– ಮೊನ್ನೆಯಷ್ಟೇ ನಾಗ ಸಾಧುಗಳ ಆಶೀರ್ವಾದ ಪಡೆದಿದ್ದ ಡಿಸಿಎಂ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ (DK Shivakumar) ನಡುವಿನ ಮುಖ್ಯಮಂತ್ರಿ ಹುದ್ದೆಯ ಶೀತಲ ಸಮರ ತೀವ್ರಗೊಂಡಿದೆ. ಇಲ್ಲಿವರೆಗೆ ದಿನ ದೂಡ್ತಾ ಬಂದಿದ್ದ ಹೈಕಮಾಂಡ್‌ಗೆ ಕುರ್ಚಿ ಕದನಕ್ಕೆ ಬ್ರೇಕ್ ಹಾಕಲೇಬೇಕಾದ ಅನಿವಾರ್ಯತೆಯಲ್ಲಿದೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ದೇವರ ಮೊರೆ ಹೋಗೋದನ್ನ ಮುಂದುವರಿಸಿದ್ದಾರೆ.
ಇತ್ತೀಚೆಗಷ್ಟೇ ಕಾಶಿಯಿಂದ ಬಂದಿದ್ದ ನಾಗ ಸಾಧುಗಳು ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲೆಂದು ಆಶೀರ್ವದಿಸಿದ್ದರು. ಈ ಬೆನ್ನಲ್ಲೇ ʻಹಂದನ ಕೆರೆ ಅಜ್ಜಯ್ಯನ ಗದ್ದುಗೆʼ ಡಿಕೆಶಿ ಮನೆಗೆ ಆಗಮಿಸಿದೆ. ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಅಜ್ಜಯ್ಯನ ಗದ್ದುಗೆ ಕರೆಸಿ ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಿದ್ದಾರೆ.

ಕಾಶಿಯ ನಾಗ ಸಾಧುಗಳ ಆಶೀರ್ವಾದ
ಎರಡು ದಿನಗಳ ಹಿಂದಷ್ಟೇ ಕಾಶಿಯಿಂದ ಬಂದಿದ್ದ ನಾಗಸಾಧುಗಳು ಡಿಕೆಶಿಗೆ ಆಶೀರ್ವಾದ ಮಾಡಿದ್ದರು. ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಬಂದ ನಾಗ ಸಾಧುಗಳು ಡಿಕೆಶಿ ತಲೆ ಮೇಲೆ ಕೈ ಇಟ್ಟು ಸಿಎಂ ಆಗಲೆಂದು ಆಶೀರ್ವಾದ ಮಾಡಿದ್ದರು.

ಇದಕ್ಕೂ ಮುನ್ನಾ ದಿನ ಅರಸೀಕೆರೆ ತಾಲ್ಲೂಕಿನ, ಯಾದಪುರದಲ್ಲಿರುವ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಅವರ ಉತ್ಸವಮೂರ್ತಿಯನ್ನ ಬೆಂಗಳೂರಿನ ನಿವಾಸಕ್ಕೆ ಕರೆಸಿಕೊಂಡು ಕುಟುಂಬಸ್ಥರೊಂದಿಗೆ ಸಂಕಲ್ಪ ಪೂಜೆ ಸಲ್ಲಿಸಿದ್ದರು.

