ಬೀಜಿಂಗ್: ಹಾಂಕಾಂಗ್ (Hong Kong) ವಸತಿ ಸಮುಚ್ಚಯವೊಂದರಲ್ಲಿ ಏಳು ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ ಬೆಂಕಿ ಬಿದ್ದು, 13 ಜನರು ಸಾವನ್ನಪ್ಪಿದ್ದಾರೆ. ಹಲವರು ಕಟ್ಟಡದಲ್ಲಿ ಸಿಲುಕಿಕೊಂಡಿದ್ದಾರೆ.
ಬೆಂಕಿ ಅವಘಡದಿಂದ ಸ್ಥಳದಲ್ಲೇ 9 ಮಂದಿ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ನಾಲ್ವರು ಸಾವಿಗೀಡಾದರು. 15 ಮಂದಿ ಗಂಭೀರ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಸುಮಾರು 700 ಜನರನ್ನು ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ.
ನ್ಯೂ ಟೆರಿಟರಿಸ್‌ನ ತೈ ಪೋ ಜಿಲ್ಲೆಯ ವಸತಿ ಸಂಕೀರ್ಣದ ಹೊರಭಾಗದಲ್ಲಿ ಸ್ಥಾಪಿಸಲಾದ ಬಿದಿರಿನ ಸ್ಕ್ಯಾಫೋಲ್ಡಿಂಗ್‌ನಲ್ಲಿ ದಟ್ಟ ಬೆಂಕಿ ಕಾಣಿಸಿಕೊಂಡಿತು. ವಸತಿ ಸಂಕೀರ್ಣವು ಎಂಟು ಬ್ಲಾಕ್‌ಗಳನ್ನು ಹೊಂದಿದ್ದು, ಸುಮಾರು 2,000 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಸುಮಾರು 4,800 ಜನರು ಇದ್ದರು ಎಂದು ತಿಳಿಸಲಾಗಿದೆ.
128 ಅಗ್ನಿಶಾಮಕ ವಾಹನಗಳು ಮತ್ತು 57 ಅಂಬುಲೆನ್ಸ್‌ಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು. ಮೃತರಲ್ಲಿ ಒಬ್ಬ ಅಗ್ನಿಶಾಮಕ ಸಿಬ್ಬಂದಿ ಸೇರಿದ್ದಾರೆ ಎಂದು ಅಗ್ನಿಶಾಮಕ ಸೇವೆಗಳ ಇಲಾಖೆಯ ನಿರ್ದೇಶಕ ಆಂಡಿ ಯೆಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಟ್ಟಡಗಳ ಅವಶೇಷಗಳಡಿಯಲ್ಲಿ ಜನರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬೆಂಕಿಯಲ್ಲಿ ಸಿಲುಕಿರುವ ಹೆಚ್ಚಿನವರು ವೃದ್ಧರು ಎಂದು ತಿಳಿದುಬಂದಿದೆ. ಬೆಂಕಿ ಅವಘಡದಿಂದ ನಿರಾಶ್ರಿತರಾದ ಜನರಿಗೆ ತೈ ಪೊದಲ್ಲಿ ಜಿಲ್ಲಾ ಅಧಿಕಾರಿಗಳು ತಾತ್ಕಾಲಿಕ ಆಶ್ರಯಗಳನ್ನು ತೆರೆದಿದ್ದಾರೆ.

