– 25 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ ದಕ್ಷಿಣ ಆಫ್ರಿಕಾ
ಗುವಾಹಟಿ: ತವರಿನಲ್ಲೇ ಭಾರತ ತಂಡವನ್ನ (Team India) 2-0 ಅಂತದಲ್ಲಿ ಸೋಲಿಸುವ ಮೂಲಕ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದರೊಂದಿಗೆ 27 ವರ್ಷಗಳ ಬಳಿಕ ಟೆಸ್ಟ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಆಫ್ರಿಕಾ ತಂಡ 25 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿದೆ.
ಇದು ಟೆಸ್ಟ್ ಕ್ರಿಕೆಟ್ ನಲ್ಲಿ (Test Cricket) ಭಾರತ ತಂಡ ತವರಿನಲ್ಲಿ ಅನುಭವಿಸುತ್ತಿರುವ ಮೂರನೇ ವೈಟ್ ವಾಶ್. ಪ್ರವಾಸಿ ದಕ್ಷಿಣ ಆಫ್ರಿಕಾದ (South Africa) ವಿರುದ್ಧ ಕೋಲ್ಕತಾದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 30 ರನ್ ಗಳ ಆಘಾತಕಾರಿ ಸೋಲನುಭವಿಸಿತ್ತು. ಇದೀಗ ಗುವಾಹಟಿಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಧಿಕಾರಯುತವಾಗಿ 408 ರನ್ ಗಳ ಗೆಲುವು ಸಾಧಿಸಿದೆ. ಈ ಮೂಲಕ ಪ್ರವಾಸಿ ತಂಡ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.

ಹಿಂದೆಂದೂ ನೋಡ ಕೆಟ್ಟ ದಾಖಲೆಗಳು ಹೆಗಲಿಗೆ
ಹೌದು ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC( ರೇಸ್‌ನಲ್ಲಿ ಭಾರತ ದೀರ್ಘ ಕಾಲದ ವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಪಟ್ಟ ಕಾಯ್ದುಕೊಂಡಿತ್ತು. ಅಲ್ಲದೇ ಬಲಿಷ್ಠ ಟೀಂ ಇಂಡಿಯಾವನ್ನ ಸೋಲಿಸುವುದು ಸುಲಭದ ಮಾತಾಗಿರಲಿಲ್ಲ. ಆದ್ರೆ ಈ ವರ್ಷ ಅತ್ಯಂತ ಹೀನಾಯ ಸೋಲುಗಳನ್ನು ಕಂಡಿರುವ ತಂಡ ಫಸ್ಟ್ ಟೈಮ್ ಹಲವು ಕೆಟ್ಟ ದಾಖಲೆಗಳನ್ನ ಹೆಗಲಿಗೇರಿಸಿಕೊಂಡಿದೆ. ಅವುಗಳ ಪಟ್ಟಿ ನೋಡೋದಾದ್ರೆ…
- 25 ವರ್ಷಗಳಲ್ಲಿ ಫಸ್ಟ್ ಟೈಮ್ ಭಾರತ 2 ಆವೃತ್ತಿಗಳಲ್ಲಿ 5 ಟೆಸ್ಟ್ ಸೋಲು ಕಂಡಿದೆ.
- 66 ವರ್ಷಗಳಲ್ಲಿ ಫಸ್ಟ್ ಟೈಮ್ ಭಾರತ 7 ಪಂದ್ಯಗಳಲ್ಲಿ 5 ಟೆಸ್ಟ್ ಪಂದ್ಯ ಸೋತಿದೆ
- ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿದೊಡ್ಡ ಸೋಲು
- 30 ವರ್ಷಗಳಲ್ಲಿ ಫಸ್ಟ್ ಟೈಮ್ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಶೂನ್ಯ ವೈಯಕ್ತಿಕ ಶತಕ ದಾಖಲಿಸಿದೆ. ಯಾರೋಬ್ಬರೂ ಶತಕ ಹೊಡೆದಿಲ್ಲ.

ದಿಟ್ಟತನದ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲ
ಗುವಾಹಟಿಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 549 ರನ್ ಗಳ ಕಠಿಣ ಗುರಿ ಪಡೆದಿದ್ದ ಭಾರತ ತಂಡ ಅಂತಿಮವಾಗಿ 140 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ತಂಡದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ (54) ಅವರನ್ನ ಹೊರತುಪಡಿಸಿದ್ರೆ ಬೇರಾವ ಬ್ಯಾಟರ್ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಂಗಳವಾರ ಸಂಜೆ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದ್ದ ಭಾರತ ತಂಡ ಬುಧವಾರ ಆ ಮೊತ್ತಕ್ಕೆ ಮತ್ತೆ 113 ರನ್ ಪೇರಿಸುವಷ್ಟರಲ್ಲಿ ಸರ್ವಪತನ ಕಂಡಿತು. ಯಾವ ಹಂತದಲ್ಲೂ ಭಾರತ ತಂಡದ ಬ್ಯಾಟರ್ ಗಳು ದಿಟ್ಟತನದ ಬ್ಯಾಟಿಂಗ್ ಪ್ರದರ್ಶನವನ್ನ ಮಾಡಲೇ ಇಲ್ಲ. ಕಡೇ ಪಕ್ಷ ಡ್ರಾ ಮಾಡುವ ಗೋಜಿಗೂ ಹೋಗಲಿಲ್ಲ.
