ಕೆಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಸಮಗ್ರವಾಗಿ ಪರಿಷ್ಕರಿಸಿದ್ದು, 29 ಹಳೆಯ ಕಾರ್ಮಿಕ ಕಾನೂನುಗಳನ್ನು ಬದಲಿಸಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಈ ಕಾರ್ಮಿಕ ಸಂಹಿತೆ ನ.21ರಿಂದ ಜಾರಿಗೆ ಬಂದಿದ್ದು, ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಹಾಗಿದ್ರೆ ಹೊಸ ಕಾರ್ಮಿಕ ಸಂಹಿತೆ ಏನು ಹೇಳುತ್ತೆ? ಈ ಸಂಹಿತೆಯಲ್ಲಿ ಕಾರ್ಮಿಕರಿಗೆ ಸಿಗುವ ಸವಲತ್ತುಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಕಾರ್ಮಿಕ ಸಂಹಿತೆ:
ಈ ಮೊದಲಿನ 29 ಕಾರ್ಮಿಕ ಕಾಯ್ದೆಗಳ ಬದಲಾಗಿ ಈ ಹೊಸ 4 ಸಂಹಿತೆಗಳು ಅನುಷ್ಠಾನಗೊಳಿಸಲಾಗಿದೆ. ಕಾರ್ಮಿಕರಿಗೆ ಸಂಬಂಧಿಸಿದ ವಿವಿಧ ಕಾನೂನುಗಳನ್ನು ಆಧುನಿಕ ಚೌಕಟ್ಟಿನೊಂದಿಗೆ ಈ ಸಂಹಿತೆಯಲ್ಲಿ ಒಗ್ಗೂಡಿಸಲಾಗಿದೆ. ಈ ಹೊಸ ಸಂಹಿತೆಗಳ ಮೂಲಕ ಕಾರ್ಮಿಕ ನಿಯಮಗಳನ್ನು ಆಧುನೀಕರಿಸಿ, ಕಾರ್ಮಿಕರ ಕಲ್ಯಾಣವನ್ನು ವೃದ್ಧೀಸುವ ಮತ್ತು ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳುತ್ತಿರುವ ಕಾರ್ಮಿಕ ಪೂರಕ ವ್ಯವಸ್ಥೆಯನ್ನು ನಿರ್ಮಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಎಲ್ಲ ಉದ್ಯೋಗದಾತರು ಕಡ್ಡಾಯವಾಗಿ ನೇಮಕಾತಿ ಪತ್ರಗಳನ್ನು ನೀಡಬೇಕು. ಪ್ರತಿ ತಿಂಗಳು 7ನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು. ಯಾವುದೇ ಉದ್ಯೋಗವಾದರೂ ಮಹಿಳೆಯರಿಗೆ ರಾತ್ರಿಪಾಳಿ ಕೆಲಸಗಳಿಗೆ ಅವಕಾಶ ಹಾಗೂ ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. 40 ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲ ಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಬೇಕು ಎನ್ನುವುದು ಹೊಸ ಕಾರ್ಮಿಕ ಸಂಹಿತೆಗಳ ಪ್ರಮುಖ ಸಂಗತಿಗಳಾಗಿವೆ.
4 ಕಾರ್ಮಿಕ ಸಂಹಿತೆ ಯಾವುದು?
ವೇತನ ಸಂಹಿತೆ, 2019:
ದೇಶದ ಪ್ರತಿಯೊಬ್ಬ ಕಾರ್ಮಿಕನಿಗೂ ಈ ಸಂಹಿತೆ ಕನಿಷ್ಠ ವೇತನವನ್ನು ಖಚಿತಪಡಿಸುತ್ತದೆ. ಕೃಷಿ, ಕಾರ್ಖಾನೆ ಅಥವಾ ವಡಿಜಿಟಲ್ ವೇದಿಕೆಯೇ ಆಗಿರಲಿ ಪ್ರತಿಯೊಬ್ಬ ಕಾರ್ಮಿಕನಿಗೂ ಕನಿಷ್ಠ ವೇತನವನ್ನು ನೀಡಬೇಕು. ಜೊತೆಗೆ ಕನಿಷ್ಟ ವೇತನದ ಹಕ್ಕನ್ನೂ ಇದು ಖಾತ್ರಿಪಡಿಸುತ್ತದೆ.
