ದುಬೈ: ಯಕ್ಷಧ್ರುವ ಪಟ್ಲ ಫೌಂಡೇಷನ್ ಯುಎಇ ಘಟಕದ ಸಹಯೋಗದೊಂದಿಗೆ ಜೂ.29 ರಂದು ನಡೆಯಲಿರುವ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ ಸಂಭ್ರಮ ‘ದುಬೈ ಯಕ್ಷೋತ್ಸವ-2025’ (Dubai Yakshotsava 2025) ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆ ಕಾರ್ಯಕ್ರಮ ಮೇ 11 ರಂದು (ಭಾನುವಾರ) ನಡೆಯಿತು.
ನಗರದ ಗಿಸಾಸ್‌ನ ಫಾರ್ಚೂನ್ ಪ್ಲಾಝದ ಬಾಕ್ವೆಂಟ್ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಯುಎಇಯಲ್ಲಿ ಇರುವ ಎಲ್ಲ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮ ಒಂದು ಅಭೂತಪೂರ್ವ ಸಾಕ್ಷಿಗೆ ಕಾರಣವಾಯಿತು. ಉಪಸ್ಥಿತರಿದ್ದ ಯುಎಇಯ ಕನ್ನಡ ತುಳು ಸಂಘ ಸಂಸ್ಥೆಗಳ ಹಾಗೂ ಎಲ್ಲಾ ಸಮಾಜದ ಪದಾಧಿಕಾರಿಗಳು ಜೂ.29 ರಂದು ನಡೆಯಲಿರುವ ದಶಮಾನೋತ್ಸವ ಕಾರ್ಯಕ್ರಮಕ್ಕೆ ತಮ್ಮ ತಮ್ಮ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಯುಎಇ ಬಂಟ್ಸ್ ಮತ್ತು ಕರ್ನಾಟಕ ಎನ್‌ಆರ್‌ಐ ವೇದಿಕೆಯ ಅಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಬ್ರಾಹ್ಮಣ ಸಮಾಜ ಯುಎಇಯ ಅಧ್ಯಕ್ಷ ಸುಧಾಕರ ರಾವ್ ಪೇಜಾವರ, ಉದ್ಯಮಿ ಕಲಾಪೋಷಕ ಶಿವಶಂಕರ ನೆಕ್ರಾಜೆ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕ ಅಧ್ಯಕ್ಷ ಅಮರ್ ದೀಪ್ ಕಲ್ಲೂರಾಯ, ಕರ್ನಾಟಕ ಜಾನಪದ ಅಕಾಡೆಮಿ ದುಬೈಯ ಅಧ್ಯಕ್ಷ ಸದನ್ ದಾಸ್, ಕರ್ನಾಟಕ ಸಂಘ ದುಬೈಯ ಮನೋಹರ ಹೆಗ್ಡೆ, ನಾಗರಾಜ ರಾವ್ ಉಡುಪಿ, ಕನ್ನಡಿಗರ ಕನ್ನಡ ಕೂಟ ದುಬೈಯ ಅಧ್ಯಕ್ಷ ಅರುಣ್ ಕುಮಾರ್, ಉದ್ಯಮಿ ರಶ್ಮಿಕಾಂತ್ ಶೆಟ್ಟಿ, ಕರ್ನಾಟಕ ಸಂಘ ದುಬೈಯ ಗೌರವ ಸಲಹೆಗಾರ ಜಯಂತ್ ಶೆಟ್ಟಿ, ತೀಯಾ ಸಮಾಜ ಯುಎಇಯ ಅಧ್ಯಕ್ಷೆ ಜೆಸ್ಮೀತಾ ವಿವೇಕ್, ಗಮ್ಮತ್ ಕಲಾವಿದೆರ್ ದುಬೈಯ ನಿರ್ದೆಶಕ ವಿಶ್ವನಾಥ ಶೆಟ್ಟಿ, ಬಿಲ್ಲವಾಸ್ ದುಬೈಯ ಅಧ್ಯಕ್ಷ ದೀಪಕ್ ಎಸ್.ಪಿ, ಹಿರಿಯ ಯಕ್ಷಗಾನ ಕಲಾವಿದ ಪ್ರಭಾಕರ ಸುವರ್ಣ ಕರ್ನಿರೆ, ರಂಗ ಕಲಾವಿದ ವಾಸು ಶೆಟ್ಟಿ, ಉದ್ಯಮಿ ರಮಾನಂದ ಶೆಟ್ಟಿ, ಜೈನ್ ಮಿಲನ್ ದುಬೈಯ ಸಂದೇಶ್ ಜೈನ್, ಗಾಣಿಗ ಸಮಾಜ ದುಬೈಯ ಸುಪ್ರೀತ್ ಗಾಣಿಗ, ವೀರಶೈವ ಲಿಂಗಯುತ ಸಮಾಜ ದುಬೈಯ ಮಲ್ಲಿಕಾರ್ಜುನ ಗೌಡ, ಹಿರಿಯ ಹಿಮ್ಮೇಳ ವಾದಕ ವೆಂಕಟೇಶ ಶಾಸ್ತ್ರಿ, ಒಕ್ಕಲಿಗರ ಸಂಘ ಯುಎಇಯ ಅಧ್ಯಕ್ಷ ಕಿರಣ್ ಗೌಡ, ಚಿತ್ರ ನಿರ್ಮಾಪಕ ಶೋಧನ್ ಪ್ರಸಾದ್, ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಸುಗಂದರಾಜ್ ಬೇಕಲ್, ಬಿರುವೆರ್ ಕುಡ್ಲ ದುಬೈಯ ಸಂದೀಪ್ ಕೋಟ್ಯಾನ್, ಪೊಲದವರ ಯಾನೆ ಗಟ್ಟಿ ಸಮಾಜ ದುಬೈಯ ಮನೋಜ್ ಬಂಗೆರ, ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ, ಯಕ್ಷಗಾನ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ಅವರು ಕಾರ್ಯಕ್ರಮದ ಉದ್ಘಾಟನಾ ದೀಪವನ್ನು ಬೆಳಗಿಸಿ ಉದ್ಘಾಟಿಸಿದರು.
ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆಗೊಳಿಸಿ ಮಾತನಾಡಿದ ಸರ್ವೋತ್ತಮ ಶೆಟ್ಟಿ, ಕಳೆದ ಒಂಬತ್ತು ವರ್ಷದಿಂದ ಅಭ್ಯಾಸ ಕೇಂದ್ರದ ಕಾರ್ಯಕ್ರಮಗಳನ್ನು ನೋಡುತ್ತ ಬಂದಿದ್ದೇನೆ. ಒಳ್ಳೆಯ ಕಾರ್ಯಕ್ರಮವನ್ನು ನೀಡುತ್ತ ಬಂದಿರುವುದರಿಂದ ಅಭ್ಯಾಸ ಕೇಂದ್ರದ ಕಾರ್ಯಕ್ರಮದ ಯುಎಇಯ ಜನರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ದಶಮಾನೋತ್ಸವ ಕಾರ್ಯಕ್ರಮ ಇನ್ನಷ್ಟು ಮೆಚ್ಚುಗೆಯನ್ನು ಪಡೆಯಲಿ. ಹಾಗೆಯೇ ರಂಗದ ಹಿಂದೆ ನಿರ್ದೆಶನ ಮಾಡುತ್ತಿರುವ ಗುರುಗಳಾದ ಶೇಖರ್ ಶೆಟ್ಟಿಗಾರ್ ಮತ್ತು ಶರತ್ ಕುಡ್ಲರವರಿಗೆ ಅಭಿನಂದನೆಗಳು ಎಂದು ಜೂ.29 ರಂದು ನಡೆಯಲಿರುವ ದಶಮಾನೋತ್ಸವ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ನನ್ನ ಸಂಸ್ಥೆಯಲ್ಲಿ ಯಕ್ಷಗಾನದ ಮುಹೂರ್ತ ಪೂಜೆ ಮತ್ತು ತರಗತಿಗಳು ನಡೆಯುವುದರಿಂದ ಶ್ರೀ ದೇವಿಯ ಸ್ತುತಿಯನ್ನು ವಾರ ವಾರ ಕೇಳುತ್ತ ಇದ್ದೇನೆ. ಹತ್ತನೇ ವರ್ಷದ ಕಾರ್ಯಕ್ರಮದ ಕ್ಷಣಗಣನೆಯಲ್ಲಿ ನಾವೆಲ್ಲ ಇದ್ದೇವೆ. ಉತ್ತಮ ಕಾರ್ಯಕ್ರಮವಾಗಿ ಮೂಡಿಬರಲಿ ಎಂದು ಹಾರೈಸಿದರು. ಉಪಸ್ಥಿತರಿದ್ದ ಎಲ್ಲಾ ಕನ್ನಡ ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಮ್ಮ ಹಾಗೂ ನಮ್ಮ ಸಮಾಜದ ಸಂಪೂರ್ಣ ಸಹಕಾರ ಇದೆ ಎಂದು ಬೆಂಬಲ ಘೋಷಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ಕೇಂದ್ರದ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಅವರು ಜೂ.29 ರಂದು ಕರಾಮ ಇಂಡಿಯಾನ್ ಸ್ಕೂಲ್‌ನ ಶೇಖ್ ರಷೀದ್ ಆಡಿಟೋರಿಯಂನ ಸಭಾಂಗಣದಲ್ಲಿ ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯ ವರೆಗೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆಯಿಂದ ಹತ್ತು ಚೆಂಡೆವಾದಕರಿಂದ ಅಬ್ಬರ ತಾಳ, ಖ್ಯಾತ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ದೇವಿಪ್ರಸಾದ್ ಆಳ್ವ ತಲಪಾಡಿ, ಕಾವ್ಯ ಶ್ರೀ ಅಜೇರು ಅವರಿಂದ ಯುಎಇಯಲ್ಲಿ ಮೊತ್ತಮೊದಲ ಬಾರಿಗೆ ಯಕ್ಷ ಗಾಯನ ಸೌರಭ, ಪೂರ್ವರಂಗ ನಂತರ ಯಕ್ಷಗಾನ ಶೋಭಾಯಾತ್ರೆಯೊಂದಿಗೆ ದಶಮಾನೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಭಾ ಕಾರ್ಯಕ್ರಮದಲ್ಲಿ ಯುಎಇಯ ಹತ್ತು ಮಂದಿ ಸಾಧಕರಿಗೆ ಗೌರವ ಸನ್ಮಾನ ಜರುಗಲಿದೆ. ನಂತರ ಕೇಂದ್ರದ ಕಲಾವಿದರು ಹಾಗೂ ಊರಿನ ಪ್ರಖ್ಯಾತ ಕಲಾವಿದರಿಂದ ‘ಶಿವಾನಿ ಸಿಂಹವಾಹಿನಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಊರಿನ ಮುಮ್ಮೆಳ ಕಲಾವಿದರಾಗಿ ಪಾವಂಜೆ ಮೇಳದ ಸುಬ್ರಾಯ ಹೊಳ್ಳ ಕಾಸರಗೋಡು ರಕ್ತಬೀಜನ ಪಾತ್ರದಲ್ಲಿ ಹಾಗೂ ಕಟೀಲು ಮೇಳದ ಖ್ಯಾತ ಸ್ತ್ರೀ ಪಾತ್ರದಾರಿ ಅರುಣ್ ಕೋಟ್ಯಾನ್ ಶ್ರೀ ದೇವಿಯಾಗಿ ದುಬೈಯ ಯಕ್ಷಗಾನದ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ದೇವಿಪ್ರಸಾದ್ ಆಳ್ವ ತಲಪಾಡಿ, ಕಾವ್ಯ ಶ್ರೀ ಅಜೇರು, ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಚೆಂಡೆ ಮದ್ದಲೆಯಲ್ಲಿ ಚಂದ್ರಶೇಖರ ಸರಪಾಡಿ, ಸವಿನಯ ನೆಲ್ಲಿತೀರ್ಥ, ಭವಾನಿ ಶಂಕರ ಶರ್ಮ, ಪುತ್ತಿಗೆ ವೆಂಕಟೇಶ ಶಾಸ್ತ್ರಿ, ಚಕ್ರತಾಳದಲ್ಲಿ ಚರಣ್ ರಾಜ್, ಆದಿತ್ಯ ದಿನೇಶ್ ಶೆಟ್ಟಿ ಹಾಗೂ ಪ್ರಸಾದನ ಮತ್ತು ವೇಷಭೂಷಣದಲ್ಲಿ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ, ಮನೋಜ್ ಶೆಟ್ಟಿಗಾರ್ ಕಿನ್ನಿಗೋಳಿ ಅವರು ಸಹಕರಿಸಲಿದ್ದಾರೆ. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಕರಾವಳಿಯ ಪ್ರಸಿದ್ಧ ಟಿವಿ ಮಾಧ್ಯಮದ ನಿರೂಪಕ ಚೇತನ್ ಶೆಟ್ಟಿ ನಿರ್ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕಲಾ ಅಭಿಮಾನಿಗಳಿಗೆ ಮಧ್ಯಾಹ್ನ ಅನ್ನಪ್ರಸಾದ ವಿತರಿಸಲಾಗುವುದು ಎಂದು ದಶಮಾನೋತ್ಸವ ಕಾರ್ಯಕ್ರಮದ ಮಾಹಿತಿಯನ್ನು ನೀಡಿದ್ದಾರೆ. ಕಾರ್ಯಕ್ರಮವನ್ನು ಕೇಂದ್ರದ ಸದಸ್ಯ ಗಿರೀಶ್ ನಾರಯಣ್ ನಿರೂಪಿಸಿದರು. ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ ಧನ್ಯವಾದವಿತ್ತರು.