ಹೊರದೇಶದಲ್ಲಿ ನಿರಂತರ ದುಡಿಮೆ.. ಅಪರೂಪಕ್ಕೆ ಸ್ವದೇಶಕ್ಕೆ ಬಂದು ಕುಟುಂಬಸ್ಥರನ್ನು ಕಾಣಲು ವಿಮಾನ ಏರಿದ್ದರು.. ಎಷ್ಟೋ ಮಂದಿ ತವರಿಗೆ ಬಂದು ಹಬ್ಬ-ಹರಿದಿನಗಳಲ್ಲಿ ಭಾಗವಹಿಸಿ ಖುಷಿಯಲ್ಲಿದ್ದರು.. ಮನೆಯಲ್ಲಿ ಮದುವೆ ಸಂಭ್ರಮದಲ್ಲಿದ್ದರು.. ಈ ಎಲ್ಲರಿಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಘೋಷಣೆಯೊಂದು ಬರಸಿಡಿಲಿನಂತೆ ಭಾಸವಾಯಿತು. ಅಮೆರಿಕದ ಐಟಿ ವಲಯದ ಕಂಪನಿಗಳಲ್ಲಿ ದುಡಿಯುತ್ತಿದ್ದ ಲಕ್ಷಾಂತರ ವಿದೇಶಿ ಉದ್ಯೋಗಿಗಳಲ್ಲಿ ಅರೆಕ್ಷಣ ದಿಗಿಲುಟ್ಟಿಸಿತು. ಇವರನ್ನೆಲ್ಲ ಕೆಲಸಕ್ಕಿಟ್ಟುಕೊಂಡಿದ್ದ ಕಂಪನಿಗಳು ಸಹ ಶಾಕ್ ಆಗಿದ್ದುಂಟು. ‘ಸ್ವದೇಶಕ್ಕೆ ಹೊರಟಿರುವವರು, ಈಗಾಗಲೇ ಹೋಗಿರುವವರು ತಕ್ಷಣ ಅಮೆರಿಕಗೆ ವಾಪಸ್ ಬನ್ನಿ’ ಅಂತ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟವು. ಊರಿಗೆ ಹೊರಟಿದ್ದವರು ವಾಪಸ್ ಆದರು. ಬಂದಿದ್ದವರು ಬೇಸರದಿಂದಲೇ ಗಂಟುಮೂಟೆ ಕಟ್ಟಿದರು. ಸಂಭ್ರಮದಲ್ಲಿದ್ದವರು ಮದುವೆ ರದ್ದುಗೊಳಿಸಿ ಕಣ್ಣೀರಿಟ್ಟರು. ಇದಕ್ಕೆಲ್ಲ ಕಾರಣ, ಹೆಚ್-1ಬಿ ವೀಸಾ.
ಹೌದು, ಹೆಚ್-1ಬಿ ವೀಸಾ (H-1B Visa) ವಾರ್ಷಿಕ ಶುಲ್ಕವನ್ನು ದಿಢೀರ್ 1 ಲಕ್ಷ ಡಾಲರ್‌ಗೆ (ಅಂದಾಜು 88 ಲಕ್ಷ ರೂ.) ಹೆಚ್ಚಿಸಿ ಟ್ರಂಪ್ ಆದೇಶ ಹೊರಡಿಸಿದ್ದೇ ಇದಕ್ಕೆಲ್ಲ ಕಾರಣ. ‘ಅಮೆರಿಕವೇ ಮೊದಲು’ ಎಂಬುದು ಟ್ರಂಪ್ ಸರ್ಕಾರದ ಧ್ಯೇಯ. ಈ ವೀಸಾ ನೀತಿಯಲ್ಲೂ ಅದನ್ನು ಪ್ರತಿಪಾದಿಸಲು ಹೊರಟಿದ್ದಾರೆ. ಇತ್ತೀಚಿನ ದಿನಮಾನಗಳಲ್ಲಿ ಟ್ರಂಪ್ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಟಾರ್ಗೆಟ್ ಮಾಡಿದಂತೆ ಕಾಣುತ್ತಿದೆ. ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಟ್ಯಾರಿಫ್ ಅಸ್ತ್ರ ಪ್ರಯೋಗಿಸಿದರು. ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದ ಟ್ಯಾರಿಫ್ (ಶೇ.50) ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಅದರ ಬೆನ್ನಲ್ಲೇ ಈಗ ಹೆಚ್-1ಬಿ ವೀಸಾ ಶುಲ್ಕ ಹೆಚ್ಚಳ ಮೂಲಕ ಭಾರತದ ವಿರುದ್ಧ ಟ್ರಂಪ್ ಅಸ್ತ್ರ ಪ್ರಯೋಗಿಸಿದ್ದಾರೆ. ಏಕೆಂದರೆ, ಈ ವೀಸಾದಡಿ ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಉದ್ಯೋಗಿಗಳಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. ಪ್ರತಿ ವರ್ಷ ಈ ವೀಸಾದಡಿ ಅಮೆರಿಕಗೆ ಹೋಗುವವರ ಸಂಖ್ಯೆಯಲ್ಲೂ ಭಾರತೀಯರದ್ದೇ ಸಿಂಹಪಾಲು. ಈಗ ಶುಲ್ಕ ಹೆಚ್ಚಿಸಿರುವುದು ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿ ಅಮೆರಿಕಗೆ ಹೋಗ ಬಯಸುವ ಯುವಸಮೂಹದ ಕನಸನ್ನು ನುಚ್ಚು ನೂರು ಮಾಡಿದಂತಿದೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?
