ಬೆಂಗಳೂರು: ನಗರದಲ್ಲಿ ನಡೆದಿದ್ದ 7 ಕೋಟಿ ರೂ. ದರೋಡೆಯ ಆರೋಪಿಯಾಗಿರುವ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್‌ನನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ದರೋಡೆ ಪ್ರಕರಣದ ಆರೋಪಿಯಾಗಿರುವ ಅಣ್ಣಪ್ಪ ನಾಯಕ್ ಗೋವಿಂದಪುರ ಠಾಣೆಯ (Govindapura Police Station) ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ. ಮೊದಲು ಕ್ಲೈಮ್ ಕೆಲಸ ಮಾಡುತ್ತಿದ್ದ ಆತನನ್ನು ಬೀಟ್ ಡ್ಯೂಟಿಗೆ ಹಾಕಲಾಗಿತ್ತು. ಸದ್ಯ 7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆ ಅಣ್ಣಪ್ಪ ನಾಯಕ್‌ನನ್ನು ಅಮಾನತು ಮಾಡಿ, ಪೂರ್ವ ವಿಭಾಗದ ಡಿಸಿಪಿ ಬಿ.ದೇವರಾಜ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ:ಮಾಡಿದ್ದ ಸಾಲ ತೀರಿಸಲು 7.11 ಕೋಟಿ ದರೋಡೆ ಮಾಡಿದ್ದ ದರೋಡೆಕೋರರ ಗ್ಯಾಂಗ್
ಸದ್ಯ ದರೋಡೆ ಪ್ರಕರಣದ ತನಿಖೆ ನಡೆಯುತ್ತಿದ್ದು, 7.11 ಕೋಟಿ ರೂ. ಪೈಕಿ 6.29 ಕೋಟಿ ರೂ.ಯನ್ನು ಸೀಜ್ ಮಾಡಲಾಗಿದೆ. ಜೊತೆಗೆ 7 ಜನರನ್ನು ಅರೆಸ್ಟ್ ಮಾಡಲಾಗಿದೆ.
ಬಂಧಿತರನ್ನು ರಾಕೇಶ್, ರವಿ, ಗೋವಿಂದಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್, ಕ್ಸೇವಿಯರ್, ಗೋಪಿ, ನವೀನ ಸೇರಿ ಒಟ್ಟು ಏಳು ದರೋಡೆಕೋರರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದರಲ್ಲಿ ಕೆಲವರು ಪೊಲೀಸರ ಭಯಕ್ಕೆ ಸರೆಂಡರ್ ಆಗಿದ್ದಾರೆ
ದರೋಡೆ ಮಾಡಿದ್ದು ಯಾಕೆ?
ದರೋಡೆಯ ಮಾಸ್ಟರ್ ಮೈಂಡ್ ಕ್ಸೇವಿಯರ್ ಸೇರಿ ಗ್ಯಾಂಗ್‌ನಲ್ಲಿದ್ದ ಬಹುತೇಕರು ಮೈ ತುಂಬ ಸಾಲ ಮಾಡಿಕೊಂಡಿದ್ರು. ಇಸ್ಪೀಟು ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದ ದರೋಡೆಕೋರರ ಗ್ಯಾಂಗ್ ಸಿಎಂಎಸ್ ಕಂಪನಿ ಕೊಡುವ 17 ಸಾವಿರ ರೂ. ಸಂಬಳದಲ್ಲಿ ಸಾಯೋತನಕ ಸಾಲ ತೀರಿಸಲು ಆಗಲ್ಲ ಅಂತ ದೊಡ್ಡ ದರೋಡೆಗೆ ಕೈ ಹಾಕಿತ್ತು. ದರೋಡೆ ಮಾಡಿ ಬಂದ ಹಣದಲ್ಲಿ ಮಾಡಿರುವಂತಹ ಸಾಲ ತೀರಿಸಿ, ಮಿಕ್ಕ ಹಣದಲ್ಲಿ ವಿಲಾಸಿ ಜೀವನ ನಡೆಸಬಹುದು ಎಂದುಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.
ವಾರದಲ್ಲಿ ಪ್ರತಿ ಬುಧವಾರ ಬಹುಕೋಟಿ ಹಣ ಎಟಿಎಂಗೆ ಹಾಕಲು ತೆಗೆದುಕೊಂಡು ಹೋಗುತ್ತಾರೆ. ಹಾಗಾಗಿ ದೊಡ್ಡ ಮಟ್ಟದ ಹಣ ಸಿಗಬೇಕಂದ್ರೆ ಬುಧವಾರ ದರೋಡೆ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿದ್ದರು ಎಂದು ಬಯಲಾಗಿದೆ. ಅಲ್ಲದೆ ಕದ್ದ ಹಣವನ್ನು ಹೊಸಕೋಟೆ ಕೆರೆಯ ಬಳಿ ಇಟ್ಟಿದ್ದರು. ಬಳಿಕ ಹಣ ಮನೆಯಲ್ಲಿಟ್ಟು, ಬೇರೆ ಬೇರೆ ಕಡೆ ತಲೆಮರೆಸಿಕೊಂಡಿದ್ದರು. ಇದೀಗ ಪೊಲೀಸರು ದರೋಡೆಕೋರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: 7.11 ಕೋಟಿ ದರೋಡೆ ಕೇಸ್; ಪೊಲೀಸ್ ಠಾಣೆಗೆ ತಾನೇ ಬಂದು ಶರಣಾದ ಆರೋಪಿ