ಹೇಳಿದ್ದನ್ನ ಸಾಧಿಸಿ ತೋರಿಸಿದ ಟೆಂಬಾ
2000ದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧವೇ ಮೊದಲ ಬಾರಿಗೆ ತವರಿನಲ್ಲಿ ವೈಟ್ ವಾಶ್ ಅನುಭವಿಸಿತ್ತು. ಅದಾಗಿ 24 ವರ್ಷದ ಬಳಿಕ ಅಂದರೆ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ತವರಿಲ್ಲಿ 3-0 ಅಂತರದಲ್ಲಿ ಮುಖಭಂಗಕ್ಕೀಡಾಗಿತ್ತು. ಕಳೆದ ತಿಂಗಳಷ್ಟೇ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಅವರು ಕಳೆದ ವರ್ಷ ನ್ಯೂಜಿಲೆಂಡ್ ತಂಡ ಭಾರತದಲ್ಲಿ ಸಾಧಿಸಿದ್ದನ್ನೇ ಈಗ ನಾವು ಮತ್ತೆ ಸಾಧಿಸುವುದಾಗಿ ಸವಾಲು ಹಾಕಿದ್ದರು. ಆಗ ಎಲ್ಲರೂ ಈ ಮಾತಿಗೆ ನಕ್ಕಿದ್ದರು. ಆದರೆ ಇದೀಗ ಅವರು ತಾವು ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ. ತಮ್ಮ ತಂಡವೇಕೆ ಟೆಸ್ಟ್ ಕ್ರಿಕೆಟ್ ನಲ್ಲಿ ವಿಶ್ವ ಚಾಂಪಿಯನ್ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಸೋಲೇ ಕಾಣದ ಬವುಮಾ
ಏಕದಿನ ಕ್ರಿಕೆಟ್‌ನಲ್ಲಿ ಭಾರೀ ವೈಫಲ್ಯ ಅನುಭವಿಸುತ್ತಿದ್ದ ಟೆಂಬಾ ಬವುಮಾ ಮತ್ತೊಂದು ಕಡೆ ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಆಸ್ಟ್ರೇಲಿಯಾ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟ ಅಲಂಕರಿಸಿದ್ರು. ಇದೀಯ ಭಾರತದಲ್ಲಿ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್ ಸರಣಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನಡೆಯುತ್ತಿರುವ ಬವುಮಾ ಈವರೆಗೆ ನಾಯಕನಾಗಿ ಆಡಿದ 12 ಪಂದ್ಯಗಳಲ್ಲಿ 11 ಪಂದ್ಯ ಗೆದ್ದಿದ್ದಾರೆ. 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಇನ್ನೂ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಕಿತ್ತಿದ್ದ ಸ್ಪಿನ್ನರ್ ಸೈಮನ್ ಹಾರ್ಮರ್ 2ನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಕಿತ್ತು ಭಾರತದ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಬ್ಬ ಸ್ಪಿನ್ನರ್ ಕೇಶವ್ ಮಹಾರಾಜ್ 2 ವಿಕೆಟ್ ಉರುಳಿಸಿದರು. ಉಳಿದೆರಡು ವಿಕೆಟ್ ಗಳನ್ನು ಮಧ್ಯಮ ವೇಗಿ ಮಾರ್ಕೋ ಯಾನ್ಸನ್ ಮತ್ತು ಸ್ಪಿನ್ನರ್ ಸೇನುರನ್ ಮುತ್ತುಸ್ವಾಮಿ ಹಂಚಿಕೊಂಡರು. ದಕ್ಷಿಣ ಆಫ್ರಿಕಾ ತಂಡ ಬೃಹತ್ ಗುರಿ ನೀಡಿದಾಗಲೇ ಭಾರತ ತಂಡದ ಸೋಲು ಪಕ್ಕಾ ಆಗಿತ್ತು. ಆದರೂ ಕಡೇಪಕ್ಷ ಡ್ರಾ ಗೊಳಿಸಿದ್ದರೂ ವೈಟ್ ವಾಶ್ ನಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಅದೂ ಭಾರತ ತಂಡಕ್ಕೆ ಸಾಧ್ಯವಾಗದ್ದು ತೀವ್ರ ಟೀಕೆಗೆ ಗುರಿಯಾಗಿದೆ.
– SOUTH AFRICA WON THE TEST SERIES IN INDIA WITHOUT RABADA 🤯
– NEW ZEALAND WON THE TEST SERIES IN INDIA WITHOUT WILLIAMSON 🤯 pic.twitter.com/5A8TF7KiXQ
— Johns. (@CricCrazyJohns) November 26, 2025
ಸಂಕ್ಷಿಪ್ತ ಸ್ಕೋರ್
* ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್ 489
ಭಾರತ ಪ್ರಥಮ ಇನ್ನಿಂಗ್ಸ್ 201
* ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್ 260/5 ಡಿಕ್ಲೇರ್
ಭಾರತ ದ್ವಿತೀಯ ಇನ್ನಿಂಗ್ಸ್ 140/10

