ಢಾಕಾ: ಮೋಟಾರ್ ಸೈಕಲ್ ಪಾರ್ಕಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ರವೀಂದ್ರನಾಥ ಠಾಗೂರ್ (Rabindranath Tagore) ಪೂರ್ವಜರ ಮನೆ ಮೇಲೆ ಗುಂಪೊಂದು ದಾಳಿ ನಡೆಸಿದೆ.
ಬಾಂಗ್ಲಾದೇಶದ ಸಿರಾಜ್‌ಗಂಜ್ ಜಿಲ್ಲೆಯಲ್ಲಿರುವ ರವೀಂದ್ರನಾಥ ಠಾಗೋರ್ ಅವರ ಪೂರ್ವಜರ ಮನೆ ಇದೀಗ ವಸ್ತುಸಂಗ್ರಹಾಲಯವಾಗಿದ್ದು, ಅದರ ಮೇಲೆ ದಾಳಿ ನಡೆದಿದೆ. ಜೂ.8 ರಂದು ವಸ್ತುಸಂಗ್ರಹಾಲಯದ ಸಿಬ್ಬಂದಿ ಹಾಗೂ ಸಂದರ್ಶಕ ಶಾ ನೇವಾಜ್ ನಡುವೆ ಮೋಟಾರ್ ಸೈಕಲ್ ಪಾರ್ಕಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಇದರ ಸೇಡಿಗೆ ಗುಂಪೊಂದು ದಾಳಿ ನಡೆಸಿದ್ದು, ವಸ್ತುಸಂಗ್ರಹಾಲಯದ ಸಭಾಂಗಣ, ಕಿಟಕಿ ಗಾಜುಗಳು, ಬಾಗಿಲುಗಳು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.ಇದನ್ನೂ ಓದಿ: ವಿಮಾನ ಪತನ – ಗಗನ ಸಖಿಯ ಫೋಟೋ ಹಿಡಿದು ಕಣ್ಣೀರಿಟ್ಟ ಕುಟುಂಬಸ್ಥರು
ಇದೀಗ ದಾಳಿ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಇದು ಬಾಂಗ್ಲಾದೇಶ ಜಮಾತ್-ಇ-ಇಸ್ಲಾಮಿ ಮತ್ತು ಹೆಫಾಜತ್-ಇ-ಇಸ್ಲಾಂ ಗುಂಪುಗಳಿಂದ ನಡೆದ ಪೂರ್ವಯೋಜಿತ ದಾಳಿ ಎಂದು ಬಿಜೆಪಿ ಕಿಡಿಕಾರಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ರವೀಂದ್ರನಾಥ ಠಾಗೋರ್ ಪೂರ್ವಜರ ಮನೆಯ ಮೇಲೆ ನಡೆಸಿದ ದಾಳಿಯನ್ನು ಖಂಡಿಸುತ್ತೇವೆ. ಈ ಹಿಂಸಾತ್ಮಕ ಕೃತ್ಯವು ಅವರ ಸಮಗ್ರ ತತ್ವಶಾಸ್ತ್ರಕ್ಕೆ ಅವಮಾನವಾಗಿದೆ ಎಂದು ಹೇಳಿದ್ದಾರೆ.
ಸದ್ಯ ದಾಳಿಗೆ ಸಂಬಂಧಿಸಿದಂತೆ 50 ರಿಂದ 60 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಇದನ್ನೂ ಓದಿ: ತಮ್ಮ ಫೇವರೇಟ್ ನಂಬರ್ ದಿನವೇ ಮೃತಪಟ್ಟ ಗುಜರಾತ್ ಮಾಜಿ ಸಿಎಂ ರೂಪಾನಿ