– ದಿಗ್ಗಜರಿಗೆ ಗೆಲುವಿನ ವಿದಾಯ ಸಿಗುತ್ತಾ?
ಸಿಡ್ನಿ: ಮಾಜಿ ನಾಯಕರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಆಸೀಸ್ ನೆಲದಲ್ಲಿ ವೃತ್ತಿಜೀವನದ ಕೊನೇ ಪಂದ್ಯಕ್ಕೆ ಸಜ್ಜಾಗಿದ್ದು ಎಂಬ ಮಾತುಗಳು ಕೇಳಿಬಂದಿದ್ದು, ಇಂದೇ ನಿವೃತ್ತಿ ಘೋಷಿಸುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಈ ಇಬ್ಬರು ದಿಗ್ಗಜರಿಗೆ ಪಂದ್ಯವನ್ನು ಸ್ಮರಣೀಯವನ್ನಾಗಿಸುವ ಸವಾಲು ಶುಭಮಾನ್ ಗಿಲ್ ಬಳಗದ ಮುಂದಿದೆ.
ಹಿಂದೆಂದೂ ಆಸೀಸ್‌ಗೆ ಕ್ಲೀನ್‌ಸ್ವೀಪ್ ಸಾಧಿಸಲು ಅವಕಾಶ ನೀಡದ ಭಾರತ ಈಗ ಆ ಭೀತಿಯಲ್ಲಿದೆ. ಸಿಡ್ನಿ (Sydney) ಅಂಗಳದಲ್ಲಿಂದು ನಡೆಯಲಿರುವ ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ, ಏಕದಿನ ಸರಣಿ (ODI series) ವೈಟ್‌ವಾಷ್‌ನಿಂದ ಪಾರಾಗುವ ಕಠಿಣ ಪರೀಕ್ಷೆ ಎದುರಿಸಲಿದೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ 2 ಪಂದ್ಯ ಗೆದ್ದು ಸರಣಿ ತನ್ನದಾಗಿಸಿಕೊಂಡಿರುವ ಆಸಿಸ್‌ಗೆ ಇದು ಆಟಕ್ಕುಂಟು ಲೆಕ್ಕಕ್ಕಿಲದ ಪಂದ್ಯವಾಗಿದೆ. ಚೊಚ್ಚಲ ಬಾರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಎದುರು ಕ್ಲೀನ್ ಸ್ವೀಪ್ ಸಾಧಿಸಲು ಹೋರಾಡಲಿದೆ. ರೋಹಿತ್- ಕೊಹ್ಲಿ ಆಸೀಸ್‌ನಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿಯುವುದರ ಜೊತೆಗೆ ಸರಣಿ ಸೋಲಿನ ಅಂತರ ತಗ್ಗಿಸುವ ಒತ್ತಡ ಗಿಲ್ ಪಡೆಗಿದೆ.
ಆಸ್ಟ್ರೇಲಿಯಾದಲ್ಲಿ ಮುಂದಿನ ಎರಡು ವರ್ಷ ಭಾರತ ಯಾವುದೇ ಏಕದಿನ ಸರಣಿ ಆಡದಿರುವುದರಿಂದ ರೋ-ಕೊ ಪಾಲಿಗೆ ಇದು ಆಸೀಸ್‌ನಲ್ಲಿ ಬಹುತೇಕ ಕೊನೇ ಪಂದ್ಯ ಎನಿಸಿದೆ.
2007-08ರ ಕಾಮನ್ವೆಲ್ತ್ ಬ್ಯಾಂಕ್ ಸರಣಿಯಲ್ಲಿ ರೋಹಿತ್ ಮೊದಲ ಬಾರಿ ಅಸ್ಟ್ರೇಲಿಯಾ ಪ್ರವಾಸ ಕೈಗೊಂಡರೆ, ಕೊಹ್ಲಿ 2011-12ರ ಟೆಸ್ಟ್ ಸರಣಿಯ ಅಡಿಲೇಡ್ ಪಂದ್ಯದಲ್ಲಿ ಶತಕದೊಂದಿಗೆ ಗಮನಸೆಳೆದಿದ್ದರು. ಆಧುನಿಕ ಕ್ರಿಕೆಟ್‌ನ ದಿಗ್ಗಜ ಕೊಹ್ಲಿ ಸರಣಿಯ ಎರಡು ಪಂದ್ಯಗಳಲ್ಲಿ ಸತತ 2 ಶೂನ್ಯ ಸಂಪಾದನೆಯೊಂದಿಗೆ ನಿರಾಸೆ ಮೂಡಿಸಿದ್ದಾರೆ. ಟೆಸ್ಟ್ ನಾಯಕನಾಗಿ ಇಂಗ್ಲೆಂಡ್‌ನಲ್ಲಿ ರನ್ ಹೊಳೆ ಹರಿಸಿದ್ದ ಶುಭಮನ್ ಗಿಲ್, ಏಕದಿನದಲ್ಲಿ ವಿಲರಾಗಿದ್ದಾರೆ. ಎರಡು ಪಂದ್ಯಗಳಲ್ಲಿ ಕ್ರಮವಾಗಿ 10, 9 ರನ್ ಮಾತ್ರ ಕಲೆಹಾಕಿದ್ದಾರೆ. ಆರಂಭಿಕ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್‌ರಿಂದ ಪೈಪೋಟಿ ಎದುರಿಸುತ್ತಿರುವ ರೋಹಿತ್ ಶರ್ಮಾ, ಹಿಂದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತುಸು ನಿರಾಳರಾಗಿದ್ದಾರೆ. ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಹಾಗೂ ಕೆಎಲ್ ರಾಹುಲ್‌ರಿಂದ ಹೆಚ್ಚಿನ ರನ್ ಕೊಡುಗೆಯ ನಿರೀಕ್ಷೆ ಇದೆ.
ಸಿಡ್ನಿಯಲ್ಲಿ ಭಾರತ ಇದುವರೆಗೆ ಅಡಿರುವ ಐದು ಪಂದ್ಯಗಳ ಪೈಕಿ 1ರಲ್ಲಿ ಮಾತ್ರ ಗೆದ್ದಿದೆ. ಇಂದಿನ ಪಂದ್ಯದಲ್ಲಿ ವೈಟ್‌ವಾಶ್ ತಪ್ಪಿಸಿಕೊಳ್ಳಲಾದ್ರೂ ಈ ಪಂದ್ಯ ಗೆಲ್ಲಲೇಬೇಕಿದೆ.



