ಮಡಿಕೇರಿ: ಸೋಮವಾರಪೇಟೆ (Somavarapete) ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿರುದಾಲೆ ಗ್ರಾಮದಲ್ಲಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹೊಳೆ ಅಂಚಿನಲ್ಲಿ ವಾಸ ಮಾಡುತ್ತಿರುವ ಸುಮಾರು 10 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ (Care center) ಸ್ಥಳಾಂತರಿಸಲಾಗಿದೆ.
ಹೌದು. ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಕಿರುದಾಲೆ ಗ್ರಾಮದಲ್ಲಿ ನದಿನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಆತಂಕದಲ್ಲೇ ದಿನ ದೂಡುತ್ತಿದ್ದ ಸುಮಾರು 10 ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.
2018 ರಿಂದಲೇ ತಾವು ವಾಸ ಮಾಡುವ ಮನೆಗಳಲ್ಲಿ ಬಿರುಕು ಮೂಡಿವೆ. ಈಗ ಗಾಳಿ ಮಳೆ ಹೆಚ್ಚಾಗಿರುವುದರಿಂದ ಯಾವ ಸಮಯದಲ್ಲಿ ಅನ್ನೋ ಆತಂಕದಲ್ಲಿ ಕಾಳಜಿ ಕೇಂದ್ರಗಳಿಗೆ ತೆರಳುತ್ತಿದ್ದಾರೆ.
ಈ ನಡುವೆ ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿದ ನಿರಾಶ್ರಿತರು, ಕಳೆದ 4 ದಿನಗಳಿಂದ ಹೊಳೆಯ ನೀರು ಅಪಾಯ ಮಟ್ಟ. ಮೀರಿ ಹರಿಯುತ್ತಿದೆ. ಅಲ್ಲದೇ ಮನೆಗಳು ಸಂಪೂರ್ಣ ಹಾನಿಯಾಗಿವೆ, ಗೋಡೆಗಳಲ್ಲಿ ಬಿರುಕು ಮೂಡಿದೆ. ಯಾವ ಕ್ಷಣದಲ್ಲಾದರೂ ಮನೆಗಳು ಬೀಳುವಂತಿವೆ. ಹೀಗಾಗಿ ಸ್ವಯಂಪ್ರೇರಿತವಾಗಿ ಕಾಳಜಿ ಕೇಂದ್ರಗಳಿಗೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಸೋಮವಾರಪೇಟೆ ತಹಶಿಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ತೊಂದರೆಯಲ್ಲಿ ಇರುವಂತಹ ಕುಟುಂಬಸ್ಥರನ್ನ ಕಾಳಜಿ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. ಮಳೆಗಾಲ ಕಳೆಯುವವರೆಗೂ ಕಾಳಜಿ ಕೇಂದ್ರಗಳಲ್ಲಿ ಇವರೆಲ್ಲರೂ ಇರಬಹುದು ಎಂದಿದ್ದಾರೆ.