ರಾಷ್ಟ್ರಮಟ್ಟದಲ್ಲಿ ಕನಿಷ್ಠ ವೇತನವನ್ನು ಕೇಂದ್ರ ಸರ್ಕಾರ ನಿಗದಿಪಡಿಸಲಿದೆ.ಅದಕ್ಕಿಂತ ಕಡಿಮೆ ವೇತನವನ್ನು ಯಾವುದೇ ರಾಜ್ಯ ನಿಗದಿಪಡಿಸುವಂತಿಲ್ಲ. ವೇತನದ ಸಕಾಲಿಕ ಪಾವತಿ ಈಗ ಕಾನೂನುಬದ್ಧವಾಗಿ ಕಡ್ಡಾಯವಾಗಿದೆ. ಒಟ್ಟು ವೇತನದ 50% ಅನ್ನು ಮೂಲ ವೇತನ ಎಂದು ಪರಿಗಣಿಸಿ ಉಳಿದ ವೇತನ ಭವಿಷ್ಯ ನಿಧಿ, ಗ್ರಾಚ್ಯುಟಿ ಮತ್ತು ಪಿಂಚಣಿ ಸೇರಲಿದೆ.
2) ಕೈಗಾರಿಕಾ ಸಂಪರ್ಕ ಸಂಹಿತೆ, 2020
ಈ ಸಂಹಿತೆಯು ನೇಮಕಾತಿ, ವಜಾ, ಮುಷ್ಕರಗಳು ಮತ್ತು ಟ್ರೇಡ್ ಯೂನಿಯನ್‌ಗಳ ನಿಯಮಗಳನ್ನು ಮರುರೂಪಿಸುತ್ತದೆ.
ವಜಾಗೊಳಿಸುವ ನಿಯಮಗಳು:
300 ಉದ್ಯೋಗಿಗಳವರೆಗಿನ ಕಂಪನಿಗಳು ಈಗ ಸರ್ಕಾರಿ ಅನುಮತಿಯಿಲ್ಲದೆ ಕಾರ್ಮಿಕರನ್ನು ವಜಾ ಮಾಡಬಹುದು. ಈ ಹಿಂದಿನ ಮಿತಿ 100 ಆಗಿತ್ತು.
ನಿಶ್ಚಿತ ಅವಧಿಯ ಉದ್ಯೋಗ:
ಗುತ್ತಿಗೆ ಆಧಾರಿತ ಕಾರ್ಮಿಕರು ಈಗ ಶಾಶ್ವತ ಸಿಬ್ಬಂದಿಯಂತೆಯೇ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಾರೆ.
ಗ್ರಾಚ್ಯುಟಿ ಅರ್ಹತೆ:
ಕೇವಲ ಒಂದು ವರ್ಷದ ಸೇವೆಯ ನಂತರ ಗ್ರಾಚ್ಯುಟಿ ಪಾವತಿಗೆ ಅರ್ಹರಾಗುತ್ತಾರೆ. ಹಿಂದೆ ಇದು ಐದು ವರ್ಷಗಳಾಗಿತ್ತು..
3. ಸಾಮಾಜಿಕ ಭದ್ರತಾ ಸಂಹಿತೆ, 2020
ಈ ಸಂಹಿತೆಯು ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.
ಸಾರ್ವತ್ರಿಕ ವ್ಯಾಪ್ತಿ:
ಮೊದಲ ಬಾರಿಗೆ, ಗಿಗ್ ಕಾರ್ಮಿಕರು, ಪ್ಲಾಟ್‌ಫಾರ್ಮ್ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಉದ್ಯೋಗಿಗಳನ್ನು ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ತರಲಾಗಿದೆ.
