– ಋತುರಾಜ್, ವಿರಾಟ್ ಶತಕಗಳ ಅಬ್ಬರ ವ್ಯರ್ಥ
ರಾಯ್ಪುರ: ಕಳಪೆ ಫೀಲ್ಡಿಂಗ್, ಬೌಲಿಂಗ್‌ಗೆ ಭಾರತ ಬೆಲೆತೆತ್ತಿದೆ. ಏಡನ್ ಮಾರ್ಕ್ರಂ (Aiden Markram) ಅಮೋಘ ಶತಕದ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ (South Africa) 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ರಲ್ಲಿ ಸಮಬಲ ಸಾಧಿಸಿದೆ.
ರಾಯ್ಪುರದಲ್ಲಿ (Raipur) ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಸೋತ ಭಾರತ (Team India) ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿತ್ತು. ಗೆಲುವಿಗೆ 359 ರನ್‌ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ 49.2 ಓವರ್‌ಗಳಲ್ಲೇ 6 ವಿಕೆಟ್ ನಷ್ಟಕ್ಕೆ 362 ರನ್ ಸಿಡಿಸಿ ಗೆಲುವು ಸಾಧಿಸಿತು.

ನಿಲ್ಲದ ಜೊತೆಯಾಟ
ಚೇಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಪಡೆದು ಆಘಾತ ನೀಡಿತ್ತು. ಆದ್ರೆ 2ನೇ ವಿಕೆಟ್‌ಗೆ ನಾಯಕ ಟೆಂಬಾ ಬವುಮಾ-ಮಾರ್ಕ್ರಂ 101 ರನ್‌ಗಳ (96 ಎಸೆತ) ಜೊತೆಯಾಟ, 3ನೇ ವಿಕೆಟಿಗೆ ಮಾರ್ಕ್ರಂ-ಬ್ರೀಟ್ಜ್ಕೆ 70 ರನ್‌ಗಳ ಜೊತೆಯಾಟ, 4ನೇ ವಿಕೆಟಿಗೆ ಬ್ರೀಟ್ಜ್ಕೆ-ಡೇವಾಲ್ಡ್ ಬ್ರೇವಿಸ್ (Dewald Brevis) 92 ರನ್‌ಗಳ ಬೃಹತ್ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಅಲ್ಲದೇ ರನೌಟ್, ಕ್ಯಾಚ್ ಕೈಚೆಲ್ಲಿದ ಜೊತೆಗೆ ಅನಗತ್ಯ ರನ್ ಬಿಟ್ಟುಕೊಟ್ಟ ಪರಿಣಾಮ ಗೆಲುವು ದಕ್ಷಿಣ ಆಫ್ರಿಕಾದ ಪಾಲಾಯಿತು.
ದಕ್ಷಿಣ ಆಫ್ರಿಕಾ ಪರ ಏಡನ್ ಮಾರ್ಕ್ರಂ 110 ರನ್ (98 ಎಸೆತ, 4 ಸಿಕ್ಸ್, 10 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 68 ರನ್ (64 ಎಸೆತ, 5 ಬೌಂಡರಿ), ಡೇವಾಲ್ಡ್ ಬ್ರೇವಿಸ್ 54 ರನ್ (34 ಎಸೆತ, 5 ಸಿಕ್ಸ್), ಟೋನಿ ಡಿ ಜೋರ್ಜಿ 17 ರನ್, ಕ್ವಿಂಟನ್ ಡಿಕಾಕ್ 8 ರನ್, ಮಾರ್ಕೋ ಜಾನ್ಸೆನ್ 2 ರನ್ ಗಳಿಸಿದ್ರೆ ಕಾರ್ಬಿನ್ ಬಾಷ್ 15 ಎಸೆತಗಳಲ್ಲಿ ಸ್ಫೋಟಕ 29 ರನ್, ಕೇಶವ್ ಮಹಾರಾಜ್ 10 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲದೇ ವೈಡ್, ನೋಬಾಲ್, ಲೆಗ್‌ಬೈಸ್‌ನಿಂದ 18 ರನ್ ಹೆಚ್ಚುವರಿಯಾಗಿ ತಂಡಕ್ಕೆ ಸೇರ್ಪಡೆಯಾಯಿತು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 358 ರನ್ ಸಿಡಿಸಿತ್ತು. ಹಿಟ್ ಮ್ಯಾನ್ ರೋಹಿತ್ ವಿಕೆಟ್ ಬೇಗನೇ ಸಿಕ್ಕಿತೆಂದು ನಿಟ್ಟುಸಿರು ಬಿಟ್ಟಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಅನಿರೀಕ್ಷಿತ ಆಘಾತ ನೀಡಿದರು. ಋತುರಾಜ್ ಅವರು ತಮ್ಮ ಏಕದಿನ ಅಂತಾರಾಷ್ಟ್ರೀಯ ವೃತ್ತಿ ಜೀವನದ ಪ್ರಥಮ ಶತಕ ಗಳಿಸಿದ್ರೆ, ವಿರಾಟ್ ಕೊಹ್ಲಿ ಅವರು ಈ ಸರಣಿಯಲ್ಲಿ ಸತತ 2 ಶತಕ ಮತ್ತು ಏಕದಿನ ಕ್ರಿಕಟ್ ನ 53ನೇ ಶತಕ ಗಳಿಸಿದರು. ಕೊನೆಯಲ್ಲಿ ಕೆ.ಎಲ್ ರಾಹುಲ್ ಅವರ ಸ್ಫೋಟಕ ಅರ್ಧಶತಕದ ಪರಿಣಾಮ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 358 ರನ್ ಗಳನ್ನು ಕಲೆ ಹಾಕಿತು.
