ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸುವುದು ಬಹಳ ಮುಖ್ಯ. ಕೆಲವರು ಬಿಸಿಲಿನ ದಾಹ ತೀರಿಸಿಕೊಳ್ಳಲು ಜ್ಯೂಸ್ ಅಥವಾ ಎಳನೀರು ಮೊರೆಹೋದರೇ ಇನ್ನೂ ಕೆಲವರು ಲಸ್ಸಿ ಕುಡಿಯುತ್ತಾರೆ. ಮೊಸರಿನಿಂದ ತಯಾರಿಸಲಾದ ಲಸ್ಸಿ ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದ್ದು, ಬೇಸಿಗೆಯ ಶಾಖದಲ್ಲಿ ನಮ್ಮನ್ನು ಹೈಡ್ರೇಟ್ ಆಗಿರಿಸುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಂಜಾಬಿ ಶೈಲಿಯ ಮ್ಯಾಂಗೋ ಲಸ್ಸಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು:
ಮಾವಿನ ಹಣ್ಣು – 2
ಮೊಸರು – 1 ಕಪ್
ಹಾಲು – ಅರ್ಧ ಕಪ್
ಸಕ್ಕರೆ – 4 ಚಮಚ
ಏಲಕ್ಕಿ ಪುಡಿ – ಅರ್ಧ ಚಮಚ
ಐಸ್ ಕ್ಯೂಬ್ – 3
ಸಣ್ಣದಾಗಿ ಹೆಚ್ಚಿದ ಡ್ರೈಫ್ರೂಟ್ಸ್ – ಸ್ವಲ್ಪ
ಮಾಡುವ ವಿಧಾನ:
* ಮೊದಲಿಗೆ ಮಾವಿನ ಹಣ್ಣಿನ ಸಿಪ್ಪೆ ತೆಗೆದು ತಿರುಳನ್ನು ಒಂದು ಮಿಕ್ಸರ್ ಜಾರಿಗೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಮೊಸರು, ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
* ಬಳಿಕ ಅದಕ್ಕೆ ಐಸ್‌ಕ್ಯೂಬ್ ಸೇರಿಸಿಕೊಂಡು ತಣ್ಣಗಾಗಲು ಬಿಡಿ.
* ಈಗ ಅದಕ್ಕೆ ಹಾಲನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಈ ಮಿಶ್ರಣವನ್ನು ಒಂದು ಗ್ಲಾಸ್‌ಗೆ ವರ್ಗಾಯಿಸಿಕೊಳ್ಳಿ. ಬಳಿಕ ಅದರ ಮೇಲೆ ಹೆಚ್ಚಿದ ಡ್ರೈಫ್ರೂಟ್ಸ್ ಹಾಕಿದರೆ ಪಂಜಾಬಿ ಶೈಲಿಯ ಮ್ಯಾಂಗೋ ಲಸ್ಸಿ ಸವಿಯಲು ಸಿದ್ಧ.