– ಸಂಪೂರ್ಣ ಜಾಲಿವುಡ್ ಸ್ಟುಡಿಯೋ ಕಾರ್ಯಾಚರಣೆಗೆ ಅನುಮತಿ ಇಲ್ಲ
– ಕಾರಿನಲ್ಲಿ ಸ್ಪರ್ಧಿಗಳು ಮನೆಗೆ ಶಿಫ್ಟ್
ರಾಮನಗರ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಆದೇಶದ ಬೆನ್ನಲ್ಲೇ ಮಧ್ಯರಾತ್ರಿ ಬಿಡದಿ ಬಳಿ ಇರುವ ಬಿಗ್‌ಬಾಸ್ (Bigg Boss) ಮನೆಯನ್ನು ತೆರೆಯಲಾಗಿದ್ದು ಸ್ಪರ್ಧಿಗಳನ್ನು ಶಿಫ್ಟ್ ಮಾಡಲಾಗಿದೆ.
ನಸುಕಿನ ಜಾವ 2:45ಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಎಸ್‌ಪಿ ಶ್ರೀನಿವಾಸ್ ಗೌಡ, ತಹಶಿಲ್ದಾರ್ ತೇಜಸ್ವಿನಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಜಾಲಿವುಡ್ ಸ್ಟುಡಿಯೋದ ಗೇಟ್ ಸೀಲ್ ಓಪನ್ ಮಾಡಿದ್ದಾರೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಯಶವಂತ್ ವಿ ಗುರುಕರ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ತೆರೆದಿದ್ದೇವೆ. ಜಾಲಿವುಡ್ ಸಂಪೂರ್ಣ ಕಾರ್ಯಾಚರಣೆ ನಡೆಸಲು ಅವಕಾಶ ನೀಡಿಲ್ಲ. ಕೇವಲ ಬಿಗ್ ಬಾಸ್ ಶೋ ಸ್ಪರ್ಧಿಗಳು, ಸಿಬ್ಬಂದಿ ಓಡಾಟ ಹಾಗೂ ಅಗತ್ಯ ವಸ್ತುಗಳ ಬಳಕೆಗೆ ಅವಕಾಶ ಕೊಡಲಾಗಿದೆ. ಬಿಗ್ ಬಾಸ್ ಶೂಟಿಂಗ್ ಆರಂಭದ ಬಗ್ಗೆ ನಾಳೆ ತೀರ್ಮಾನ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಗ್‌ಬಾಸ್‌ಗೆ ರಿಲೀಫ್| ಜಾಲಿವುಡ್ ಸ್ಟುಡಿಯೋಸ್ ಓಪನ್‌ಗೆ ಡಿಸಿಎಂ ಸೂಚನೆ – ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್
ಸದ್ಯಕ್ಕೆ ಬಿಗ್‌ಬಾಸ್ ಶೋ ನಡೆಯುವ ಜಾಗ ಮಾತ್ರ ತೆರೆಯಲಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಬಿಗ್ ಬಾಸ್ ಸಿಬ್ಬಂದಿ ಕ್ಯಾಬ್ ಮೂಲಕ ಆಗಮಿಸಿದ್ದಾರೆ. ಇದರ ಜೊತೆ ಬಿಡದಿಯ ರೆಸಾರ್ಟ್‌ನಲ್ಲಿರುವ ಸ್ಪರ್ಧಿಗಳು ಮನೆಗೆ ಬಂದಿದ್ದಾರೆ,.
ಬಿಗ್ ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದ ಸೀಲ್ ಅನ್ನು ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಾನು ನಿರ್ದೇಶನ ನೀಡಿದ್ದೇನೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದರು.
ಪರಿಸರ ನಿರ್ವಹಣೆ ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು. ಪರಿಸರ ಸಂರಕ್ಷಣೆಯ ಕಡೆಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುವುದರ ಜೊತೆಗೆ ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದರು.