ಪಾಕ್‌ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ?

Public TV
3 Min Read
Kirana Hills

ಇಸ್ಲಾಮಾಬಾದ್‌: ಭಾರತ (India) ಪ್ರತಿದಾಳಿ ಬೆನ್ನಲ್ಲೇ ಪಾಕಿಸ್ತಾನದಲ್ಲಿ (Pakistan) ಪರಮಾಣು ವಿಕಿರಣ ಸೋರಿಕೆ ಆಗುತ್ತಿದ್ಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

ಪಾಕ್ ಪಂಜಾಬ್ ಪ್ರಾಂತ್ಯದ ಸರ್ಗೋಧಾ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿತ್ತು. ಈ ವಾಯು ನೆಲೆ ಕಿರಾನಾ ಬೆಟ್ಟದೊಂದಿಗೆ (Kirana Hills) ಸಂಪರ್ಕ ಹೊಂದಿದೆ. ಕಿರಾನಾ ಬೆಟ್ಟದ ಕೆಳಗಡೆ ಇರುವ ಅಣ್ವಸ್ತ್ರ ಗೋದಾಮಿನಿಂದ ವಿಕಿರಣ ಸೋರಿಕೆಯಾಗುತ್ತಿದೆ (Nuclear Leak) ಎಂಬ ವದಂತಿ ಎದ್ದಿದೆ.

ಈ ಬೆಟ್ಟದ ಸಮೀಪದಲ್ಲಿರುವ ಸ್ಥಳೀಯರಿಗೆ ಆರೋಗ್ಯ ಸಮಸ್ಯೆ ಆಗುತ್ತಿದ್ದು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ಸರಿಯಾಗಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ  ಪರಮಾಣು ನಿಯಂತ್ರಣ ಪ್ರಾಧಿಕಾರ (PNRA) ವೆಬ್‌ಸೈಟ್‌ ನಿಗೂಢವಾಗಿ ಆಫ್‌ಲೈನ್‌ ಆಗಿದೆ. ದನ್ನೂ ಓದಿ: ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳಿಗೆ ರಹಸ್ಯವಾಗಿ ಅನುದಾನ ನೀಡಿತ್ತು ಅಮೆರಿಕ

 

ಸೋರಿಕೆಯಾಗುತ್ತಿರುವ ಬಗ್ಗೆ ವದಂತಿ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಅಮೆರಿಕ-ಈಜಿಪ್ಟ್ ನಿಂದ 2 ವಿಶೇಷ ವಿಮಾನಗಳು ಪಾಕಿಸ್ತಾನಕ್ಕೆ ಆಗಮಿಸಿದ್ದು, ಈ ವಿಶೇಷ ವಿಮಾನಗಳು ವಿಕಿರಣ ಸೋರಿಕೆ ಪತ್ತೆ ಮಾಡುವ ವಿಮಾನಗಳು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಜೊತೆಗೆ ಈಜಿಪ್ಟ್‌ನಿಂದ ಅಪಾರ ಪ್ರಮಾಣದ ಬೋರಾನ್ ರಾಸಾಯನಿಕವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ವಿಕಿರಣ ಸೋರಿಕೆಯನ್ನು ತಟಸ್ಥಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ವಿಕಿರಣ ಸೋರಿಕೆ ಆಗುತ್ತಿರುವ ಬಗ್ಗೆ ಇಲ್ಲಿಯವರೆಗೆ ಪಾಕ್‌ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ಗೆ ಪಾಕ್‌ ವಾಯುಪಡೆ ಮುಖ್ಯ ತಂತ್ರಜ್ಞ ಸೇರಿ 11 ಸೈನಿಕರು ಸಾವು

ಸೋಮವಾರ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರು ಕಿರಾನಾ ಬೆಟ್ಟದ ಮೇಲೆ ದಾಳಿ ನಡೆದಿದ್ಯಾ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎಕೆ ಭಾರ್ತಿ (Air Marshal Bharti) ಅವರು, ಕಿರಾನಾ ಬೆಟ್ಟದಲ್ಲಿ ಪರಮಾಣು ಸ್ಥಾವರವಿದೆ ಎಂದು ತಿಳಿಸಿದ್ದಕ್ಕೆ ಧನ್ಯವಾದಗಳು. ನಮಗೆ ಈ ವಿಚಾರ ತಿಳಿದಿರಲಿಲ್ಲ ಎಂದು ಉತ್ತರಿಸಿದರು. ಮುಂದುವರಿದು ಕಿರಾನಾ ಬೆಟ್ಟದ ಮೇಲೆ ನಾವು ಯಾವುದೇ ದಾಳಿ ಮಾಡಿಲ್ಲ. ಅಲ್ಲಿ ಏನಿದೆ ಎನ್ನುವುದು ಗೊತ್ತಿಲ್ಲ ಎಂದಿದ್ದರು.

