– ಕಳೆದ 20 ವರ್ಷಗಳಲ್ಲಿ ಸಾವಿರಾರು ಉಗ್ರರಿಗೆ ಟ್ರೈನಿಂಗ್
– ಭಾರತದ ಎಲ್ಲಾ ಪ್ರಮುಖ ಸ್ಥಳಗಳ ನಕ್ಷೆ ಸಂಗ್ರಹ
ಶ್ರೀನಗರ: ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ರಕ್ತದೋಕುಳಿ ಹರಿಸಿದ (Pahalgam Terrorist Attack) ಉಗ್ರರ ಬಗ್ಗೆ ಹಾಗೂ ಉಗ್ರ ಸಂಘಟನೆಯ ಬಗ್ಗೆ ಮತ್ತಷ್ಟು ಸ್ಫೋಟಕ ರಹಸ್ಯಗಳು ಹೊರಬಿದ್ದಿವೆ.
ಹೌದು. ಅಂದು ಬೈಸರನ್ ಕಣಿವೆ ತೀರದಲ್ಲಿರುವ ಪಹಲ್ಗಾಮ್ಗೆ (Pahalgam) ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸುವುದಕ್ಕಾಗಿಯೇ AK-47 ಮತ್ತು M4 ಅಸಾಲ್ಟ್ ರೈಫಲ್ಗಳನ್ನ ಹೊತ್ತು ದಟ್ಟ ಕಾಡುಗಳ ಮಧ್ಯೆ 22 ಗಂಟೆಗಳ ಕಾಲ ನಡೆದುಕೊಂಡು ಬಂದಿದ್ದರು. ಇದಕ್ಕೆಲ್ಲ ತರಬೇತಿ ನೀಡಿದ್ದು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನಲ್ಲಿರುವ ʻS1ʼ ಘಟಕ. ಇದಿಷ್ಟೇ ಅಲ್ಲ ಮುಂಬೈ ದಾಳಿಯಿಂದ (Mumbai) ಹಿಡಿದು ಪಹಲ್ಗಾಮ್ ಭಯೋತ್ಪಾದಕ ದಾಳಿವರೆಗೂ ಭಾರತಕ್ಕೆ ಭಯೋತ್ಪಾದನೆ ರಫ್ತು ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿರೋದು ಈ `S1′ ಘಟಕ ಅನ್ನೋದು ಈಗ ಬೆಳಕಿಗೆ ಬಂದಿದೆ.
ʻS1ʼ ಅಂದ್ರೆ ಸಬ್ವರ್ಷನ್-1 ಅಂತ. ಈ ಘಟಕವು ಪಾಕಿಸ್ತಾನದಲ್ಲಿ (Pakistan) ಗಡಿಯಾಚೆಗಿನ ಭಯೋತ್ಪಾದನೆ ಪಡೆಗಳ ಹಿಂದೆ ಕಾರ್ಯನಿರ್ವಹಿಸುವ ದೊಡ್ಡ ಜಾಲವಾಗಿದೆ. ಪಾಕಿಸ್ತಾನಿ ಸೇನೆಯ ಕರ್ನಲ್ ಇದರ ಮುಖ್ಯಸ್ಥರಾಗಿರುತ್ತಾರೆ. ‘ಗಾಜಿ 1’ ಮತ್ತು ‘ಗಾಜಿ 2’ ಕೋಡ್ನಿಂದ ಕರೆಯಲ್ಪಡುವ ಇಬ್ಬರು ರ್ಯಾಂಕ್ ಆಫೀಸರ್ಗಳು ಇದರ ಕಾರ್ಯಾಚರಣೆ ಜವಾಬ್ದಾರಿ ಹೊತ್ತಿರುತ್ತಾರೆ. ಇಸ್ಲಾಮಾಬಾದ್ನಲ್ಲಿ ಇದರ ಕಚೇರಿ ಇದ್ದು, ಇಲ್ಲಿಂದಲೇ ಶಸ್ತ್ರಾಸ್ತ್ರಗಳು, ಹಣ ಪೂರೈಕೆಯಾಗುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ʻS1ʼ ಘಟಕದ ಸಿಬ್ಬಂದಿ ಮತ್ತು ತರಬೇತುದಾರರು ಎಲ್ಲಾ ರೀತಿ ಬಾಂಬ್ ಮತ್ತು ಸುಧಾರಿತ ಸ್ಫೋಟಕ ಸಾಧನ (IED) ತಯಾರಿಸುವಲ್ಲಿ ಪರಿಣಿತರಾಗಿರ್ತಾರೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ನಿರ್ವಹಣೆ ಮಾಡೋದ್ರಲ್ಲಿ ಎತ್ತಿದ ಕೈ ಆಗಿರ್ತಾರೆ. ಭಾರತದ ಬಹುತೇಕ ಸ್ಥಳಗಳ ನಕ್ಷೆಗಳನ್ನ ಈ ಘಟಕ ಹೊಂದಿದ್ದು, ಆಗಾಗ್ಗೆ ಉಗ್ರ ಕೃತ್ಯ ಎಸಗಲು ಸಂಚು ರೂಪಿಸುತ್ತಲೇ ಇರುತ್ತದೆ. ಅದಕ್ಕೆ ಬೇಕಾದ ರೀತಿಯಲ್ಲಿ ತರಬೇತಿ ನೀಡಿ ಭಯೋತ್ಪಾದಕರನ್ನ ತಯಾರಿಸುವಲ್ಲಿ ಈ ಘಟಕ ಸಕ್ರಿಯವಾಗಿದೆ. ಕಳೆದ 2 ದಶಕಗಳಲ್ಲಿ ಈ ಘಟಕವು ಸಾವಿರಾರು ಭಯೋತ್ಪಾದಕರಿಗೆ ತರಬೇತಿ ನೀಡಿದ್ದು, ಭಾರತಕ್ಕೂ ಕಳುಹಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯಾವ್ಯಾವ ಉಗ್ರ ಸಂಘಟನೆಗಳು ಸಕ್ರೀಯ?
ಜಮ್ಮುವಿನ ವಿಸ್ತಾರ ಪ್ರದೇಶವನ್ನು ಪಾಕ್ ಮೂಲದ ಉಗ್ರರು ಈ ಹಿಂದೆಯೂ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿದ್ದಾರೆ. ಸುರಂಗಗಳ ಮೂಲಕ ಉಗ್ರರು ದೇಶಕ್ಕೆ ನುಸುಳುತ್ತಿದ್ದು, ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನೂ ಸರಬರಾಜು ಮಾಡಿಕೊಳ್ಳುತ್ತಿದ್ದರು. ಅಲ್ಲದೇ ದೇಶದ ಗಡಿ ಭಾಗದಲ್ಲಿ ಹಿಂಸಾಚಾರ ಹೆಚ್ಚಿಸಲು ನಿಗೂಢ ಹತ್ಯೆ ಮಾಡುತ್ತಿದ್ದರು. ಈಗಲೂ ಅನೇಕ ಭಯೋತ್ಪಾದಕ ಗುಂಪುಗಳು ಗಡಿಯಾಚೆಗೆ ಸಕ್ರಿಯವಾಗಿವೆ. ಅದರಲ್ಲಿ ಟಿಆರ್ಎಫ್ ಪ್ರಮುಖವಾಗಿದೆ, ಇದನ್ನ ಜೈಶ್-ಎ-ಮೊಹಮ್ಮದ್ನ ಪ್ರಾಕ್ಸಿ ಎಂದು ಕರೆಯಲಾಗುತ್ತದೆ. ಇದರ ಹೊರತಾಗಿ ಜಮ್ಮು ಮತ್ತು ಕಾಶ್ಮೀರ ಘಜ್ವಾನಿ ಫೋರ್ಸ್, ಕಾಶ್ಮೀರ ಟೈಗರ್ಸ್ ಮತ್ತು ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಉಗ್ರ ಸಂಘಟನೆಗಳು ಸಕ್ರೀಯವಾಗಿವೆ. ಇವು ಆರ್ಟಿಕಲ್ 370 ರದ್ದಾದ ಬಳಿಕ ಅಸ್ತಿತ್ವಕ್ಕೆ ಬಂದಿವೆ.



