ನವದೆಹಲಿ: ದೆಹಲಿಯ ಬೀದಿನಾಯಿಗಳಿಗೆ (Stray Dogs) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ನೀಡಿದ ಆದೇಶ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಮುಖ್ಯ ನ್ಯಾ. ಗವಾಯಿ ಅವರು ಎಲ್ಲಾ ಅರ್ಜಿಗಳ ವಿಚಾರಣೆಗೆ ಮೂವರು ನ್ಯಾಯಾಧೀಶರ ಹೊಸ ಪೀಠವನ್ನು ರಚಿಸಿದ್ದಾರೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನು ಒಳಗೊಂಡ ಮೂವರು ನ್ಯಾಯಾಧೀಶರು ದೆಹಲಿ ಬೀದಿನಾಯಿಗಳಿಗೆ ಸಂಬಂಧಿಸಿದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ. ಹೊಸ ಪೀಠ ಗುರುವಾರ(ಆ.14) ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ನಾಳೆ ದರ್ಶನ್ ಪಾಲಿಗೆ ಬಿಗ್ ಡೇ – ಸುಪ್ರೀಂ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?
ಸುಪ್ರೀಂ ಕೋರ್ಟ್ ಹೇಳಿದ್ದು ಏನು?
ದೆಹಲಿಯ ಎಲ್ಲಾ ಪ್ರದೇಶಗಳನ್ನು ಬೀದಿನಾಯಿ ಮುಕ್ತ ಮಾಡಬೇಕು, ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ ಮಂಗಳವಾರ ಸೂಚಿಸಿತ್ತು.
8 ವಾರಗಳ ಒಳಗೆ ಎಲ್ಲಾ ಬೀದಿ ನಾಯಿಗಳನ್ನು ವಸತಿ ಪ್ರದೇಶಗಳಿಂದ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಇದಕ್ಕಾಗಿ ಒಂದು ಕಾರ್ಯಪಡೆ ರಚಿಸುವ ಅಗತ್ಯವಿದ್ದರೇ ಕೂಡಲೇ ಆ ಕೆಲಸ ಮಾಡಿ. ಈ ಪ್ರಕ್ರಿಯೆಯನ್ನು ತಡೆಯುವ ಯಾವುದೇ ಸಂಘಟನೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು.
8 ವಾರಗಳಲ್ಲಿ ಇಡೀ ದೆಹಲಿಯನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವಂತೆ ದೆಹಲಿ ಸರ್ಕಾರ, ದೆಹಲಿ ಮಹಾನಗರ ಪಾಲಿಕೆ, ಹಾಗೂ ನವದೆಹಲಿ ಮಹಾನಗರ ಪಾಲಿಕೆಗಳಿಗೆ ಸುಪ್ರೀಂ ಆದೇಶಿಸಿತ್ತು.