ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ಬಹು ನಿರೀಕ್ಷಿತ ‘ಅಖಂಡ 2’ (Akhanda 2) ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಅಖಂಡ ಚಿತ್ರದ ಮುಂದುವರಿದ ಭಾಗವಾಗಿರುವ ಅಖಂಡ-2 ಡಿಸೆಂಬರ್ 5, 2025 ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರಲಿದೆ.
ಬೊಯಪಾಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್ನ ನಾಲ್ಕನೇ ಸಿನಿಮಾ ಇದಾಗಿದೆ. ಈ ಹಿಂದೆ ಬಂದಿದ್ದ ಸಿಂಹ, ಲೆಜೆಂಡ್ ಹಾಗೂ 2021ರಲ್ಲಿ ಬಿಡುಗಡೆ ಆಗಿದ್ದ ಅಖಂಡ ಸಿನಿಮಾಗಳು ಭಾರಿ ಯಶಸ್ಸುಗಳಿಸಿವೆ. ಇದೀಗ `ಅಖಂಡ-2’ರ ನಿರ್ದೇಶನದಲ್ಲಿ ಬೊಯಪಾಟಿ ತೊಡಗಿದ್ದಾರೆ. ಪ್ರತಿಷ್ಠಿತ 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತ ನಿರ್ಮಿಸಿರುವ ಈ ಚಿತ್ರವನ್ನು ಎಂ ತೇಜಸ್ವಿನಿ ನಂದಮೂರಿ ಪ್ರಸ್ತುತಪಡಿಸಿದ್ದಾರೆ.
ಅಖಂಡ-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ.ಚಿತ್ರದಲ್ಲಿ ಬಾಲಯ್ಯಗೆ ಜೋಡಿಯಾಗಿ ಸಂಯುಕ್ತಾ ನಟಿಸುತ್ತಿದ್ದು, ಆದಿ ಪಿನಿಸೆಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ.
ಹೈ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಅಖಂಡ-2 ಸಿನಿಮಾಗೆ ಎಸ್ ಥಮನ್ ಸಂಗೀತ ನಿರ್ದೇಶನ, ಸಿ ರಾಮಪ್ರಸಾದ್, ಸಂತೋಷ್ ಡಿ ಡೆಟಕೆ ಛಾಯಾಗ್ರಹಣ, ಎ.ಎಸ್ ಪ್ರಕಾಶ್ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್ ಫೈಟ್ ಚಿತ್ರಕ್ಕಿರಲಿದೆ.