– ಬಸವರಾಜನ್ ಜಿದ್ದು; ಸಂತ್ರಸ್ತೆಯರ ಪಿತೂರಿ
– ಚಿತ್ರದುರ್ಗದ ಸೆಷನ್ಸ್ ಕೋರ್ಟ್ ತೀರ್ಪು
ಚಿತ್ರದುರ್ಗ: ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶರಣರಿಗೆ (Shivamurthy Murugha Sharanaru) ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ (District Court Chitradurga) ಬಿಗ್ ರಿಲೀಫ್ ನೀಡಿದೆ.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪೋಕ್ಸೋದ (POCSO Case) ಮೊದಲ ಪ್ರಕರಣದಲ್ಲಿ ಎ1 ಮುರುಘಾ ಶ್ರೀ, ಎ2 ವಾರ್ಡನ್ ರಶ್ಮಿ, ಎ4 ಮ್ಯಾನೇಜರ್ ಪರಮಶಿವಯ್ಯ ಮೇಲಿನ ಆರೋಪಗಳಿಂದ ಕೋರ್ಟ್ ಖುಲಾಸೆಗೊಳಿಸಿದೆ.
2022ರ ಆಗಸ್ಟ್ 31 ರಂದು ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮುರುಘಾಶ್ರೀ, ಲೇಡಿ ವಾರ್ಡನ್ ರಶ್ಮಿ, ಬಸವಾದಿತ್ಯ, ಮ್ಯಾನೇಜರ್ ಪರಮಶಿವಯ್ಯ ಹಾಗೂ ವಕೀಲ ಗಂಗಾಧರಯ್ಯ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ಮೈಸೂರಿನ (Mysuru) ನಜರಾಬಾದ್ ಠಾಣೆಯಲ್ಲಿ ಮುರುಘಾ ಶ್ರೀಗಳ ವಿರುದ್ಧ ಮೊದಲ ಪೋಕ್ಸೋ ಕೇಸ್ ದಾಖಲಾಗಿತ್ತು.
ಸೆಪ್ಟೆಂಬರ್ 1ರಂದು ಶ್ರೀಗಳ ಬಂಧನವಾಗಿತ್ತು. ಸುಮಾರು 14 ತಿಂಗಳ ಕಾಲ ಜೈಲಿನಲ್ಲಿದ್ದ ಶ್ರೀಗಳು 2023 ನವೆಂಬರ್ 16ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್, ಮೊದಲ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರು ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ಈಗ ಮಾತನಾಡುವ ಸಂದರ್ಭ ಕಡಿಮೆಯಿದೆ – ಖುಲಾಸೆಯಾದ ಬಳಿಕ ಮುರುಘಾ ಶ್ರೀ ಪ್ರತಿಕ್ರಿಯೆ
ಕೋರ್ಟ್ ಆದೇಶದಲ್ಲಿ ಏನಿದೆ?
ಮುರುಘಾ ಶ್ರೀಗಳು ಮತ್ತು ಬಸವರಾಜನ್ ಮಧ್ಯೆ 15 ವರ್ಷಗಳಿಂದ ಜಿದ್ದು ಇದ್ದು ಹಳೆ ಜಿದ್ದಿನಿಂದಲೇ ಶ್ರೀಗಳ ವಿರುದ್ಧ ದೂರು ದಾಖಲಾಗಿದೆ. ದೂರು ನೀಡುವ 15 ದಿನ ಸಂತ್ರಸ್ತೆಯರು ಬಸವರಾಜನ್ ಮನೆಯಲ್ಲಿದ್ದರು. ಬೆಂಗಳೂರಿಗೆ ಸಂತ್ರಸ್ತೆಯರು ಬಂದಾಗ ಬಸವರಾಜನ್ ದಂಪತಿ ಆರ್ಥಿಕ ನೆರವು ನೀಡಿದ್ದಾರೆ.
