ಉಣ್ಣಿಯಪ್ಪಂ ಕೇರಳದ ಸ್ಪೆಷಲ್ ಸ್ವೀಟ್ ಆಗಿದೆ. ಈ ಸಿಹಿ ತಿಂಡಿಯನ್ನು ಹಬ್ಬ ಇನ್ನಿತರ ವಿಶೇಷ ದಿನಗಳಲ್ಲಿ ತಯಾರಿಸಲಾಗುತ್ತದೆ. ಈ ಸ್ವೀಟ್ ತಯಾರಿಸೋದು ಹೇಗೆ ಎಂಬ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು
* 2 ಕಪ್ ಅಕ್ಕಿ ಹಿಟ್ಟು
* 1 ಕಪ್ ಗೋಧಿ ಹಿಟ್ಟು
* 250–300 ಗ್ರಾಂ ಬೆಲ್ಲ
* 2-3 ಮಾಗಿದ ಬಾಳೆಹಣ್ಣು
+ 1/2 ಕಪ್ ತೆಂಗಿನಕಾಯಿ ಚೂರುಗಳು
* 1.5 ಟೀ ಚಮಚ ಕಪ್ಪು ಎಳ್ಳು
* 1/2–1 ಟೀ ಚಮಚ ಅಡುಗೆ ಸೋಡಾ
* 1 ಟೀ ಚಮಚ ತುಪ್ಪ ಹಾಗೂ ಎಣ್ಣೆ
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ 1 ಕಪ್ ನೀರು ಹಾಗೂ ಬೆಲ್ಲದೊಂದಿಗೆ ಸೇರಿಸಿ, ಅದು ಸಂಪೂರ್ಣವಾಗಿ ಕರಗುವವರೆಗೆ ಬಿಸಿ ಮಾಡಬೇಕು. ನಂತರ ಅದನ್ನು ಫಿಲ್ಟರ್ ಮಾಡಿ ಇರಿಸಿ. ತುಪ್ಪವನ್ನು ಬಿಸಿ ಮಾಡಿ, ಕಪ್ಪು ಎಳ್ಳು ಮತ್ತು ತೆಂಗಿನಕಾಯಿ ಚೂರುಗಳನ್ನು ಗೋಲ್ಡನ್ ಬ್ರೌನ್ ಆಗುವ ವರೆಗೆ ಹುರಿಯಬೇಕು
ಬಳಿಕ ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಅದಕ್ಕೆ ಸೋಸಿದ ಬೆಲ್ಲದ ಪಾಕ ಸೇರಿಸಿ ಮಿಕ್ಸ್ ಮಾಡಬೇಕು. ನಂತರ ಒಂದು ದೊಡ್ಡ ಬಟ್ಟಲಿನಲ್ಲಿ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಬಾಳೆಹಣ್ಣು ಮತ್ತು ಬೆಲ್ಲದ ಪಾಕ ಸೇರಿಸಿ ಒಟ್ಟಿಗೆ ಮಿಶ್ರಣ ಮಾಡಿ, ಇಡ್ಲಿ ಹಿಟ್ಟಿನ ಹದ ಬರುವಂತೆ ನೀರು ಸೇರಿಸುತ್ತ ತಯಾರಿ ಮಾಡಬೇಕು.
ನಂತರ, ಹುರಿದ ತೆಂಗಿನಕಾಯಿ ತುಂಡುಗಳು, ಎಳ್ಳು ಮತ್ತು ಅಡಿಗೆ ಸೋಡಾ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, 30–45 ನಿಮಿಷಗಳ ಕಾಲ ಬಿಡಬೇಕು.
ನಂತರ ಒಲೆಯ ಮೇಲೆ ಪಡ್ಡು ತಯಾರಿಸುವ ಕಾವಲಿ ಇಟ್ಟು ಸ್ವಲ್ಪ ಸ್ವಲ್ಪ ತುಪ್ಪ ಸೇರಿಸುತ್ತಾ ತಯಾರಾದ ಹಿಟ್ಟನ್ನು ಬೇಯಿಸಬೇಕು. ಒಂದು ಬದಿ ಬೆಂದ ನಂತರ ಇನ್ನೊಂದು ಬದಿ ಮಗುಚಿ ಬೇಯಿಸಬೇಕು. ಈಗ ಕೇರಳದ ಸ್ಪೆಷಲ್ ಉಣ್ಣಿಯಪ್ಪಂ ರೆಡಿ!