ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯಕ್ಕೆ ಮಳೆ (Rain) ಅಡ್ಡಿಯಾಗಿದೆ.
ಸಂಜೆ ಬೆಂಗಳೂರಿನಲ್ಲಿ ಜೋರಾಗಿ ಮಳೆ ಆರಂಭವಾಗಿದೆ. ಹೀಗಾಗಿ ಮಳೆ ನಿಂತರಷ್ಟೇ ಪಂದ್ಯ ಆರಂಭವಾಗಲಿದೆ. ಹವಾಮಾನ ಇಲಾಖೆ ಇಂದು ಸಂಜೆ ಜೋರಾಗಿ ಮಳೆ ಸುರಿಯಲಿದೆ ಎಂದು ಮೊದಲೇ ಮುನ್ಸೂಚನೆ ನೀಡಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಿಸಬಹುದು. ಉದಾಹರಣೆಗೆ ಒಂದು ಗಂಟೆ ಭಾರೀ ಮಳೆ ಸುರಿದರೂ ಕೆಲವೇ ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು.
ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನ ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಸ್ಥಗಿತಗೊಂಡಿದ್ದ ಐಪಿಎಲ್ ಪಂದ್ಯಗಳು ಇಂದಿನಿಂದ ಮತ್ತೆ ಆರಂಭವಾಗಲಿದೆ. ಈಗಾಗಲೇ 16 ಅಂಕ ಗಳಿಸಿರುವ ಆರ್‌ಸಿಬಿ ನಾಳಿನ ಪಂದ್ಯ ಗೆದ್ದರೆ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.