ವಿಸ್ತೃತ ಪ್ರಯೋಜನಗಳು:
ಇಪಿಎಫ್, ಇಎಸ್‌ಐಸಿ, ವಿಮೆ, ಹೆರಿಗೆ ರಜೆ ಮತ್ತು ಪಿಂಚಣಿಯಂತಹ ಪ್ರಯೋಜನಗಳು ಹಿಂದೆ ಹೊರಗುಳಿದಿದ್ದ ಕಾರ್ಮಿಕರಿಗೂ ಲಭ್ಯವಾಗುತ್ತವೆ.
ಸಂಯೋಜಕರ ಕೊಡುಗೆ:
ಆಹಾರ ವಿತರಣೆ ಮತ್ತು ರೈಡ್-ಹೇಲಿಂಗ್‌ನಂತಹ ಸಂಯೋಜಕ ವೇದಿಕೆಗಳು ತಮ್ಮ ವಾರ್ಷಿಕ ವಹಿವಾಟಿನ 1-2% ರಷ್ಟು ಸಾಮಾಜಿಕ ಭದ್ರತಾ ನಿಧಿಗೆ ಕೊಡುಗೆ ನೀಡಬೇಕು.
4. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳ ಸಂಹಿತೆ, 2020
ಈ ಸಂಹಿತೆಯು ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತು ಆರೋಗ್ಯ ಮಾನದಂಡಗಳನ್ನು ಕಡ್ಡಾಯಗೊಳಿಸುತ್ತದೆ.
ಸುರಕ್ಷಿತ ವಾತಾವರಣ:
ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸುವುದು ಕಡ್ಡಾಯವಾಗಿದೆ.
ಕೆಲಸದ ಸಮಯ:
ಕೆಲಸದ ಅವಧಿಯನ್ನು ದಿನಕ್ಕೆ 8-12 ಗಂಟೆಗಳಿಗೆ ಮತ್ತು ವಾರಕ್ಕೆ 48 ಗಂಟೆಗಳಿಗೆ ಮಿತಿಗೊಳಿಸಲಾಗಿದೆ.
ಆರೋಗ್ಯ ತಪಾಸಣೆ:
40 ವರ್ಷಕ್ಕಿಂತ ಮೇಲ್ಪಟ್ಟ ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳನ್ನು ಕಡ್ಡಾಯಗೊಳಿಸಲಾಗಿದೆ.
ಮಹಿಳಾ ಕಾರ್ಮಿಕರಿಗೆ ಅವಕಾಶ:
ಮಹಿಳೆಯರು ತಮ್ಮ ಒಪ್ಪಿಗೆ ಮತ್ತು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಈಗ ಎಲ್ಲಾ ಕೈಗಾರಿಕೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಹುದು..
180 ದಿನಗಳ ನಂತರ ಪಾವತಿಸಿದ ರಜೆ:
ಇಲ್ಲಿಯವರೆಗೆ, ವಾರ್ಷಿಕ ವೇತನ ರಜೆಗೆ ಅರ್ಹತೆ ಪಡೆಯುವ ಮೊದಲು ನೌಕರರು ಕ್ಯಾಲೆಂಡರ್ ವರ್ಷದಲ್ಲಿ 240 ಕೆಲಸದ ದಿನಗಳನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ ಇನ್ಮುಂದೆ ಇಷ್ಟು ದಿನಗಳ ಅಗತ್ಯವಿರುವುದಿಲ್ಲ. ಹೊಸ ಸಂಹಿತೆಗಳು ಆ ಅಗತ್ಯವನ್ನು 180 ದಿನಗಳಿಗೆ ಕಡಿತಗೊಳಿಸಿವೆ. ಅಂದರೆ, ವರ್ಷದಲ್ಲೇ ಬಹಳ ಮೊದಲೇ ಕೆಲಸಗಾರ ರಜೆಗೆ ಅರ್ಹನಾಗುತ್ತಾನೆ, ಉತ್ಪಾದನೆ, ಜವಳಿ, ಚಿಲ್ಲರೆ ವ್ಯಾಪಾರ, ನಿರ್ಮಾಣ ಮತ್ತು ಹಾಜರಾತಿ ನಿಯಮಗಳು ಸಾಂಪ್ರದಾಯಿಕವಾಗಿ ಕಠಿಣವಾಗಿದ್ದ ಇತರ ವಲಯಗಳಲ್ಲಿನವರಿಗೆ ಇದು ದೊಡ್ಡ ಬದಲಾವಣೆಯಾಗಿದೆ.
