ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದ ಮ್ಯಾಂಗೋ ಪಚ್ಚ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಸುಗ್ಗಿ ಸಂಭ್ರಮಕ್ಕೆ ತೆರೆಗೆ ಬರ್ತಿರುವ ಈ ಸಿನಿಮಾದ ಮೊದಲ ಹಾಡು ಇಂದು ರಿಲೀಸ್ ಆಗಿದೆ. ಸರೆಗಮ ಯೂಟ್ಯೂಬ್ ನಲ್ಲಿ ‘ಮ್ಯಾಂಗೋ ಪಚ್ಚ’ನ ಹಸ್ರವ್ವ ಗೀತೆ ಅನಾವರಣಗೊಂಡಿದೆ. ಹಸ್ರವ್ವ ಹಾಡಿಗೆ ವಿವೇಕ್ ಹಾಗೂ ಶರತ್ ವಸಿಷ್ಠ ಸಾಹಿತ್ಯ ಬರೆದಿದ್ದಾರೆ. ಮೋಹನ್ ಕುಮಾರ್ ಜೊತೆಗೂಡಿ ಚರಣ್ ರಾಜ್ ಧ್ವನಿಯಾಗುವುದರ ಜೊತೆಗೆ ಸಂಗೀತ ಒದಗಿಸಿದ್ದಾರೆ. ಚರಣ್ ಬಿಜಿಎಂ ಹಾಡಿನ ಕಿಕ್ ಹೆಚ್ಚಿಸಿದೆ.
ಮ್ಯಾಂಗೋ ಪಚ್ಚ ಚಿತ್ರವೂ ರಿಯಲ್ ಘಟನೆಯ ಚಿತ್ರವೇ ಆಗಿದೆ. ಮೈಸೂರಿನಲ್ಲಿ ನಡೆದ ಘಟನೆಯನ್ನೆ ಆಧರಿಸಿಯೇ ಡೈರೆಕ್ಟರ್ ವಿವೇಕ್ ಈ ಚಿತ್ರ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಮ್ಯಾಂಗೋ ಪಚ್ಚ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದೆ. ಮ್ಯಾಂಗೋ ಪಚ್ಚ ಚಿತ್ರವನ್ನು ಕೆಆರ್ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ.
ಸಂಚಿತ್ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ನಟಿಸಿದ್ದಾರೆ. ಸಂಚಿತ್ ಹಾಗೂ ಕಾಜಲ್ ಜೊತೆಯಾಗಿ ಮಯೂರ್ ಪಟೇಲ್, ಭಾವನಾ, ಹಂಸ, ಹರಿಣಿ ಶ್ರೀಕಾಂತ್, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್, ಪ್ರಶಾಂತ್ ಹಿರೇಮಠ್, ಇನ್ನೂ ಅನೇಕರು ಅಭಿನಯಿಸಿದ್ದಾರೆ.