ಕಿರಾನಾ ಬೆಟ್ಟ ಎಲ್ಲಿದೆ?
ಸರ್ಗೋಧಾ ವಾಯುನೆಲೆಯಿಂದ ರಸ್ತೆಯ ಮೂಲಕ ಕೇವಲ 20 ಕಿಮೀ ಮತ್ತು ಕುಶಾಬ್ ಪರಮಾಣು ಸ್ಥಾವರದಿಂದ 75 ಕಿಮೀ ದೂರದಲ್ಲಿ ಕಿರಾನಾ ಬೆಟ್ಟ ಇದೆ. ಸುಮಾರು 68 ಚದರ ಕಿ.ಮೀ ಪ್ರದೇಶವನ್ನು ಆವರಿಸಿರುವ ಮತ್ತು 39 ಕಿ.ಮೀ ಪರಿಧಿಯಿಂದ ಸುತ್ತುವರೆದಿರುವ ಕಿರಾನಾ ಬೆಟ್ಟಗಳು ಬಹು-ಪದರದ ರಕ್ಷಣಾ ವ್ಯವಸ್ಥೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಒಳಗಡೆ ಕನಿಷ್ಠ 10 ಭೂಗತ ಸುರಂಗ ಇದೆ ಎನ್ನಲಾಗುತ್ತಿದೆ

ಚರ್ಚೆ ಆಗುತ್ತಿರುವುದು ಯಾಕೆ?
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತೀವ್ರ ಸಂಘರ್ಷ ನಡೆಯುತ್ತಿದ್ದಾಗ ದಿಢೀರ್‌ ಕದನ ವಿರಾಮ ಘೋಷಣೆಯಾಗಿದ್ದಕ್ಕೆ ಕಾರಣ ಕಿರಾನಾ ಬೆಟ್ಟದ ಮೇಲಿನ ದಾಳಿ ಎಂಬ ವಿಚಾರ ಕಳೆದ ಶನಿವಾರದಿಂದ ಜೋರಾಗಿ ಚರ್ಚೆ ಆಗುತ್ತಿದೆ.

Kirna Hilla Mushaf Airbase Sargodha Pakistan

ಭಾರತ ಮೇ 9 ಮತ್ತು 10ರ ರಾತ್ರಿ ಪಾಕಿಸ್ತಾನದ ಮೇಲೆ ಪ್ರಬಲವಾಗಿ ದಾಳಿ ನಡೆಸಿತ್ತು. ಅದರಲ್ಲೂ ವಾಯುಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಸೇನಾ ನೆಲೆಗಳ ಜೊತೆಯಲ್ಲಿ ಶಸ್ತ್ರಾಸ್ತ್ರ ಇರುವ ಜಾಗದ ಮೇಲೂ ಕ್ಷಿಪಣಿ ಹಾಕಿದೆ. ಈ ಪೈಕಿ ಪಾಕಿಸ್ತಾನ ಅಣ್ವಸ್ತ್ರ ಸಂಗ್ರಹ ಮತ್ತು ಮಿಲಿಟರಿ ಸಂಗ್ರಹಣಾ ಸ್ಥಳ ಕಿರಾನಾ ಬೆಟ್ಟದ ಮೇಲೆಯೇ ದಾಳಿ ನಡೆಸಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ

ಈ ವಿಚಾರಕ್ಕೆ ಪೂರಕ ಎಂಬಂತೆ ಕಿರಾನಾ ಬೆಟ್ಟದಿಂದ ಸ್ಫೋಟ ಸಂಭವಿಸಿ ಎತ್ತರಕ್ಕೆ ಹೊಗೆ ಹೊತ್ತಿರುವ ದೃಶ್ಯ ಸೆರೆಯಾಗಿತ್ತು. ವಿಡಿಯೋ ಮಾಡಿದ್ದ ವ್ಯಕ್ತಿಯೊಬ್ಬರು ಕಿರಾನಾ ಬೆಟ್ಟದ ಮೇಲೆ ದಾಳಿ ನಡೆದಿದೆ ಎಂದು ಹೇಳುತ್ತಿರುವ ಧ್ವನಿಯೂ ರೆಕಾರ್ಡ್‌ ಆಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Share This Article