ಈ ಕಡಿಮೆ ಮಿತಿ, ಹೆಚ್ಚು ಹೊಂದಿಕೊಳ್ಳುವ ಕೆಲಸದ ಸಮಯದ ರಚನೆಯೊಂದಿಗೆ, ಕಾರ್ಮಿಕರಿಗೆ ಸಾಕಷ್ಟು ವಿಶ್ರಾಂತಿ ಮತ್ತು ಚೇತರಿಕೆ ಒದಗಿಸುವ ಗುರಿಯನ್ನು ಹೊಸ ನಿಯಮ ಹೊಂದಿದೆ. ಇದು ದೀರ್ಘಾವಧಿಯಲ್ಲಿ ಉತ್ಪಾದಕತೆ ಮತ್ತು ಕೆಲಸದ ತೃಪ್ತಿಯನ್ನು ಸುಧಾರಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೆಲಸದ ಸಮಯ ಮತ್ತು ಹೆಚ್ಚುವರಿ ಸಮಯ:
ಸಾಮಾನ್ಯ ಕೆಲಸದ ಸಮಯ ದಿನಕ್ಕೆ 8 ಗಂಟೆಗಳು ಮತ್ತು ವಾರಕ್ಕೆ 48 ಗಂಟೆಗಳಿಗೆ ಸೀಮಿತವಾಗಿದೆ. ಇನ್ನು ಓವರ್‌ಟೈಮ್ ಕೆಲಸ ಮಾಡಲು ಇನ್ಮುಂದೆ ಕೆಲಸಗಾರನ ಒಪ್ಪಿಗೆ ಅಗತ್ಯವಿರುತ್ತದೆ ಮತ್ತು ಅಧಿಕಾವಧಿ ಕೆಲಸಕ್ಕೆ 2 ಪಟ್ಟು ವೇತನ ದರವನ್ನು ಉದ್ಯೋಗದಾತರು ಪಾವತಿ ಮಾಡಬೇಕು. ಇದು ಕಾರ್ಮಿಕರಿಗೆ ಆಯಾಸ-ಸಂಬಂಧಿತ ಅಪಾಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಅಧಿಕಾವಧಿ ಮೂಲಕ ಹೆಚ್ಚಿನದನ್ನು ಗಳಿಸುವ ಆಯ್ಕೆಯನ್ನು ನೀಡುತ್ತದೆ.
ಎಲ್ಲಾ ಕೆಲಸಗಾರರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳು:
ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಆರೋಗ್ಯ ಮತ್ತು ವೈದ್ಯಕೀಯ ವಿಮಾ ರಕ್ಷಣೆ. 40 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಉದ್ಯೋಗಿ ಈಗ ಉಚಿತ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಪಡೆಯುತ್ತಾರೆ. ಇದು ತಡೆಗಟ್ಟುವ ಆರೋಗ್ಯ ರಕ್ಷಣೆಯತ್ತ ವ್ಯಾಪಕವಾದ ಒತ್ತು ನೀಡುವ ಭಾಗವಾಗಿದೆ, ವಿಶೇಷವಾಗಿ ದೀರ್ಘಾವಧಿ, ಅಪಾಯಕಾರಿ ಪರಿಸರಗಳು ಅಥವಾ ದೈಹಿಕ ಒತ್ತಡ ಸಾಮಾನ್ಯವಾಗಿರುವ ವಲಯಗಳಲ್ಲಿ.
