– ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
– ಹಿಂದಿ, ಇಂಗ್ಲಿಷ್‌ನಿಂದ ನಮ್ಮ ಮಕ್ಕಳ ಪ್ರತಿಭೆಗೆ ಸಮಸ್ಯೆಯಾಗಿದೆ: ಸಿಎಂ
ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ. ತೆರಿಗೆ ಪಾಲಿನಲ್ಲಿ ನಮಗೆ ಕೇಂದ್ರ ಅನ್ಯಾಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.
70ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ, ಹಿಂದಿ ಭಾಷೆ ಹೇರಿಕೆ ಮಾಡೋ ಕೆಲಸ ಕೇಂದ್ರ ಮಾಡ್ತಿದೆ. ಕೇಂದ್ರ ಸರ್ಕಾರ ಕರ್ನಾಟಕದ ವಿರೋಧಿ ಆಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಟ್ಟರೂ ಅದಕ್ಕೆ ಅಗತ್ಯ ಸಹಕಾರ ಕೇಂದ್ರ ಕೊಡ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಒಕ್ಕೊರಲಿನಿಂದ ಖಂಡಿಸಬೇಕಿದೆ. 15ನೇ ಹಣಕಾಸು ಆಯೋಗದಿಂದ 70 ಸಾವಿರ ಕೋಟಿ ಅನ್ಯಾಯ ರಾಜ್ಯಕ್ಕೆ ಆಗಿದೆ. ಕೇಂದ್ರದಿಂದ ರಾಜ್ಯಕ್ಕೆ ಸುಮಾರು 1 ಲಕ್ಷ ಕೋಟಿ ಅನ್ಯಾಯ ಆಗಿದೆ. ರಾಜ್ಯಗಳನ್ನು ಕಬ್ಜ ಮಾಡುವ ಹೊಸಹತುಶಾಹಿ ವ್ಯವಸ್ಥೆ ಕೇಂದ್ರ ಮಾಡ್ತಿದೆ. ಕೋಮುದ್ವೇಷಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು ಎಂದು ಕೇಂದ್ರ ಸರ್ಕಾರ, ಕೋಮುವಾದಿಗಳ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಎಐನಿಂದ ಉದ್ಯೋಗ ನಷ್ಟ ಆಗುವ ಆತಂಕ ಇದೆ. ಕನ್ನಡವನ್ನು ತಂತ್ರಜ್ಞಾನಕ್ಕೆ ಬಳಕೆ ಆಗುವಂತೆ ಸಿದ್ಧವಾಗಬೇಕು. ಇದಕ್ಕಾಗಿ ಹೊಸ ನೀತಿ ತರಲು ಮುಂದಾಗುತ್ತೇವೆ ಎಂದು ತಿಳಿಸಿದರು.

70 ನೇ ವರ್ಷದ ರಾಜ್ಯೋತ್ಸವ ಮಾಡ್ತಿದ್ದೇವೆ. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಎಲ್ಲರನ್ನೂ ಸ್ಮರಿಸಬೇಕು. ಹೋರಾಟದಲ್ಲಿ ಮೃತರಾದವರಿಗೆ ನಮಿಸುತ್ತೇನೆ. ಆಲೂರು ವೆಂಕಟರಾಯರು ಸೇರಿ ಮಹನೀಯರನ್ನು ಸ್ಮರಿಸುತ್ತೇನೆ. ಇವರ ಹೋರಾಟದ ಫಲ ಇವತ್ತು ರಾಜ್ಯೋತ್ಸವ ಮಾಡ್ತಿದ್ದೇವೆ. ಕನ್ನಡ ಎಂದರೆ ಕೇವಲ ನಾಡಲ್ಲ. ಭಾಷೆಯೂ ನಮ್ಮ ಹೆಮ್ಮೆಯ ಪರಂಪರೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಮಹಾಭಾರತದಲ್ಲಿ ಕನ್ನಡ ಭಾಷೆಯ ಉಲ್ಲೇಖ ಇದೆ. ಗೋಕಾಕ್ ಚಳವಳಿಯಲ್ಲಿ ಭಾಗಿಯಾದವರನ್ನು ನೆನಪು ಮಾಡಿಕೊಳ್ತೀನಿ. ವಚನಕಾರರು, ಸೂಫಿ ಸಂತರು, ಕವಿಗಳು, ಸಾಂಸ್ಕೃತಿಕ ಪರಂಪರೆ ಶ್ರೀಮಂಗೊಳಿಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವಾಗಲು ಹಿರಿಯರು ಪ್ರಯತ್ನ ಮಾಡಿದ್ದಾರೆ. ಶಿಕ್ಷಣದಲ್ಲಿ ಕನ್ನಡ ಭಾಷೆಗೆ ಹಿನ್ನಡೆ ಆಗಿದೆ. ಇಂಗ್ಲಿಷ್, ಹಿಂದಿ ಭಾಷೆಗಳು ನಮ್ಮ ಮಕ್ಕಳ ಪ್ರತಿಭೆಗೆ ಸಮಸ್ಯೆ ಮಾಡಿವೆ. ಹೀಗಾಗಿ, ಮಾತೃಭಾಷೆಯಲ್ಲಿ ಶಿಕ್ಷಣ ಕೊಡುವ ಕಾನೂನು ಬರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಕಾನೂನು ಜಾರಿಗೆ ಕ್ರಮ ಮಾಡಬೇಕು. ಬೂಕರ್ ಪ್ರಶಸ್ತಿ ಕನ್ನಡಕ್ಕೆ ಬಂದಿದೆ ಎಂದರು.
