ಮನಿಲಾ: ಮಂಗಳವಾರ ತಡರಾತ್ರಿ ಮಧ್ಯ ಫಿಲಿಪಿನ್ಸ್ (Philippines Earthquake) ಪ್ರಾಂತ್ಯದಲ್ಲಿ ಸಂಭವಿಸಿದ 6.9 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ. ಹಲವಾರು ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ.
ತೀವ್ರ ಕಂಪನದಿಂದಾಗಿ ವಿದ್ಯುತ್ ಕಡಿತಗೊಂಡು, ನಿವಾಸಿಗಳು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಇದನ್ನೂ ಓದಿ: ಬಾಗ್ರಾಮ್ ವಾಯುನೆಲೆ | ಅಮೆರಿಕ ವಿರುದ್ಧ ಯುದ್ಧಕ್ಕೂ ಸೈ ಎಂದ ತಾಲಿಬಾನ್ – ಏನಿದು ವಿವಾದ?
ಐದು ಕಿಲೋಮೀಟರ್ ಆಳದಲ್ಲಿ ಭೂಕಂಪವಾಗಿದೆ. ಸೆಬು ಪ್ರಾಂತ್ಯದಲ್ಲಿ ಸುಮಾರು 90,000 ಜನಸಂಖ್ಯೆಯನ್ನು ಹೊಂದಿರುವ ಕರಾವಳಿ ನಗರವಾದ ಬೊಗೊದಿಂದ ಸುಮಾರು 19 ಕಿಲೋಮೀಟರ್ ಈಶಾನ್ಯಕ್ಕೆ ಇದರ ಪರಿಣಾಮ ತಟ್ಟಿದೆ.
ಬೊಗೊದಲ್ಲಿ ಕನಿಷ್ಠ 14 ನಿವಾಸಿಗಳು ಸಾವನ್ನಪ್ಪಿದ್ದಾರೆ. ಭೂಕುಸಿತದಿಂದಾಗಿ ಅನೇಕರು ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬೊಗೊದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಾಂಬ್ ದಾಳಿ – ಕನಿಷ್ಠ 10 ಜನರು ಸಾವು
ಭೂಕಂಪದ ತೀವ್ರತೆಗೆ ಸಾಕಷ್ಟು ಹಾನಿಯಾಗಿದೆ. ಈ ಪ್ರದೇಶದಲ್ಲಿ ಸಂಚಾರವೂ ಕಷ್ಟಕರವಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಗೊ ಬಳಿಯ ಮೆಡೆಲಿನ್ ಪಟ್ಟಣದಲ್ಲಿ ಮನೆಗಳ ಛಾವಣಿಗಳು ಮತ್ತು ಗೋಡೆಗಳು ಬಿದ್ದು 12 ಸಾವನ್ನಪ್ಪಿದ್ದಾರೆ. ಕೆಲವರು ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.