– ಸಾಹಿತ್ಯದ ಗಟ್ಟಿತನದಿಂದಾಗಿ ನೇರವಾಗಿ ಓದುಗರನ್ನು ಸ್ಪರ್ಶಿಸಿ ಬೆಳೆದರು: ಮಾಜಿ ಸಂಸದ ಬಣ್ಣನೆ
ಬೆಂಗಳೂರು: ಎಸ್.ಎಲ್.ಭೈರಪ್ಪ (S.L.Bhyrappa) ಅವರ ಸಾಹಿತ್ಯದಲ್ಲಿ ಬೇರೆ ಸಾಹಿತಿಗಳಂತೆ ಕಾಲ್ಪನಿಕತೆ ಇರಲಿಲ್ಲ. ವಸ್ತುನಿಷ್ಠತೆ ಇತ್ತು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ.
ಎಸ್.ಎಲ್.ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಾ ಮಾತನಾಡಿದ ಅವರು, ಭೈರಪ್ಪರ ದೇಹ ದೂರಾಗಿದೆ. ಆದರೆ, ಅವರ ಕೃತಿಗಳು ಇನ್ಮುಂದೆ 100 ವರ್ಷಗಳ ನಂತರವೂ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ತಿಂಗಳಿಗೆ 5 ರೂ. ಸಂಬಳಕ್ಕೆ ಸಿನಿಮಾ ಟಾಕೀಸ್‌ನಲ್ಲಿ ಗೇಟ್ ಕೀಪರ್ ಆಗಿದ್ರು ಭೈರಪ್ಪ
ಭೈರಪ್ಪರ ಕೃತಿ, ಕಾದಂಬರಿಗಳು ಅದರೊಳಗಿನ ವಿಚಾರನಿಷ್ಠತೆ ಮತ್ತು ವಸ್ತುನಿಷ್ಠತೆ ಗಟ್ಟಿತನದಿಂದಾಗಿ, ಮಾಹಿತಿ ಕಣಜವಾಗಿ, ಇತಿಹಾಸದ ಪುಸ್ತಕವಾಗಿ ನಮಗೆ ಶಾಶ್ವತವಾಗಿ ಬೆಳಕನ್ನು ಕೊಡುತ್ತದೆ. ಅವರು ನಮ್ಮಿಂದ ದೂರಾಗಿರಬಹುದು. ಆದರೆ, ಅವರ ಸಾಹಿತ್ಯಕ್ಕೆ ಮಾತ್ರ ಇನ್ನೂ ನೂರಾರು ವರ್ಷ ಬದುಕುವಷ್ಟು ಗಟ್ಟಿತನ ಅದಕ್ಕಿದೆ ಎಂದು ತಿಳಿಸಿದ್ದಾರೆ.
ಬೇರೆ ಸಾಹಿತಿಗಳು ಯಾವುದೇ ಒಂದು ಸನ್ನಿವೇಶವನ್ನು ತೆಗೆದುಕೊಂಡಾಗ ಅದರ ಸುತ್ತ ಕಲ್ಪನಾ ಲೋಕವನ್ನು ಸೃಷ್ಟಿ ಮಾಡುತ್ತಾರೆ. ಅವರ ಸಾಹಿತ್ಯದಲ್ಲಿ ಉತ್ಪ್ರೇಕ್ಷೆ, ವೈಭವೀಕರಣ ಇರುತ್ತದೆ. ಆದರೆ, ಭೈರಪ್ಪ ಅವರ ಸಾಹಿತ್ಯದಲ್ಲಿ ಇದ್ಯಾವುದೂ ಇರಲ್ಲ. ಇವರ ಪ್ರತಿ ಕಾದಂಬರಿಯಲ್ಲಿ ವಸ್ತುನಿಷ್ಠತೆ, ಇತಿಹಾಸದ ಸತ್ಯಸಂಗತಿ ಇದೆ. ಅದರ ಸುತ್ತ ನಿಜಸನ್ನಿವೇಶವನ್ನೇ ಅವರು ಹೆಣೆದಿದ್ದಾರೆ. ಇತಿಹಾಸ ಮತ್ತು ಸತ್ಯಸಂಗತಿಗೆ ಅಪಚಾರ ಎಸಗುವಂತಹದ್ದನ್ನು ಭೈರಪ್ಪರು ಬರೆದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮ್ಮ ಅಕ್ಷರಗಳಿಂದ ಆತ್ಮವನ್ನು ಕಲಕಿ, ಭಾರತದ ಅಧ್ಯಯನ ಮಾಡಿದ್ದ ಮಹಾನ್ ಧೀಮಂತ – ಮೋದಿ ಸಂತಾಪ
ಗಿರೀಶ್ ಕಾರ್ನಾಡ್ ಅವರು ಟಿಪ್ಪುವಿನ ಬಗ್ಗೆ ನಾಟಕ ಬರೆದರು. ಕೊನೆಗೆ ಇದು ಇತಿಹಾಸಕ್ಕೆ ನಿಷ್ಠವಾಗಿಲ್ಲ ಅಂತ ಗೊತ್ತಾದಾಗ, ನಾನೊಬ್ಬ ನಾಟಕಕಾರ. ನಾನು ನನ್ನ ಕಲ್ಪನೆಯನ್ನು ಬರೆದಿದ್ದೇನೆ ಅಂತ ಹೇಳಿಬಿಟ್ರು. ಆದರೆ, ಭೈರಪ್ಪನವರ ಯಾವುದೇ ಕೃತಿಯಲ್ಲೂ ವಿಚಾರನಿಷ್ಠತೆ ಇದೆ. ಅಂತಹ ಗಟ್ಟಿತನ ಅವರ ಸಾಹಿತ್ಯಕ್ಕಿತ್ತು. ತಮ್ಮ ಸಾಹಿತ್ಯದ ಗಟ್ಟಿತನದಿಂದ ನೇರವಾಗಿ ಓದುಗರನ್ನು ಸ್ಪರ್ಶಿಸಿ ಬೆಳೆದರು ಎಂದಿದ್ದಾರೆ.