ಪಾಟ್ನಾ: ದೆಹಲಿಯ ಕೆಂಪು ಕೋಟೆ (Red Fort) ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ (Delhi Explosion) 13 ಮಂದಿ ಸಾವನ್ನಪ್ಪಿದ್ದು, ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಬೆನ್ನಲ್ಲೇ ಚುನಾವಣೆಗೆ ಸಜ್ಜಾಗಿರುವ ಬಿಹಾರದಲ್ಲೂ (Bihar) ಕಟ್ಟೆಚ್ಚರವಹಿಸಲಾಗಿದೆ.
ನಾಳೆ (ನ.11) ಬಿಹಾರದಲ್ಲಿ 2ನೇ ಹಂತದ ವಿಧಾನಸಭಾ ಚುನಾವಣೆ (Bihar Assembly Elections) ನಡೆಯಲಿದ್ದು, ಈಗಾಗಲೇ ರಾಜ್ಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. 20 ಜಿಲ್ಲೆಗಳ 122 ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ. 1,302 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ನ.6ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 18 ಜಿಲ್ಲೆಗಳ 123 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ದಾಖಲೆಯ 65.08%ನಷ್ಟು ಮತದಾನ ದಾಖಲಾಗಿದೆ. ಒಟ್ಟು 243 ಕ್ಷೇತ್ರಗಳ ಬಿಹಾರದಲ್ಲಿ 122 ಸರಳ ಬಹುಮತವಾಗಿದೆ. ನಾಳೆ ಸಂಜೆ 6:30ಕ್ಕೆ ಎಕ್ಸಿಟ್ ಪೋಲ್ ಸರ್ವೆಗಳ ರಿಪೋರ್ಟ್ ಅನಾವರಣವಾಗಲಿದ್ದು, ನವೆಂಬರ್ 14ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಕೆಂಪು ಕೋಟೆ ಸಮೀಪದ ಲಾಲ್ ಕಿಲಾ ಮೆಟ್ರೋ ನಿಲ್ದಾಣ ಗೇಟ್ ಸಂಖ್ಯೆ-1ರ ಬಳಿ ಸೋಮವಾರ ಸಂಜೆ 6:45 ರಿಂದ 7 ಗಂಟೆ ಅವಧಿಯಲ್ಲಿ ಸ್ಫೋಟ ಸಂಭವಿಸಿದೆ.ಸ್ಫೋಟ ಸಂಬಂಧ ದೆಹಲಿ ಪೊಲೀಸ್ ಕಮಿಷನರ್ ಸತೀಶ್ ಗೋಲ್ಚಾ ಮಾತನಾಡಿದ್ದು, ದೆಹಲಿಯ ಕೆಂಪುಕೋಟೆ ಮೆಟ್ರೋ ಸ್ಟೇಷನ್ ಗೇಟ್-1 ಬಳಿಯ ಸಿಗ್ನಲ್‌ನಲ್ಲಿ ಕಾರು ನಿಧಾನವಾಗಿ ಚಲಿಸುತ್ತಿದ್ದ ವೇಳೆ ಸ್ಫೋಟವಾಗಿದ್ದು, ಕಾರಿನಲ್ಲಿದ್ದವರು ಮೃತಪಟ್ಟಿರುವ ಸಾಧ್ಯತೆಯಿದೆ. ಸ್ಫೋಟದ ಬಗ್ಗೆ ಎನ್‌ಐಎ, ಎನ್‌ಎಸ್‌ಜಿ ತನಿಖೆ ನಡೆಸುತ್ತಿದೆ. ಸ್ಫೋಟದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಸದ್ಯ ಓರ್ವ ಶಂಕಿತನನ್ನು ವಶಕ್ಕೆ ಪಡೆದುಕೊಂಡಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ.


