ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ (SharanaBasavappa) ಲಿಂಗೈಕ್ಯರಾಗಿದ್ದಾರೆ. ಇಂದು (ಆ.15) ಶರಣಬಸವೇಶ್ವರ ದೇವಾಲಯದ ಎದುರು ಅಂತ್ಯಕ್ರಿಯೆ ನಡೆಯಲಿದ್ದು, 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ ಹಾಗೂ 5050 ವಿಭೂತಿಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆ.8 ಗಂಟೆಯಿಂದ ಅಪ್ಪಾಜಿಯವರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತಿದ್ದು, ಇಂದು ಸಂಜೆ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ದಿ.ಪೂಜ್ಯ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ ಸಮಾಧಿಯ ಪಕ್ಕದಲ್ಲಿ ಸಂಜೆ 5 ಗಂಟೆಗೆ ವೀರಶೈವ ಲಿಂಗಾಯತ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ. ಡಾ.ಶರಣಬಸವಪ್ಪ ಅಪ್ಪ ಅವರ ನಿಧನಕ್ಕೆ ರಾಜ್ಯ ಸರ್ಕಾರ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಗೌರವಾರ್ಥ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಅಂತಿಮ ಇಚ್ಛೆಯಂತೆ ಶರಣಬಸವೇಶ್ವರರ ದರ್ಶನ ಪಡೆದು ಕೊನೆಯುಸಿರೆಳೆದ ಮಹಾದಾಸೋಹಿ
ಪಂಚಪೀಠ ಮತ್ತು ಬಸವಾದಿ ಶರಣರ ತತ್ವದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ. ಈ ವೇಳೆ 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ ಹಾಗೂ 5050 ವಿಭೂತಿಯಿಂದ ಬಳಸಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಅಂತಿಮ ನಮನ ಸಲ್ಲಿಸಲು ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರುಗಳು ಭಾಗಿಯಾಗಲಿದ್ದಾರೆ.
90 ವರ್ಷದ ಶರಣಬಸಪ್ಪ ಅಪ್ಪ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಲಬುರಗಿಯ ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನ ಪೀಠದ 8ನೇ ಪೀಠಾಧಿಪತಿ ಶರಣಬಸಪ್ಪ ಅಪ್ಪ ಕಳೆದ ತಿಂಗಳು ಜು.26 ರಂದು ವಯೋಸಹಜ ಕಾಯಿಲೆ ಮತ್ತು ನ್ಯುಮೋನಿಯಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯಲ್ಲಿ ಕೃತಕ ಉಸಿರಾಟ ಮೂಲಕ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಗುರುವಾರ (ಆ.14) ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ಹೀಗಾಗಿ ಅವರನ್ನು ಮಠಕ್ಕೆ ಸ್ಥಳಾಂತರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಗೃಹ ಆರೈಕೆಗೆ ಕುಟುಂಬಸ್ಥರು ನಿರ್ಧರಿಸಿದ್ದರು. ರಾತ್ರಿ ಕಲಬುರಗಿಯ ಖಾಸಗಿ ಆಸ್ಪತ್ರೆಯಿಂದ ಶರಣಬಸಪ್ಪ ಅಪ್ಪ ಅವರನ್ನು ಮಠಕ್ಕೆ ಶಿಫ್ಟ್ ಮಾಡಲಾಗಿತ್ತು. ಜೊತೆಗೆ ಶರಣಬಸಪ್ಪ ಅಪ್ಪ ಅವರ ಅಂತಿಮ ಆಸೆ ಕೂಡ ಮಠಕ್ಕೆ ಹೋಗಬೇಕೆನ್ನುವುದಿತ್ತು. ತಮ್ಮ ಅಂತಿಮ ಇಚ್ಛೆಯಂತೆ, ಅಪ್ಪಾಜಿಯವರನ್ನು ಶರಣಬಸವೇಶ್ವರ ದೇವಾಲಯಕ್ಕೆ ಆರೋಗ್ಯಕರ ಉಸಿರಾಟದ ಸ್ಥಿತಿಯಲ್ಲಿ ಕೊಂಡೊಯ್ಯಲಾಗಿತ್ತು. ಅಲ್ಲಿ ಅಪ್ಪಾಜಿಯವರು ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು. ಅದೇ ವೇಳೆ ಆರತಿ ಕೂಡ ನಡೆಯಿತು. ನಂತರ ವೈದ್ಯಕೀಯ ಮೇಲ್ವಿಚಾರಣೆಯ ವಾಹನದಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿಸಲಾಗಿತ್ತು.
ಸಂಜೆ ಸುಮಾರು 7:30ಕ್ಕೆ ಅಪ್ಪಾಜಿಯವರನ್ನು ದಾಸೋಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ತಾತ್ಕಾಲಿಕ ಐಸಿಯು ಸಿದ್ಧಪಡಿಸಲಾಗಿತ್ತು. ಅಂತಿಮ ಉಸಿರಿನವರೆಗೂ ಸಮರ್ಪಿತ ವೈದ್ಯಕೀಯ ತಂಡದ ಕಾಳಜಿಯಲ್ಲಿ ಎಲ್ಲಾ ಚಿಕಿತ್ಸಾ ಮತ್ತು ಸಹಾಯಕ ಔಷಧೋಪಚಾರಗಳನ್ನು ಮುಂದುವರೆಸಲಾಯಿತು. ರಾತ್ರಿ 9:23ಕ್ಕೆ ಮಹಾಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದಲ್ಲಿಯೇ ಕೊನೆಯುಸಿರೆಳೆದರು.ಇದನ್ನೂ ಓದಿ: 79th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