ಅಷ್ಟಕ್ಕೂ ಏನಿದು ಹೆಚ್-1ಬಿ ವೀಸಾ? ಇದರ ಉದ್ದೇಶ ಏನು? ಅಮೆರಿಕ ಕಂಪನಿಗಳಿಗೆ ಇದು ಏಕೆ ಮುಖ್ಯ? ಭಾರತೀಯ ವೃತ್ತಿಪರ ಪರಿಣಿತರಿಗೆ ಇದರಿಂದ ಪ್ರಯೋಜನ ಎಷ್ಟು? ಶುಲ್ಕ ಹೆಚ್ಚಿಸಿದ್ಯಾಕೆ? ಇದರಿಂದಾಗುವ ಪರಿಣಾಮಗಳೇನು?
ಹೆಚ್-1ಬಿ ವೀಸಾ ಎಂದರೇನು?
ಹೆಚ್-1ಬಿ ವಲಸೆಯೇತರ ವೀಸಾ.
ಜಾರಿಗೆ ಬಂದಿದ್ದು ಯಾವಾಗ?
ಹೆಚ್-1ಬಿ ವೀಸಾ ಕಾರ್ಯಕ್ರಮವು 1990 ರ ವಲಸೆ ಕಾಯ್ದೆಯೊಂದಿಗೆ (IMMACT90) ಪ್ರಾರಂಭವಾಯಿತು.
ಆಗಿನ ಅಧ್ಯಕ್ಷರು ಯಾರು?
ಈ ನೀತಿಗೆ ಆಗಿನ ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ಅವರು 1990ರ ನವೆಂಬರ್ 20 ರಂದು ಸಹಿ ಹಾಕಿದರು. ಹೆಚ್-1 ವೀಸಾವನ್ನು ಎರಡು ಭಾಗಗಳಾಗಿ ವಿಭಜಿಸಲಾಯಿತು. ಹೆಚ್-1ಎ ವೀಸಾ ನರ್ಸ್‌ಗಳಿಗೆ.
ಹೆಚ್-1ಬಿ ವೀಸಾ ಯಾರಿಗೆ ಸಿಗುತ್ತೆ?
ಹೊರದೇಶಗಳ ಪರಿಣತ ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ನೀಡಲು ಅಲ್ಲಿನ ಕಂಪನಿಗಳಿಗೆ ಈ ವೀಸಾ ಅವಕಾಶ ನೀಡುತ್ತದೆ. ಎಂಜಿನಿಯರಿಂಗ್, ತಂತ್ರಜ್ಞಾನ, ವೈದ್ಯಕೀಯ, ವ್ಯವಹಾರದಂತಹ ಕ್ಷೇತ್ರಗಳಲ್ಲಿ ಪರಿಗಣತರಿಗೆ ಈ ವೀಸಾ ಸೌಲಭ್ಯ ಸಿಗುತ್ತದೆ.
ವೀಸಾ ಅವಧಿ ಎಷ್ಟು?
ಇದು ತಾತ್ಕಾಲಿಕ ವೀಸಾ. ಇದಕ್ಕೆ 3 ರಿಂದ 6 ವರ್ಷಗಳ ಅವಧಿ ಇರುತ್ತದೆ. ಅವಧಿ ಮುಗಿದ ಮೇಲೆ ಮತ್ತೆ ವೀಸಾ ನವೀಕರಿಸಬಹುದು.
ಅರ್ಹತೆ, ನಿಯಮಗಳೇನು?
ವಿದೇಶಗಳ ಕೌಶಲಯುಕ್ತ ವೃತ್ತಿಪರರನ್ನು ನೇಮಿಸಿಕೊಳ್ಳಲು ಕಂಪನಿಗಳು ಈ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತವೆ. ಅಭ್ಯರ್ಥಿಯು ವಿಶೇಷತೆಯ ಕ್ಷೇತ್ರದಲ್ಲಿ ಪದವಿ ಹೊಂದಿರಬೇಕು. ಉದ್ಯೋಗ ನೀಡುವ ಕಂಪನಿಗಳೇ ತನ್ನ ಉದ್ಯೋಗಿಯ ವೀಸಾ ಅರ್ಜಿ ಶುಲ್ಕವನ್ನು ಭರಿಸಬೇಕು. ಕಂಪನಿ ಕಾರ್ಮಿಕ ಇಲಾಖೆಯಲ್ಲಿ ಎಲ್‌ಎಸಿ ಸಲ್ಲಿಸುತ್ತದೆ. ವೇತನ ಮತ್ತು ಕೆಲಸದ ಪರಿಸ್ಥಿತಿಗಳನ್ನು ದೃಢೀಕರಿಸುತ್ತದೆ. ನಂತರ ಅಭ್ಯರ್ಥಿ ಪರವಾಗಿ USCIS ಗೆ ಅರ್ಜಿ ಸಲ್ಲಿಸುತ್ತದೆ. ಕೆಲಸಕ್ಕೆ ವಿಶೇಷ ಪರಿಣತಿ ಮತ್ತು ಪದವಿ, ಅನುಭವದ ಅಗತ್ಯವಿರುತ್ತದೆ. ಅದನ್ನು ಅಭ್ಯರ್ಥಿ ಪೂರೈಸಬೇಕು. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ
ವರ್ಷಕ್ಕೆ ಎಷ್ಟು ವೀಸಾ ಹಂಚಿಕೆ?
ಪ್ರತಿ ವರ್ಷ 65,000 ವೀಸಾಗಳನ್ನು ಹಂಚಲಾಗುತ್ತದೆ. ಅಮೆರಿಕ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಹೊಂದಿದವರಿಗೆ 20,000 ಹೆಚ್ಚುವರಿ ವೀಸಾಗಳನ್ನು ನೀಡಲಾಗುತ್ತದೆ.
ಶುಲ್ಕ ಎಷ್ಟಿತ್ತು?
ಈ ವೀಸಾ ಪಡೆಯಲು 2,000 ದಿಂದ 8,000 ಡಾಲರ್ ವರೆಗೆ ಶುಲ್ಕ ಇತ್ತು.
ಹೊಸ ಶುಲ್ಕ ಎಷ್ಟು?
ಟ್ರಂಪ್ ಹೊಸ ಶುಲ್ಕ ಘೋಷಿಸಿದ್ದು, ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿದ್ದಾರೆ. ಇದು ಪೂರ್ಣಾವಧಿ ಶುಲ್ಕವಾಗಿರುತ್ತದೆ.
ಶುಲ್ಕ ಹೆಚ್ಚಿಸಿದ್ದು ಯಾಕೆ?
ಕಂಪನಿಗಳು ಈ ವೀಸಾ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸ್ಥಳೀಯರಿಗೆ ಹೆಚ್ಚಿನ ಸಂಬಳ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡದೇ, ಹೊರದೇಶಗಳಿಂದ ಕಡಿಮೆ ಸಂಬಳಕ್ಕೆ ವೃತ್ತಿಪರರನ್ನು ಕರೆಸಿಕೊಂಡು ಉದ್ಯೋಗ ನೀಡುತ್ತಿವೆ ಎಂದು ಟ್ರಂಪ್ ತಿಳಿಸಿದ್ದಾರೆ.
ಯಾವ ದೇಶದ ಜನತೆ ಹೆಚ್ಚು ವೀಸಾ ಪಡೆದಿದ್ದಾರೆ?
ಹೆಚ್-1ಬಿ ವೀಸಾವನ್ನು ಪಡೆದ ದೇಶಗಳಲ್ಲಿ ಭಾರತವೇ ನಂ.1. ಈ ದೇಶವೇ ಶೇ.71 ರಷ್ಟು ಪಾಲನ್ನು ಹೊಂದಿದೆ. ಶೇ.12 ರಷ್ಟನ್ನು ಚೀನಾ ಹೊಂದಿದೆ. ಶೇ.17 ರಷ್ಟನ್ನು ಜಗತ್ತಿನ ಇತರೆ ದೇಶಗಳು ಹೊಂದಿವೆ.
ವೀಸಾಕ್ಕಾಗಿ ಎಷ್ಟು ಅರ್ಜಿ ಸಲ್ಲಿಕೆ?
ಕಳೆದ ವರ್ಷ ಮಾರ್ಚ್ನಲ್ಲಿ ನೋಂದಣಿ ಮುಕ್ತಾಯಗೊಂಡ ಕೊನೆಯ ಹೆಚ್-1ಬಿ ಲಾಟರಿ ಸುತ್ತಿಗೆ ಸುಮಾರು 3,39,000 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದು ವಾರ್ಷಿಕ ಮಿತಿಯನ್ನು ಮೀರಿದೆ. ಯುಎಸ್‌ಸಿಐಎಸ್ ದತ್ತಾಂಶದ ಪ್ರಕಾರ, ಆ ಪೈಕಿ 1,20,141 ಅರ್ಜಿಗಳನ್ನು ಲಾಟರಿಗೆ ಆಯ್ಕೆ ಮಾಡಲಾಗಿದೆ. (ಹೊಸ ಶುಲ್ಕವು ಆ ಅರ್ಜಿದಾರರ ಮೇಲೂ ಪರಿಣಾಮ ಬೀರಲ್ಲ).
ಹೆಚ್ಚು ವೀಸಾ ಹೊಂದಿರುವ ಕಂಪನಿಗಳು ಯಾವುವು?
ಅಮೆಜಾನ್: 10,044
ಟಿಸಿಎಸ್: 5,505
ಮೈಕ್ರೋಸಾಫ್ಟ್: 5,189
ಮೆಟಾ: 5,123
ಆ್ಯಪಲ್: 4,202
ಗೂಗಲ್: 4,181
ಜೆಪಿಮಾರ್ಗನ್: 2,440
ಅಮೆಜಾನ್ ವೆಬ್ ಸರ್ವಿಸಸ್: 2,347
ಇನ್ಫೊಸಿಸ್: 2,004
ಮೈಂಡ್‌ಟ್ರೀ: 1,807
ಹೊಸ ಶುಲ್ಕ ಯಾರಿಗೆ ಅನ್ವಯ?
ಹೊಸ ಶುಲ್ಕವು ಹೊಸ ಅರ್ಜಿಗಳಿಗಷ್ಟೇ ಅನ್ವಯವಾಗುತ್ತದೆ (ಮುಂದಿನ ಲಾಟರಿ ಸೈಕಲ್‌ಗೆ).
ಈಗಾಗಲೇ ಈ ವೀಸಾ ಹೊಂದಿರುವವರ ಕಥೆ ಏನು?
ಹೆಚ್-1ಬಿ ವೀಸಾದಡಿ ಈಗಾಗಲೇ ಕೆಲಸ ಮಾಡುತ್ತಿರುವವರು ಹೊಸ ಶುಲ್ಕ ಪಾವತಿಸಬೇಕಿಲ್ಲ. ವೀಸಾ ಅವಧಿ ಮುಕ್ತಾಯಗೊಂಡ ಬಳಿಕ ಸಲ್ಲಿಸುವ ನವೀಕರಣ ಅರ್ಜಿಗೂ ಇದು ಅನ್ವಯಿಸಲ್ಲ.
ಯಾರ ಮೇಲೆ ಹೆಚ್ಚು ಎಫೆಕ್ಟ್?
ಈ ವೀಸಾದಡಿ ಅಮೆರಿಕಗೆ ತೆರಳುವವರಲ್ಲಿ ಭಾರತೀಯರೇ ಹೆಚ್ಚಿದ್ದಾರೆ. ನಂತರದ ಸ್ಥಾನದಲ್ಲಿ ಚೀನೀಯರು ಬರುತ್ತಾರೆ. ಅಮೆರಿಕದಲ್ಲಿ ಕಂಪ್ಯೂಟರ್ ಸಂಬಂಧಿತ ಉದ್ಯೋಗಗಳಲ್ಲಿ ಈ ಎರಡು ದೇಶಗಳ ಜನರೇ ಹೆಚ್ಚು. ಒಂದು ದಶಕಕ್ಕೂ ಹೆಚ್ಚು ಕಾಲ ಪ್ರತಿವರ್ಷ ಅನುಮೋದಿಸಲಾದ ಹೆಚ್-1ಬಿ ವೀಸಾದಡಿ ಹೋಗುತ್ತಿರುವವರಲ್ಲಿ ಶೇ.60 ರಷ್ಟು ಮಂದಿ ಕಂಪ್ಯೂಟರ್ ಸಂಬಂಧಿತ ಉದ್ಯೋಗಗಳನ್ನೇ ಹೊಂದಿದ್ದಾರೆ. 2010 ರಿಂದ ಹೆಚ್ಚಿನ ಹೆಚ್-1ಬಿ ವೀಸಾ ಅನುಮೋದನೆಗಳು ಭಾರತೀಯರಿಗೆ ಸಿಕ್ಕಿವೆ ಎಂದು ಪ್ಯೂ ರಿಸರ್ಚ್ ತಿಳಿಸಿದೆ. ಇದನ್ನೂ ಓದಿ: H-1B Visa ಹೊಂದಿರುವವರು 24 ಗಂಟೆಯೊಳಗೆ ಅಮೆರಿಕಗೆ ವಾಪಸ್ ಬನ್ನಿ: ಮೆಟಾ, ಮೈಕ್ರೋಸಾಫ್ಟ್ ಸೂಚನೆ
ತಜ್ಞರು ಹೇಳೋದೇನು?
ಹೊಸ ಶುಲ್ಕ ಕ್ರಮದಿಂದ ಅಮೆರಿಕಗೆ ತುಂಬಾ ನಷ್ಟ. ಯುಎಸ್‌ನಲ್ಲಿರುವ ಭಾರತದ ಐಟಿ ಕಂಪನಿಗಳು ಸುಮಾರು ಶೇ.50ರಿಂದ ಶೇ.80 ರಷ್ಟು ಸ್ಥಳೀಯರನ್ನೇ ನೇಮಿಸಿಕೊಂಡಿವೆ. ಹೊಸ ಶುಲ್ಕ ನೀತಿಯಿಂದ ಭಾರತೀಯರನ್ನು ನೇಮಿಸಿಕೊಳ್ಳಲು ಕಂಪನಿಗಳು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಈ ಹೊರೆಯನ್ನು ತಪ್ಪಿಸಲು ಕಂಪನಿಗಳು ಹೊರದೇಶಗಳಿಂದಲೇ ತಮ್ಮ ಕಂಪನಿಗಳ ಕಾರ್ಯಾಚರಣೆಯನ್ನು ಹೆಚ್ಚಿಸಬಹುದು. ಇದರಿಂದ ಅಮೆರಿಕಗೆ ತುಂಬಾ ನಷ್ಟವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಭವಿಷ್ಯದ ಯುವಜನರ ಕನಸು ಭಗ್ನ
ಅಮೆರಿಕದಲ್ಲಿ ದುಡಿದು ಹಣ ಸಂಪಾದಿಸಬೇಕೆಂದು ಪ್ರತಿಭಾವಂತ ಯುವಸಮುದಾಯ ಕನಸು ಕಾಣುತ್ತದೆ. ಅಂತಹವರಿಗೆ ಹೆಚ್-1ಬಿ ವೀಸಾ ಸಂಪರ್ಕ ಸೇತುವೆಯಂತೆ ಇದೆ. ಈ ವೀಸಾ ಮೂಲಕ ಯುಎಸ್‌ಗೆ ತೆರಳಿ ಒಂದಷ್ಟು ವರ್ಷ ಕೆಲಸ ಮಾಡಿ, ಹೆಚ್ಚಿನ ಸಂಪಾದನೆ ಮಾಡಿ ನಂತರ ಪೌರತ್ವ ಪಡೆದು ಅಲ್ಲಿಯೇ ನೆಲೆಸಿರುವವರ ಸಂಖ್ಯೆಯೂ ಹೆಚ್ಚಿದೆ. ಅದೇ ರೀತಿಯ ಕನಸನ್ನು ಈಗಿನ ಯುವಸಮುದಾಯವೂ ಕಾಣುತ್ತಿರುತ್ತದೆ. ಆದರೆ, ಟ್ರಂಪ್ ನೀತಿಯು ಅಂತಹ ಲಕ್ಷಾಂತರ ಕೌಶಲ್ಯಯುಕ್ತ ಯುವಕ-ಯುವತಿಯರ ಕನಸಿಗೆ ತಣ್ಣೀರೆರಚಿದೆ.