– ಮದುವೆಗೆ ಮುನ್ನಾದಿನವೇ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಲಕ್ನೋ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದ ಸಭೆಗೆ ಗೈರಾದ ಕಾರಣ ಅಮಾನತುಗೊಂಡ ಅಧಿಕಾರಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
25 ವರ್ಷದ ಗುಮಾಸ್ತ ಸುಧೀರ್ ಕುಮಾರ್ ಆತ್ಮಹತ್ಯೆಗೆ ಶರಣಾದವರು. ಇವರಿಗೆ ಮದುವೆ ನಿಶ್ಚಯವಾಗಿತ್ತು. ವಿವಾಹಕ್ಕೆ ಒಂದು ದಿನವಷ್ಟೇ ಬಾಕಿ ಇರುವಾಗ, ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದಾಗ ಕಾಲುವೆಗೆ ಬಿದ್ದ ಕಾರು – ಐವರು ಸಾವು, ಇಬ್ಬರು ಗಂಭೀರ
ವಿವಾಹದ ಸಿದ್ಧತೆಗಳಿಂದಾಗಿ ಭಾನುವಾರ ಅಧಿಕೃತ ಸಭೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಕುಮಾರ್‌ನನ್ನು ಅಮಾನತು ಮಾಡಿದ್ದರು. ಇದರಿಂದ ನನ್ನ ಸಹೋದರ ಮಾನಸಿಕವಾಗಿ ನೊಂದಿದ್ದ ಎಂದು ಮೃತನ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಒಂದು ದಿನ ಬೆಳಗ್ಗೆ ಕುಮಾರ್ ನಿವಾಸಕ್ಕೆ ಅಧಿಕಾರಿಯೊಬ್ಬರು ಬಂದು ನಿಮ್ಮನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದರು. ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ನನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಸಹೋದರಿ ದೂರಿದ್ದಾರೆ.
ಡಿ.4 ರ ಗಡುವು ಕಾರಣಕ್ಕೆ, ಅನೇಕ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ತೊಡಗಿರುವ ಅಧಿಕಾರಿಗಳ ಸಾವಿನ ಸಂಖ್ಯೆಗಳು ವರದಿಯಾಗುತ್ತಿವೆ. ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬಗಳು ಆರೋಪಿಸಿವೆ. ಇದನ್ನೂ ಓದಿ: ದೆಹಲಿ ಕಾರು ಸ್ಫೋಟ ಕೇಸ್ – ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ 7ನೇ ಆರೋಪಿ ಬಂಧಿಸಿದ ಎನ್‌ಐಎ
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಶನಿವಾರ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಸ್‌ಐಆರ್ ಕೆಲಸಕ್ಕೆ ಸಂಬಂಧಿಸಿದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ. ಮಧ್ಯಪ್ರದೇಶದ ರೈಸೆನ್ ಮತ್ತು ದಾಮೋಹ್‌ನಲ್ಲಿ ಎಸ್‌ಐಆರ್ ಬಿಎಲ್‌ಒಗಳಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಶಿಕ್ಷಕರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