ಮೊದಲು ಭಾಷಣ ಮಾಡಿದ್ದ ಸಚಿವ ಮಧು ಬಂಗಾರಪ್ಪ, ಕನ್ನಡ ಕೇವಲ ಭಾಷೆ ಅಲ್ಲ. ನಮ್ಮ ಉಸಿರು. ಕನ್ನಡ ಉಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ. ಕನ್ನಡಕ್ಕೆ 8 ಜ್ಞಾನಪೀಠ ಬಂದಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮ ಅನುಷ್ಠಾನ ಮಾಡಿದ್ದೇವೆ. 13 ಸಾವಿರ ಶಿಕ್ಷಕರ ನೇಮಕ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 10 ಸಾವಿರ, ಅನುದಾನಿತ ಶಾಲೆಗಳಲ್ಲಿ 6 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಶುರುವಾಗಿದೆ. 800 ಏPS ಶಾಲೆ ಪ್ರಾರಂಭಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 850 ಕೋಟಿ ಶಾಲಾ ಕೊಠಡಿಗಳು, ಮೂಲಭೂತ ಸೌಕರ್ಯಗಳಿಗ ಹಣ ಬಿಡುಗಡೆ ಮಾಡಲಾಗಿದೆ. 750 ಕೋಟಿ ಶಾಲೆಗಳ ರಿಪೇರಿಗೆ ಹಣ ಬಿಡುಗಡೆ ಮಾಡಲಾಗಿದೆ. 46 ಕೋಟಿ ವೆಚ್ಚದಲ್ಲಿ ಅಡುಗೆ ಮಾಡಲು ಹೊಸ ಪಾತ್ರ ಕೊಡಲಾಗಿದೆ. 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡಲಾಗಿದೆ. 2 ಸಾವಿರ ಗೌರವಧನ ಜಾಸ್ತಿ ಮಾಡಲಾಗಿದೆ. 79.71% ಫಲಿತಾಂಶ ಈ ಬಾರಿ SSಐಅ ಯಲ್ಲಿ ಬಂದಿದೆ. 85.1% ಪಿಯುಸಿ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಮಕ್ಕಳ ದಿನಾಚರಣೆ ದಿನದಂದು ರಾಜ್ಯದಲ್ಲಿ ಮೊದಲ ಬಾರಿಗೆ ಕರ್ನಾಟಕ ಪೋಷಕರು-ಶಿಕ್ಷರ ಮೆಗಾ ಪಿಟಿಎಂ ಕಾರ್ಯಕ್ರಮ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಪೋಷಕರ ಸಭೆ ಆಯೋಜನೆ ಮಾಡಲಾಗುವುದು. ಪೋಷಕರು, ಶಿಕ್ಷಕರ ಸಭೆ ನಡೆಸಲಾಗುವುದು. ನವೆಂಬರ್ 14 ರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಇನ್ಮುಂದೆ ಪೋಷಕರ ಸಭೆ ಆಯೋಜನೆಗೆ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಈ ವರ್ಷದಿಂದಲೇ ಕಾರ್ಯಕ್ರಮ ಜಾರಿಯಾಗಲಿದೆ ಎಂದು ಸಚಿವರು ಘೋಷಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ನಮ್ಮ ಉಸಿರು ಕನ್ನಡ, ಕಸುಬು, ಹೆಸರು ಕನ್ನಡ. ಕನ್ನಡವಿದು ಕನ್ನಡ. ಬನ್ನಿ ನಮ್ಮ ಸಂಗಡ. ನಂಗೆ ಸಂತೋಷ ಆಗ್ತಿದೆ. ಬಾಲ್ಯದ ದಿನ ನೆನಪು ಆಗ್ತಿದೆ. ಶಾಲೆಯಲ್ಲಿ ನಾನು ಪಥ ಸಂಚಲನದಲ್ಲಿ ಭಾಗಿಯಾಗಿದ್ದೆ. ಹೈಸ್ಕೂಲ್‌ನಲ್ಲಿ ಬ್ಯಾಂಡ್ ಬಾರಿಸಿದ್ದೆ. 