ಮುಂಬೈ: 17 ವರ್ಷಗಳ ವನವಾಸದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತು. ಆದರೆ ಟ್ರೋಫಿ ಗೆದ್ದ ಖುಷಿ ಒಂದು ದಿನ ಕಳೆಯುವ ಮುನ್ನವೇ ಮಣ್ಣುಪಾಲಾಯಿತು. ಈ ದುಃಖದಿಂದ ಅಭಿಮಾನಿಗಳು (RCB Fans) ಹೊರಬರುತ್ತಿರುವಾಗಲೇ ಮತ್ತೊಂದು ಶಾಕ್ ಎದುರಾಗಿದೆ.
ಹೌದು. ಮುಂಬರುವ 2026ರ ಐಪಿಎಲ್ (IPL 2026) ಆವೃತ್ತಿಯಲ್ಲಿ RCB ತಂಡದ ಯಾವುದೇ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ ಎನ್ನಲಾಗುತ್ತಿದೆ. ಆರ್‌ಸಿಬಿಯ ತವರು ಮೈದಾನ ಕರ್ನಾಟಕದಿಂದಲೇ ಎತ್ತಂಗಡಿ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: IPL 2026 | ಡಿಸೆಂಬರ್‌ನಲ್ಲಿ ಭಾರತದಲ್ಲೇ ಮಿನಿ ಹರಾಜು – ರಿಟೇನ್ ಪಟ್ಟಿ ಬಿಡುಗಡೆಗೆ ನ.15 ಡೆಡ್‌ಲೈನ್
ಸಾಮಾನ್ಯವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದ ಫ್ರಾಂಚೈಸಿಗಳ ತವರು ಕ್ರೀಡಾಂಗಣದಲ್ಲಿ ಮರು ವರ್ಷದ ಐಪಿಎಲ್ ಟೂರ್ನಿ ಉದ್ಘಾಟನೆ ನಡೆಯುತ್ತದೆ. ಹಾಗೆಯೇ 19ನೇ ಆವೃತ್ತಿಯ ಐಪಿಎಲ್ ಟೂರ್ನಿ ಬೆಂಗಳೂರಿನಲ್ಲಿ (Bengaluru) ನಡೆಯಬೇಕಿತ್ತು. ಆದ್ರೆ ಚಿನ್ನಸ್ವಾಮಿ ಕ್ರೀಡಾಂಗಣದಿಂದಲೇ ಟೂರ್ನಿ ಎತ್ತಂಗಡಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆಯೂ ಹಲವು ಕಾರಣಗಳಿಗಾಗಿ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ತಮ್ಮ ತವರು ಮೈದಾನವನ್ನ ಬದಲಾಯಿಸಿಕೊಂಡಿದ್ದವು. 2009 ರಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭದ್ರತಾ ಕಾರಣಗಳಿಗಾಗಿ ಇಡೀ ಟೂರ್ನಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು. 2022ರಲ್ಲಿ ಕೋವಿಡ್ ಕಾರಣಗಳಿಗಾಗಿ ಟೂರ್ನಿ ದುಬೈಗೆ ಶಿಫ್ಟ್‌ಆಗಿತ್ತು. ಆಗ ಆರ್‌ಸಿಬಿ ಸೇರಿದಂತೆ ಎಲ್ಲಾ ತಂಡಗಳೂ ತಮ್ಮ ತವರು ಕ್ರೀಡಾಂಗಣವನ್ನ ತೊರೆದಿದ್ದವು. ಆದರೆ ಕಳೆದ ಬಾರಿಯ ಕಾಲ್ತುಳಿತ ದುರಂತ ಪ್ರಕರಣ ಈಗ ಆರ್‌ಸಿಬಿ ತವರು ನೆಲವನ್ನ ತೊರೆಯುವಂತೆ ಮಾಡಿದೆ. ಇದನ್ನೂ ಓದಿ: ದೆಹಲಿ ಸ್ಫೋಟದ ಬಾಧಿತರಿಗೆ ನಮ್ಮ ಪ್ರಾರ್ಥನೆ: ಆರ್‌ಸಿಬಿ
ಪುಣೆಯಲ್ಲಿ ಪಂದ್ಯ:
ವರದಿಗಳ ಪ್ರಕಾರ, ಆರ್‌ಸಿಬಿ ತನ್ನ ಎಲ್ಲಾ ತವರು ಪಂದ್ಯಗಳನ್ನ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (MCA) ಕ್ರೀಡಾಂಗಣದಲ್ಲಿ ಆಡುವ ಸಾಧ್ಯತೆಯಿದೆ. ಈ ಕುರಿತು MCA ಕಾರ್ಯದರ್ಶಿ ಕಮಲೇಶ್ ಪೈ ಮಾತನಾಡಿ, ಪುಣೆಯಲ್ಲಿ RCB ಪಂದ್ಯಗಳನ್ನ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇದು ಇನ್ನೂ ಖಚಿತವಾಗಿಲ್ಲ. ಬೆಂಗಳೂರಿನಲ್ಲಿ ನಡೆದ ದುರಂತದ ಕಾರಣದಿಂದಾಗಿ ಅಲ್ಲಿ ಪಂದ್ಯಗಳನ್ನು ಆಯೋಜಿಸಲು ಸಮಸ್ಯೆ ಎದುರಾಗಿದೆ. ಆದ್ದರಿಂದ ಅವರು ಬೇರೆ ಕ್ರೀಡಾಂಗಣ ಹುಡುಕುತ್ತಿದ್ದಾರೆ. ನಮ್ಮ ಕ್ರೀಡಾಂಗಣವನ್ನು ಒದಗಿಸಲು ನಾವು ಮುಂದೆ ಬಂದಿದ್ದೇವೆ. ಪ್ರಾಥಮಿಕ ಚರ್ಚೆಗಳು ನಡೆದಿವೆ. ಕೆಲವು ತಾಂತ್ರಿಕ ವಿಷಯಗಳನ್ನು ಪರಿಹರಿಸಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಪುಣೆ ಆರ್‌ಸಿಬಿಯ ಪಂದ್ಯಗಳನ್ನು ಆಯೋಜಿಸಲಿದೆ ಎಂದು ತಿಳಿಸಿದ್ದಾರೆ.
