ಮಾಸ್ಕೋ: ಉಕ್ರೇನ್ ಜೊತೆಗಿನ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ರಷ್ಯಾ (Russia) ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಮೂಲಕ ಮಾತುಕತೆ ನಡೆಸಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದರು. ಈ ವಿಚಾರವಾಗಿ ಇಬ್ಬರ ನಡುವೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಯಿತು. ಇದೇ ವೇಳೆ ಇಬ್ಬರೂ ಸಹ ಯುದ್ಧ ಸೂಕ್ಷ್ಮತೆಗಳ ಕುರಿತು ಚರ್ಚಿಸಿದರು. ಮಾಸ್ಕೋ ಮತ್ತು ಕೈವ್ ನಡುವಿನ ಸಂಘರ್ಷವನ್ನು ಪರಿಹರಿಸುವ ಮಾರ್ಗಗಳು ಹಾಗೂ ಕದನ ವಿರಾಮ ಸಂಭವಿಸದಿದ್ದರೆ ಮುಂದೇನು ಮಾಡಬೇಕು ಎಂಬ ಬಗ್ಗೆಯೂ ಚರ್ಚಿಸಿದ್ರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪುಟಿನ್, ಟ್ರಂಪ್ ಅವರ ಜೊತೆಗಿನ ಇಂದಿನ ಮಾತುಕತೆ ತುಂಬಾ ಉಪಯುಕ್ತವಾಗಿತ್ತು. ಮಾಸ್ಕೋ ಮತ್ತು ಕೈವ್ ನಡುವಿನ ನೇರ ಸಂವಾದವನ್ನು ಪುನರಾರಂಭಿಸಲು ಸಹಾಯ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಉಕ್ರೇನ್‌ನೊಂದಿಗೆ ಭವಿಷ್ಯದ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಲು ರಷ್ಯಾ ಸಿದ್ಧವಾಗಿದೆ. ರಷ್ಯಾ ಮತ್ತು ಉಕ್ರೇನ್ ಎರಡೂ ಕಡೆಯವರು ಸ್ವೀಕಾರಾರ್ಹವಾದ ಹೊಂದಾಣಿಕೆ ಕಂಡುಕೊಳ್ಳಬೇಕು. ನಿರೀಕ್ಷಿತ ಒಪ್ಪಂದಗಳನ್ನ ತಲುಪಿದ್ರೆ ಉಕ್ರೇನ್‌ನೊಂದಿಗೆ ಕದನ ವಿರಾಮ ಸಾಧ್ಯ. ಉಕ್ರೇನ್ ನಮ್ಮ ಷರತ್ತುಗಳಿಗೆ ಒಪ್ಪಿದ್ರೆ ಕದನ ವಿರಾಮ ಸಾಧ್ಯವಾಗಲಿದೆ ಎಂದು ಎಂದು ತಿಳಿಸಿದ್ದಾರೆ.
ಇನ್ನೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್‌ನಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮಾಸ್ಕೋ ಸಿದ್ಧವಾಗಿದೆ ಎಂದು ಹೇಳಿದ್ದಾರೆ.