ಸಂತ್ರಸ್ತೆಯರು ಕೋರ್ಟ್-ಪೊಲೀಸರ ಮುಂದೆ ನೀಡಿರುವ ಹೇಳಿಕೆ ವ್ಯತಿರಿಕ್ತವಾಗಿದೆ. ಮುರುಘಾ ಶ್ರೀಗಳ ವಿರುದ್ಧ ದ್ವೇಷಕ್ಕಾಗಿ ಹಣ ವ್ಯಯ ಮಾಡಲಾಗಿದೆ. ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವುದಕ್ಕೆ ವೈದ್ಯಕೀಯ ಸಾಕ್ಷ್ಯಗಳಿಲ್ಲ.
ಸ್ಥಳ ಮಹಜರು ವೇಳೆ ಸಂತ್ರಸ್ತೆಯರ ವಿವರಣೆಗೆ ಹೋಲಿಕೆಯಾಗುತ್ತಿಲ್ಲ. ಸಂತ್ರಸ್ತೆಯರ ಮೇಲೆ ಹಲ್ಲೆ ನಡೆದಿದೆ ಎನ್ನುವ ಆರೋಪವಿದೆ. ಆದರೆ ಹಲ್ಲೆ ನಡೆಸಿದ್ದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಮುಖ್ಯವಾಗಿ ಪೊಲೀಸರ ಮುಂದೆ ದೂರು ನೀಡದೆ ಮೈಸೂರಿಗೆ ಸಂತ್ರಸ್ತೆಯರು ಹೋಗಿದ್ಯಾಕೆ ಎಂದು ಕೋರ್ಟ್ ಗಂಭೀರವಾದ ಪ್ರಶ್ನೆಯನ್ನು ಎತ್ತಿದೆ.
ರಿಲೀಫ್ ಇಲ್ಲ:
ಪೋಕ್ಸೋ ಕೇಸಲ್ಲಿ ದಾಖಲಾಗಿದ್ದ ಮೊದಲ ಕೇಸ್‌ನಲ್ಲಿ ಮುರುಘಾ ಶ್ರೀಗಳು ಖುಲಾಸೆಗೊಂಡಿದ್ದರೂ ಪೂರ್ಣವಾಗಿ ರಿಲೀಫ್ ಸಿಕ್ಕಿಲ್ಲ. 2ನೇ ಕೇಸ್ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಬೇಕಿದ್ದು, ಮುಂದಿನ ತಿಂಗಳು ವಿಚಾರಣೆಗೆ ಬರಲಿದೆ. ಇದನ್ನೂ ಓದಿ: ಆರೋಪಿಗಳನ್ನು ರಕ್ಷಿಸಲು ತನಿಖಾಧಿಕಾರಿಗಳು ಸರಿಯಾದ ದಾಖಲೆ ಸಲ್ಲಿಸಿರಲಿಲ್ಲ: ಒಡನಾಡಿ ಪರಶು
ಪ್ರಕರಣದಲ್ಲಿ ಅಡುಗೆ ಸಹಾಯಕಿ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣವನ್ನು ವಜಾಗೊಳಿಸುವಂತೆ ಶ್ರೀಗಳು ಕೋರ್ಟ್ ಮೊರೆ ಹೋಗಿದ್ದಾರೆ. ಸದ್ಯಕ್ಕೆ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
ಮೊದಲ ಪ್ರಕರಣದಲ್ಲಿ ಖುಲಾಸೆಗೊಂಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ಮೇಲ್ಮನವಿ ಸಲ್ಲಿಸದಿದ್ದರೆ ನಾವೇ ಕೋರ್ಟ್ ಮೊರೆ ಹೋಗೋದಾಗಿ ಸಂತ್ರಸ್ತೆಯರ ಪರ ದೂರು ನೀಡಿರುವ ಒಡನಾಡಿ ಸಂಸ್ಥೆ ಹೇಳಿಕೊಂಡಿದೆ. ಶ್ರೀಗಳು ಖುಲಾಸೆಗೊಳ್ಳುತ್ತಿದ್ದಂತೆ ಭಕ್ತರು ವಿಜಯೋತ್ಸವ ಆಚರಿಸಿದ್ದಾರೆ. ಇದು ಸತ್ಯಕ್ಕೆ ಸಿಕ್ಕ ಜಯ ಎಂದಿದ್ದಾರೆ.