ಕೈಗಾರಿಕೆಗಳು ಸಹ ಇದರಿಂದ ಪ್ರಯೋಜನ ಪಡೆಯಲಿವೆ. ಗೈರುಹಾಜರಿ ಕಡಿಮೆಯಾಗುವುದು, ಆರೋಗ್ಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚುವುದು ಮತ್ತು ದೀರ್ಘಕಾಲೀನ ವೈದ್ಯಕೀಯ ವೆಚ್ಚಗಳನ್ನು ಕಡಿಮೆ ಮಾಡುವುದು ಸರ್ಕಾರ ಗುರಿಯಾಗಿದೆ.
ಕಾರ್ಮಿಕ ಸಂಹಿತೆಯ ಅನುಷ್ಠಾನ ಹೇಗೆ?
ಈ ನಾಲ್ಕು ಸಂಹಿತೆಗಳು ಸಂಸತ್ತಿನಲ್ಲಿ 2019 ಮತ್ತು 2020 ರಲ್ಲಿಯೇ ಅಂಗೀಕಾರಗೊಂಡಿದ್ದವು. ಆದರೆ, ಕಾರ್ಮಿಕ ವಿಷಯವು ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ನಿಯಮಗಳನ್ನು ಅಂತಿಮಗೊಳಿಸಬೇಕಾಗಿತ್ತು. ವರ್ಷಗಳ ಸಮಾಲೋಚನೆಯ ನಂತರ, ಕೇಂದ್ರ ಸರ್ಕಾರವು ಅಂತಿಮವಾಗಿ ನವೆಂಬರ್ 21, 2025 ರಂದು ಸಂಹಿತೆಗಳನ್ನು ಅಧಿಸೂಚನೆ ಹೊರಡಿಸಿತು. ಅಧಿಸೂಚನೆಯೊಂದಿಗೆ, ಈ ಸಂಹಿತೆಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ. ಮುಂದಿನ 45 ದಿನಗಳಲ್ಲಿ ರಾಜ್ಯಗಳು ತಮ್ಮದೇ ಆದ ನಿಯಮಗಳನ್ನು ಪ್ರಕಟಿಸಬೇಕಿದೆ. ಪರಿವರ್ತನೆಯ ಈ ಅವಧಿಯಲ್ಲಿ, ಅಸ್ತಿತ್ವದಲ್ಲಿರುವ ಹಳೆಯ ನಿಯಮಗಳು ಜಾರಿಯಲ್ಲಿ ಮುಂದುವರಿಯುತ್ತವೆ.
ನೂತನ ಕಾರ್ಮಿಕ ಸಂಹಿತೆಯ ಪ್ರಯೋಜನಗಳೇನು?