ಪುಣೆಗೆ ಶಿಫ್ಟ್ ಯಾಕೆ?
ಪ್ರಸಕ್ತ ವರ್ಷದ ಜೂನ್ 4ರಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಕ ಸಂಭವಿಸಿದ ಕಾಲ್ತುಳಿತ ದುರಂತವೇ ಟೂರ್ನಿ ಸ್ಥಳಾಂತರಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಜೂನ್ 3ರ ರಾತ್ರಿ ಐಪಿಎಲ್ ಟ್ರೋಫಿ ಗೆದ್ದು 17 ವರ್ಷಗಳ ವನವಾಸಕ್ಕೆ ಅಂತ್ಯ ಹಾಡಿತ್ತು. ಮರುದಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದ ದುರಂತ ನಡೆದು 11 ಜನ ಅಭಿಮಾನಿಗಳು ಪ್ರಾಣ ಕಳೆದುಕೊಂಡರು. ಈ ಘಟನೆಯಿಂದ ಸುರಕ್ಷತೆ ಬಗ್ಗೆ ಕಳವಳ ಹೆಚ್ಚಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣವನ್ನು ದೊಡ್ಡ ಪ್ರಮಾಣದ ಕಾರ್ಯಕ್ರಮಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ಕರ್ನಾಟಕ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಸಮಿತಿ ಹೇಳಿತ್ತು. ಇದನ್ನೂ ಓದಿ: ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್ ಕನ್ನಡಿಗರು!
ಈ ಹಿಂದೆ ಮಹಿಳಾ ವಿಶ್ವಕಪ್ ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧಾರ ತೆಗೆದುಕೊಂಡಿತ್ತು. ನಂತರ ಪಂದ್ಯಗಳನ್ನು ಮುಂಬೈಗೆ ಶಿಫ್ಟ್ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಬೆಂಗಳೂರು ಪೊಲೀಸರು ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ಆಡಿಸಲು 17 ಷರತ್ತುಗಳನ್ನು ಸಹ ವಿಧಿಸಿದ್ದರು. ಒಂದು ವೇಳೆ ಬೆಂಗಳೂರಿನಲ್ಲಿ ಆಡಿಸಿ ಮತ್ತೆ ಸಮಸ್ಯೆಯಾದರೆ ಮತ್ತೊಂದು ಕಪ್ಪು ಚುಕ್ಕೆ ಬರದೇ ಇರಲು ತನ್ನ ಎಲ್ಲಾ ಪಂದ್ಯಗಳನ್ನು ಪುಣೆಯಲ್ಲಿ ಆಡಲು ಆರ್‌ಸಿಬಿ ಆಡಳಿತ ಮಂಡಳಿ ಮುಂದಾಗಿದೆ ಎನ್ನಲಾಗುತ್ತಿದೆ.
ಪುಣೆಯಲ್ಲಿ ತನ್ನ ಪಂದ್ಯಗಳನ್ನು ಶಿಫ್ಟ್ ಮಾಡುವ ಬಗ್ಗೆ ಇಲ್ಲಿಯವರೆಗೆ ಆರ್‌ಸಿಬಿ ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: ಜಯ್ ಶಾ ಮಧ್ಯಪ್ರವೇಶದಿಂದ ಪ್ರತೀಕಾ ರಾವಲ್‌ಗೆ ಸಿಕ್ತು ಚಿನ್ನದ ಪದಕ





