ರಾಯ್ಪುರ್: ಮದ್ಯ ಹಗರಣದಲ್ಲಿ (Chhattisgarh Liquor Scam) ಜಾರಿ ನಿರ್ದೇಶನಾಲಯದಿಂದ (Enforcement Directorate) ಅರೆಸ್ಟ್ ಆಗಿ, ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಿಎಂ ಭೂಪೇಶ್ ಬಘೇಲ್ (Bhupesh Baghel) ಪುತ್ರ ಚೈತನ್ಯ ಬಘೇಲ್‌ರನ್ನು ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau) ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದೆ.
ಜುಲೈ 18 ರಂದು ಜಾರಿ ನಿರ್ದೇಶನಾಲಯ ಬಂಧಿಸಿದಾಗಿನಿಂದ ಚೈತನ್ಯ ನ್ಯಾಯಾಂಗ ಬಂಧನದಲ್ಲಿದ್ದರು. ಚೈತನ್ಯ ಸೇರಿದಂತೆ ಮತ್ತೊಬ್ಬ ಆರೋಪಿಯನ್ನು ಎಸಿಬಿ ಬುಧವಾರ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ಅಕ್ಟೋಬರ್ 6 ರವರೆಗೆ ಎಸಿಬಿ ಕಸ್ಟಡಿಗೆ ಒಪ್ಪಿಸಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್ – ಮಾಜಿ ಸಿಎಂ ಭೂಪೇಶ್ ಬಘೇಲ್ ಪುತ್ರ ಬಂಧನ
ಕಳೆದ ಜನವರಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಕೋನಗಳ ಕುರಿತು ಎಸಿಬಿ ತನಿಖೆ ನಡೆಸುತ್ತಿದೆ. ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 2019 ಮತ್ತು 2022 ರ ನಡುವೆ 2,500 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಮದ್ಯ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಸುಮಾರು 1,000 ಕೋಟಿ ರೂ.ಗಳನ್ನು ವೈಯಕ್ತಿಕವಾಗಿ ನಿರ್ವಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.
ಚೈತನ್ಯ ಅವರ ವಕೀಲ ಫೈಸಲ್ ರಿಜ್ವಿ, ಈ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ಪುರಾವೆಗಳಿಲ್ಲದೆ ಅವರನ್ನು ಬಂಧಿಸಲಾಗಿದೆ. ಎಸಿಬಿ ಮಾಡಿರುವ ಆರೋಪಪಟ್ಟಿಯಲ್ಲಿ ಸುಮಾರು 45 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಅವರಲ್ಲಿ 29 ಜನರನ್ನು ಬಂಧಿಸಲಾಗಿಲ್ಲ. ಇಲ್ಲಿಯವರೆಗೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಚೈತನ್ಯ ಅವರ ಹೆಸರಿನ ಉಲ್ಲೇಖವಿಲ್ಲ. ರಾಜಕೀಯ ಒತ್ತಡದಿಂದ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇ.ಡಿ ಚೈತನ್ಯರನ್ನು ಬಂಧಿಸಿದಾಗ ರಾಜ್ಯದ ರಾಯ್‌ಗಢ ಜಿಲ್ಲೆಯ ತಮ್ನಾರ್ ತಹಸಿಲ್‌ನಲ್ಲಿ ಅದಾನಿ ಗ್ರೂಪ್‌ನಿಂದ ಕಲ್ಲಿದ್ದಲು ಗಣಿ ಯೋಜನೆಗಾಗಿ ಮರಗಳನ್ನು ಕಡಿಯುತ್ತಿರುವ ವಿಷಯವನ್ನು ಡೈವರ್ಟ್ ಮಾಡಲು ಹೀಗೆ ಮಾಡಲಾಗಿದೆ ಎಂದು ಭೂಪೇಶ್ ಬಘೇಲ್ ಟೀಕಿಸಿದ್ದರು. ಇದನ್ನೂ ಓದಿ: ಬೆಟ್ಟಿಂಗ್ ಆಪ್ ಕೇಸ್ | `ಕೈʼ ನಾಯಕ ಭೂಪೇಶ್ ಬಘೇಲ್ ಮನೆ ಮೇಲೆ ಸಿಬಿಐ ದಾಳಿ