ಕಾರ್ಮಿಕ ಸಂಹಿತೆಗಳು, ವಾಸ್ತವವಾಗಿ, ಉದ್ಯೋಗದಾತರ ನಿರೀಕ್ಷೆಗಳನ್ನು ಸಮತೋಲನಗೊಳಿಸುವದರೊಂದಿಗೆ ಕಾರ್ಮಿಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತವೆ. ಅವು ತಡೆಗಟ್ಟುವ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುತ್ತವೆ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುತ್ತವೆ. ಅವು ಆಡಿಯೋ-ವಿಶುವಲ್ ಕೆಲಸಗಾರರು ಮತ್ತು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರಿಗೆ ಔಪಚಾರಿಕ ಮಾನ್ಯತೆಯನ್ನು ಒದಗಿಸುತ್ತವೆ. ಅವು ಭಾರತದಾದ್ಯಂತ ಇ.ಎಸ್.ಐ.ಸಿ ವ್ಯಾಪ್ತಿಯನ್ನು ಸಕ್ರಿಯಗೊಳಿಸುತ್ತವೆ, ಹಿಂದೆ ಹೊರಗಿಡಲಾದ ಪ್ಲಾಂಟೇಷನ್ ಕೆಲಸಗಾರರನ್ನು ಒಳಗೊಂಡಂತೆ 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಕಾರ್ಮಿಕರಿಗೆ ವಾರ್ಷಿಕ ಆರೋಗ್ಯ ತಪಾಸಣೆಗಳನ್ನು ಕಡ್ಡಾಯಗೊಳಿಸುತ್ತವೆ ಮತ್ತು ರಾಜ್ಯಗಳಾದ್ಯಂತ ವ್ಯತ್ಯಾಸಗಳನ್ನು ಕಡಿಮೆ ಮಾಡಲು ಎಲ್ಲಾ ಕಾರ್ಮಿಕರಿಗೆ ಶಾಸನಬದ್ಧ ಕನಿಷ್ಠ ವೇತನವನ್ನು ಖಾತರಿಪಡಿಸುತ್ತವೆ. ಕಡ್ಡಾಯ ನೇಮಕಾತಿ ಪತ್ರಗಳು, ದೃಢೀಕೃತ ವೇತನ ಚೀಟಿಗಳು ಮತ್ತು ಪಾವತಿಸಿದ ವಾರ್ಷಿಕ ರಜೆಯಂತಹ ನಿಯಮಗಳು ಪ್ರತಿಯೊಬ್ಬ ಕೆಲಸಗಾರನಿಗೆ ಹೆಚ್ಚಿನ ಸ್ಥಿರತೆ, ಘನತೆ ಮತ್ತು ಭದ್ರತೆಯನ್ನು ಒದಗಿಸುತ್ತವೆ
ಹೊಸ ಕಾರ್ಮಿಕ ಸಂಹಿತೆಯ ಅಗತ್ಯವೇನು?
ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಬಹುತೇಕ ಕಾರ್ಮಿಕ ಕಾನೂನುಗಳು ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ದೇಶದಲ್ಲಿ ಉದ್ಯಮಗಳು ಆರಂಭವಾಗುತ್ತಿದ್ದ ಹಂತದಲ್ಲಿ ರೂಪಿಸಿದಂಥವು. ಜಗತ್ತಿನ ಮುಂದುವರಿದ ಆರ್ಥಿಕತೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿದ್ದರೂ ಭಾರತದಲ್ಲಿ ಹಳೆಯ ನಿಯಮಗಳೇ ಚಾಲ್ತಿಯಲ್ಲಿದ್ದವು. ವಸಾಹತುಶಾಹಿ ನೆರಳಿನಿಂದ ಹೊರಬಂದು ಉದ್ಯಮ ರಂಗದ ಅಗತ್ಯಕ್ಕೆ ತಕ್ಕಂತೆ ಉದ್ಯಮಿ ಮತ್ತು ಕಾರ್ಮಿಕರ ಇಬ್ಬರ ಹಿತವನ್ನು ಕಾಯುವಂತೆ ಹೊಸ ನಿಯಮಗಳನ್ನು ರೂಪಿಸುವುದು ಅಗತ್ಯವಾಗಿತ್ತು. ಈ ಹಿನ್ನೆಲೆ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲಾಗಿದೆ.ಸದ್ಯದ ಮತ್ತು ಭವಿಷ್ಯದ ತಾಂತ್ರಿಕ ಹಾಗೂ ಆರ್ಥಿಕ ಬೆಳವಣಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಆತ್ಮನಿರ್ಭರ ಭಾರತಕ್ಕಾಗಿ ಕಾರ್ಮಿಕ ಪಡೆಯನ್ನು ಸಿದ್ಧಗೊಳಿಸಲು ಈ ನಾಲ್ಕು ಸಂಹಿತೆಗಳು ನೆರವಾಗಲಿವೆ ಎಂದು ಕೇಂದ್ರ ಹೇಳಿದೆ.