50 ವರ್ಷಗಳ ನೆನಪು ನನಗೆ ಆಗಿದೆ. ನಮ್ಮ ಮಕ್ಕಳು ದೇಶಕ್ಕೆ ಶಿಸ್ತಿನ ಸಂದೇಶ ಕಳಿಸಲು ಬಂದಿದ್ದೀರಾ? ಕನ್ನಡಿಗರನ್ನ ಒಗ್ಗೂಡಿಸುವ ದಿನ ಇದು. ಕನ್ನಡ ರಕ್ಷಣೆಗೆ ಅನೇಕ ಹಿರಿಯರು ಹೋರಾಟ ಮಾಡಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಮಾಡಿದ್ದೇವೆ. ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸ ಇದೆ. ಕರ್ನಾಟಕಕ್ಕೆ ಬಂದವರು ಯಾರು ವಾಪಸ್ ಹೋಗೊಲ್ಲ. ಎಲ್ಲಾ ಬೋರ್ಡ್ಗಳಲ್ಲಿ 60% ಕನ್ನಡ ಇರಬೇಕು ಅಂತ ಆದೇಶ ಮಾಡಲಾಗಿದೆ. ಕನ್ನಡಕ್ಕೆ ಬಾವುಟ ಇದೆ. ನಾಡಗೀತೆ ಇದೆ. ಬೇರೆ ಯಾವುದೇ ರಾಜ್ಯಕ್ಕೆ ಇಲ್ಲ. ಕರ್ನಾಟಕ ನಮ್ಮ ಸಂಸ್ಕೃತಿಯ ಬೀಡು. ಕಲಿತಂತೆ ಅಮೃತ. ಕನ್ನಡ ಭಾರತದ ಎರಡನೇ ದೊಡ್ಡ ಭಾಷೆ. ಕರ್ನಾಟಕ ಭಾಷೆ ಅಲ್ಲ ಅದೊಂದು ಸಂಸ್ಕೃತಿ. ಕುವೆಂಪು ಸೇರಿ ಸಾಹಿತಿಗಳು, ದಾಸರ ಪರಂಪರೆ ಇದೆ. ನಾಡಿನ ಜನರಿಗೆ ರಾಜ್ಯೋತ್ಸವದ ಶುಭಾಶಯಗಳು ಎಂದರು.
ಬೆಳಗಾವಿಯಲ್ಲಿ ಎಂಇಎಸ್ ಪ್ರತಿಭಟನೆಗೆ ಪೋಲೀಸರು ರಕ್ಷಣೆ ಕೊಡುತ್ತಿರುವುದು ಹಾಗೂ ಸೆಲ್ಫಿ ತೆಗೆದುಕೊಂಡ ವಿಚಾರವಾಗಿ ಮಾತನಾಡಿ, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಗೃಹ ಸಚಿವರ ಗಮನಕ್ಕೆ ಬಂದಿರಬಹುದು. ಎಂಇಎಸ್‌ನವರು ಕೂಡ ಕನ್ನಡಿಗರೇ. ಅವರನ್ನು ಬದಲಾಯಿಸುವ ಪ್ರಯತ್ನ ಮಾಡ್ತೀವಿ ಎಂದು ತಿಳಿಸಿದರು.
ಇಂದು ಬೆಳಗ್ಗೆ ಕಂಠೀರವ ಕ್ರೀಡಾಂಗಣದಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮೊದಲು ಭುವನೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸಲಾಯಿತು. ನಂತರ 9 ಗಂಟೆಗೆ ಸಿಎಂ ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಲೆಗಳಿಂದ ಭಾಗವಹಿಸಿದ್ದ ಮಕ್ಕಳು ಪಥಸಂಚಲನ ನಡೆಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ಸಮಾರಂಭದಲ್ಲಿ ಸಭಾಪತಿ ಹೊರಟ್ಟಿ, ಶಾಸಕ ರಿಜ್ವಾನ್ ಅರ್ಷದ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
