ಕೊಪ್ಪಳ: ಭತ್ತದ ನಗರ ಗಂಗಾವತಿ ತಾಲೂಕಿನಲ್ಲಿ ಭತ್ತ ಕಟಾವು ಆರಂಭವಾಗಿದ್ದು, ಆದರೆ ಭತ್ತ ಕಟಾವು ಮಾಡುವ ಯಂತ್ರದ ಬಾಡಿಗೆ ಬೆಲೆ ರೈತರಿಗೆ ಹೊರೆಯಾಗಿದೆ. 4,500 ರೂ. ನೀಡಿ, ರೈತರು ಭತ್ತ ಕಟಾವು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆ ನೀರು ಬಳಕೆ ಮಾಡಿಕೊಂಡು ಗಂಗಾವತಿ, ಕಾರಟಗಿ ತಾಲೂಕುಗಳಲ್ಲಿ ಅಧಿಕಾರಿಗಳ ಅಂಕಿ ಅಂಶಗಳ ಪ್ರಕಾರ ಸರಿಸುಮಾರು 36 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಾಗಿ ಭತ್ತ ಬೆಳೆಯಲಾಗಿದೆ. ಇನ್ನೂ ಕನಕಗಿರಿ ತಾಲೂಕುಗಳಲ್ಲಿ ಸಹ ಕೆಲ ರೈತರು ಬೋರವೆಲ್ ನೀರು ಬಳಸಿ, ಭತ್ತವನ್ನು ಬೆಳೆಯುತ್ತಿದ್ದಾರೆ. ವಿವಿಧ ತಳಿಯ ಭತ್ತಗಳನ್ನು ಬೆಳೆಯುವ ಮೂಲಕ ಭತ್ತ ನಗರ ಎಂದು ಹೆಸರುವಾಸಿಯಾಗಿರುವ ಈ ಭಾಗದ ರೈತರಿಗೆ ಭತ್ತ ಕಟಾವು ಮಾಡುವ ಯಂತ್ರದ ಬಾಡಿಗೆ ಹೊರೆಯಾಗಿದ್ದು, ಸಂಕಷ್ಟದಲ್ಲಿ ರೈತರು ಭತ್ತ ಕಟಾವು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ಕೃಷಿ ಕೂಲಿಕಾರರ ಕೊರತೆ ಕಾಡುತ್ತಿರುವ ಕಾರಣಕ್ಕೆ ರೈತರು ಅನಿವಾರ್ಯವಾಗಿ ಭತ್ತ ಕಟಾವು ಮಾಡುವ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಸದ್ಯ ಮುಂಗಾರು ಹಂಗಾಮಿನ ಭತ್ತ ಕಟಾವು ಆರಂಭವಾಗಿದ್ದು, ರೈತರು ಬರದಿಂದ ಕಟಾವು ಮಾಡಲು ಮುಂದಾಗುತ್ತಿದ್ದಾರೆ. ಎಲ್ಲಾ ರೈತರು ಏಕಕಾಲಕ್ಕೆ ಕಟಾವು ಆರಂಭ ಮಾಡಿರುವ ಕಾರಣಕ್ಕೆ ಕಟಾವು ಯಂತ್ರಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರತಿ ಗಂಟೆಗೆ 600 ರಿಂದ 700 ರೂ. ಏರಿಕೆ ಮಾಡಲಾಗಿದೆ. ಕಳೆದ ವರ್ಷ ತಹಶೀಲ್ದಾರ್ ನೇತೃತ್ವದಲ್ಲಿ ಸಭೆಯನ್ನು ನಡೆಸಿ, ಪ್ರತಿ ಗಂಟೆಗೆ 2,500 ರಿಂದ 2,600 ರೂ. ನಿಗದಿ ಮಾಡಲಾಗಿತ್ತು. ಆದರೆ ಈ ಬಾರಿ ತಹಶೀಲ್ದಾರ್ ಸಭೆ ನಡೆಸಿ ಬಾಡಿಗೆ ನಿಗದಿ ಮಾಡದೆ ಇರುವ ಕಾರಣಕ್ಕೆ ಕಟಾವು ಯಂತ್ರ ಮಾಲೀಕರು ಏಕಾಏಕಿ ದರ ಏರಿಕೆ ಮಾಡಿ ಪ್ರತಿ ಗಂಟೆಗೆ 3,000 ರಿಂದ 3,200 ರೂಗಳ ಬಾಡಿಗೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಒಂದು ಎಕರೆ ಭತ್ತ ಕಟಾವು ಮಾಡಲು ಯಂತ್ರ ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಪ್ರತಿ ಎಕರೆ ಭತ್ತ ಕಟಾವು ಮಾಡಲು ರೈತರು 4,500 ರೂಗಳನ್ನು ವೆಚ್ಚ ಮಾಡಬೇಕಾಗಿದೆ. ಇದು ರೈತರಿಗೆ ಹೊರೆಯಾಗಿದ್ದು, ಆರ್ಥಿಕ ಸಂಕಷ್ಟ ಎದುರಾದರೂ ಬೆಳೆದಿರುವ ಬೆಳೆಯನ್ನು ಕಟಾವು ಮಾಡದೆ ಬಿಡಲು ಆಗದೆ ಅನಿವಾರ್ಯವಾಗಿ ಅಧಿಕ ಬೆಲೆ ನೀಡಿ, ಕಟಾವು ಮಾಡಿಸಲು ಮುಂದಾಗುತ್ತಿದ್ದಾರೆ.
ಇನ್ನೂ ಮುಂಗಾರು ಬೆಳೆಯ ಭತ್ತ ಕಟಾವು ಹಂತಕ್ಕೆ ಬಂದಿರುವ ಸಮಯದಲ್ಲಿಯೇ ಚಂಡಮಾರುತ ಕಾಣಿಸಿಕೊಂಡು ಗಾಳಿ, ಮಳೆ ಉಂಟಾಗಿತ್ತು. ಆದರಿಂದ ಬೆಳೆದ ಭತ್ತದ ಬೆಳೆ ನೆಲಕ್ಕೆ ಬಿದ್ದಿದೆ. ಸಾಕಷ್ಟು ಪ್ರಮಾಣ ಭತ್ತ ನೆಲಕ್ಕೆ ಬಿದ್ದಿದ್ದು, ಈ ಭತ್ತವನ್ನು ಕಟಾವು ಮಾಡಲು ಯಂತ್ರವು ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಒಂದು ಎಕರೆಗೆ ಒಂದು ಗಂಟೆಗೆ ಕಾಲಾವಕಾಶ ಸಾಕಾಗಿತ್ತು. ಭತ್ತ ನೆಲಕ್ಕೆ ಬಿದ್ದಿರುವ ಕಾರಣಕ್ಕೆ ಒಂದೂವರೆ ಗಂಟೆ ಕಾಲಾವಕಾಶವನ್ನು ತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ನೆಲಕ್ಕೆ ಬಿದ್ದಿರುವ ಕಾರಣಕ್ಕೆ ಇಳುವರಿ ಕೂಡ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯು ಕಡಿಮೆಯಾಗಿದೆ. ಈ ಸಮಸ್ಯೆಗಳಿಂದ ಯಂತ್ರದ ಬಾಡಿಗೆ ರೈತರಿಗೆ ಹೊರೆಯಾಗುತ್ತಿದೆ.
