ನವದೆಹಲಿ: ದೆಹಲಿ ಕೆಂಪುಕೋಟೆ ಬಳಿ ಸ್ಫೋಟಗೊಂಡ ಹುಂಡೈ ಐ20 ಕಾರು (Hyundai i20 car) ಚಾಲಕ ಅಕ್ರಮ ಹಣಕಾಸು ಮಾರ್ಗಗಳ ಮೂಲಕ 20 ಲಕ್ಷ ರೂ. ಪಡೆದಿದ್ದಾನೆ ಅನ್ನೋದು ತನಿಖಾ ಮೂಲಗಳಿಂದ ಬಯಲಾಗಿದೆ.
ಅಲ್ಲದೇ ಟೆರರ್ ಡಾಕ್ಟರ್ ಉಮರ್ ಮೊಹಮ್ಮದ್ (Bomber Umar) ಅಲಿಯಾಸ್ ಉಮರ್ ನಭಿ ಹರಿಯಾಣದ ನುಹ್‌ನ ಮಾರುಕಟ್ಟೆಯಲ್ಲಿ ನಗದು ರೂಪದಲ್ಲಿ ಹಣ ಪಾವತಿಸಿ ಭಾರೀ ಪ್ರಮಾಣದಲ್ಲಿ ರಸಗೊಬ್ಬರ ಖರೀದಿಸಿದ್ದ, ಅದನ್ನು ಬಳಸಿಯೇ ಸ್ಫೋಟಕ ತಯಾರು ಮಾಡಿದ್ದಾನೆ. ಈ ಸಂಬಂಧ ಹರಿಯಾಣ ಮೂಲದ ಮೂವರು ಹವಾಲಾ ಡೀಲರ್‌ಗಳನ್ನ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಬಾಂಬ್ ಜೊತೆಗೆ ಪೆಟ್ರೋಲ್ ಟ್ಯಾಂಕ್ ಕೂಡಾ ಸ್ಫೋಟ!
ಇನ್ನೂ ಬಾಂಬ್ ಎಕ್ಸ್‌ಪರ್ಟ್ (Bomb Expert) ಕೂಡ ಆಗಿದ್ದ ಡಾ.ಉಮರ್ ನಭಿ ಇಂಧನ ತೈಲ ಮತ್ತು ಟ್ರಾನ್ಸ್‌ಫಾರ್ಮರ್‌ಗೆ ಬಳಸುವ ಆಯಿಲ್‌ನೊಂದಿಗೆ ಬೆರೆಸಿದ ಅಮೋನಿಯಂ ನೈಟ್ರೇಟ್ ಬಳಸಿ, ಪ್ರಬಲವಾದ ಸ್ಫೋಟಕ ಸಾಧನವನ್ನ ಉಮರ್ ತಯಾರು ಮಾಡಿದ್ದ. ಬಾಂಬ್ ಅನ್ನು 3 MM ಅಥವಾ 9 MM ಬ್ಯಾಟರಿ-ಚಾಲಿತ ಟೈಮಿಂಗ್ ಸಾಧನಕ್ಕೆ ತೆಳುವಾದ ಕೇಬಲ್‌ಗಳೊಂದಿಗೆ ಸಂಪರ್ಕಿಸಲಾಗಿತ್ತು. ಸರ್ಕ್ಯೂಟ್‌ಗೆ ಹಸ್ತಚಾಲಿತ ಸ್ವಿಚ್ ಅಗತ್ಯವಿತ್ತು, ಉಮರ್ ಸ್ಫೋಟವನ್ನ ಪ್ರಚೋದಿಸಲು ಮನೆಯ ಆನ್-ಆಫ್ ಸ್ವಿಚ್‌ನಂತೆ ಕಾರ್ಯನಿರ್ವಹಿಸಲು ರೆಡಿ ಮಾಡಿದ್ದ. ಈ ಬಾಂಬ್ ಜೋಡಣೆ ಪ್ರಕ್ರಿಯೆಯು ಕೇವಲ 5 ರಿಂದ 10 ನಿಮಿಷದಲ್ಲೇ ಮಾಡಿದ್ದ. ಜೊತೆಗೆ ಸ್ಫೋಟಕ್ಕೆ ಬಳಸುವ ಡಿಟೋನೇಟರ್‌ಗಳನ್ನ ಸಾಮಾನ್ಯ ಕಲ್ಲಿದ್ದಲು ಗಣಿಗಳಿಂದ ಸುಲಭವಾಗಿ ಪಡೆಯಬಹುದು ಎನ್ನಲಾಗಿದೆ. ಮೂರು ಗಂಟೆ ಪಾರ್ಕಿಂಗ್ ನಲ್ಲಿ ಕೂತಾಗಲೇ ಇದನ್ನೆಲ್ಲ ಉಮರ್ ಸೆಟ್ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ಅನುಮಾನಿಸಿದ್ದಾರೆ.
ಸ್ಫೋಟದ ತೀವ್ರತೆಗೆ ನಲುಗಿದ ಮೆಟ್ರೋ ಸ್ಟೇಷನ್
ಕೆಂಪು ಕೋಟೆಯ ಬಳಿ ಸಂಭವಿಸಿದ ಸ್ಫೋಟದ ತೀವ್ರತೆಯ ಇನ್ನಷ್ಟು ವಿಡಿಯೋಗಳು ಈಗ ಹೊರ ಬರುತ್ತಿದೆ. ಹೊರ ಬಂದಿರುವ ವಿಡಿಯೋದಲ್ಲಿ ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಇಡೀ ಮೆಟ್ರೋ ನಿಲ್ದಾಣದಲ್ಲಿ ಭೂಕಂಪನದ ಅನುಭವ ಉಂಟಾಗಿತ್ತು ಅನ್ನೋದು ವಿಡಿಯೋದಲ್ಲಿ ಸೆರೆಯಾಗಿದೆ.
39 ವಾಯ್ಸ್ ಕಾಲ್, 43 ವಾಟ್ಸಪ್ ಕಾಲ್ ಪತ್ತೆ
ಈ ನಡುವೆ ದೆಹಲಿಯಲ್ಲಿನ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಡಾ. ಮುಜಮ್ಮಿಲ್ ಫೋನ್ ಕರೆಗಳ ಬಗ್ಗೆ ತನಿಖಾ ತಂಡಗಳು ಮಾಹಿತಿ ಕಲೆ ಹಾಕಿವೆ. ಪ್ರಮುಖ ಶಂಕಿತರಾದ ಡಾ. ಶಾಹೀನ್, ಡಾ.ಮುಜಮ್ಮಿಲ್ ಮತ್ತು ಡಾ.ಆರಿಫ್ ನಡುವೆ ವ್ಯಾಪಕ ಸಂವಹನ ಪತ್ತೆಯಾಗಿದೆ. ನವೆಂಬರ್ 1 ಮತ್ತು ನವೆಂಬರ್ 7ರ ನಡುವೆ, ಡಾ. ಆರಿಫ್ ಮತ್ತು ಡಾ. ಶಾಹೀನ್ ಹಲವು ಬಾರಿ ಮಾತುಕತೆ ನಡೆಸಿದ್ದಾರೆ. 39 ಧ್ವನಿ ಕರೆಗಳು. 43 ವಾಟ್ಸಪ್ ಕರೆಗಳು, ಸುಮಾರು 200 ಪಠ್ಯ ಸಂದೇಶಗಳ ವಿನಿಮಯ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೇಂದ್ರೀಯ ಸಂಸ್ಥೆಗಳು ತೀವ್ರ ತನಿಖೆ ನಡೆಸುತ್ತಿವೆ.



