಳ್ಳುತ್ತಿದ್ದಾರೆ. ಕೇವಲ ಬಸವಣ್ಣನವರ ವಚನವನ್ನೇ ಓದಬೇಕು. ಶರಣರ ತತ್ವಗಳು ಪಾಲಿಸಬೇಕು. ಉಳಿದ ತತ್ವಗಳನ್ನು ಓದಬಾರದು. ಕೇವಲ ವಚನ ಸಾಹಿತ್ಯವನ್ನೇ ಓದಬೇಕು. ಬೇರೆ ಸಾಹಿತ್ಯ ಓದಬಾರದು. ಶರಣನ್ನು ವೇದಗಳ ವಿರೋಧಿಗಳೆಂದು ಸಿದ್ಧ ಮಾಡಲು ಹೊರಟಿರುತ್ತಾರೆ. ಶರಣರು ಯಾವ ವೇದ ವಿರೋಧಿಗಳು ಅಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಮಾಂಜ್ರಾನದಿಯಲ್ಲಿ ಎಗ್ಗಿಲ್ಲದೆ ನಡೀತಿದೆ ಮರಳು ಮಾಫಿಯಾ – ಅಧಿಕಾರಿಗಳೇ ದಂಧೆಕೋರರ ಜೊತೆ ಶಾಮೀಲು?