ಋತು-ವಿರಾಟ್ ಶತಕಗಳ ಅಬ್ಬರ
ಇವರಿಬ್ಬರು 3ನೇ ವಿಕೆಟ್ ಗೆ ಅಮೂಲ್ಯ 195 ರನ್ ಗಳ ಜೊತೆಯಾಟವಾಡಿದರು. ಇದು ಭಾರತ ತಂಡದ ಇನ್ನಿಂಗ್ಸ್ ಗೆ ಭದ್ರ ಬುನಾದಿ ಹಾಕಿತು. ಕ್ರೀಸ್‌ಗೆ ಬಂದೊಡನೆ ಮೊದಲನೇ ಎಸೆತವನ್ನೇ ಬೌಂಡರಿಗಟ್ಟಿದ ಋತುರಾಜ್ (Ruturaj Gaikwad) ಅವರು ಕೇವಲ 77 ಎಸೆತಗಳಲ್ಲೇ ಶತಕ ಪೂರೈಸಿದರು. ಅದರಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದವು. ಅಂತಿಮವಾಗಿ ಅವರು 83 ಎಸೆತಗಳಿಂದ 105 ರನ್ ಗಳಿಸಿ ಔಟಾದರು. ಋತುರಾಜ್ ಗಾಯಕ್ವಾಡ್ ಔಟಾದ ಬಳಿಕ ವಿರಾಟ್ ಕೊಹ್ಲಿ (Virat Kohli) ಅವರು ತಮ್ಮ ಬ್ಯಾಟಿಂಗ್ ಮುಂದುವರಿಸಿ 39ನೇ ಓವರ್ ನಲ್ಲಿ 90 ಎಸೆತಗಳಿಗೆ ಶತಕ ಪೂರೈಸಿದರು.

ನಿರಾಸೆ ಮೂಡಿಸಿದ ಜೈಸ್ವಾಲ್- ರೋಹಿತ್
ಇನ್ನೂ ಭಾರತ ತಂಡದ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಕೆಲ ಉತ್ತಮ ಹೊಡೆತಗಳನ್ನ ಹೊಡೆದು ಪ್ರೇಕ್ಷಕರನ್ನು ರಂಜಿಸಿದರಾದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲರಾಗಲಿಲ್ಲ. ನಾಂಡ್ರೆ ಬರ್ಗರ್ ಬೌಲಿಂಗ್ ನಲ್ಲಿ ಸತತ 3 ಬೌಂಡರಿ ಬಾರಿಸಿದ್ದ ರೋಹಿತ್ ಶರ್ಮಾ ಅವರು 4ನೇ ಎಸೆತದಲ್ಲಿ ಎಡವಿ ಕೀಪರ್ ಡಿಕಾಕ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ 22 ರನ್ ಗಳಿಸಿದ್ದ ಜೈಸ್ವಾಲ್ ಅವರು ಮಾರ್ಕೋ ಜಾನ್ಸೆನ್ ಬೌಲಿಂಗ್ ನಲ್ಲಿ ಬಾಷ್ ಗೆ ಕ್ಯಾಚ್ ನೀಡಿ ಔಟಾದರು.
ಇಲ್ಲಿಂದ ಬಳಿಕ ಒಂದಾದ ಋತುರಾಜ್ – ಕೊಹ್ಲಿ ತಂಡಕ್ಕೆ ಭದ್ರಬುನಾದಿ ಹಾಕಿದರು. ಪರಿಣಾಮ ಭಾರತ ತಂಡ ಕೇವಲ 29.5 ಓವರ್ ಗಳಲ್ಲೇ 200ರ ಗಟಿ ದಾಟಿತು. ಅಂತಿಮ ಹಂತದಲ್ಲಿ ನಾಯಕ ಕೆ.ಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರು ಮುರಿಯದ 6ನೇ ವಿಕೆಟ್‌ಗೆ 69 ರನ್ ಗಳ ಜೊತೆಯಾವಾಡಿದರು. ಕೆ.ಎಲ್ ರಾಹುಲ್ ಅವರು 43 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 66 ರನ್ ಗಳಿಸಿದ್ರೆ, ರವೀಂದ್ರ ಜಡೇಜಾ 27 ಎಸೆತಗಳಲ್ಲಿ 2 ಬೌಂಡರಿ ಸೇರಿ 24 ರನ್ ಗಳಿಸಿದರು.

