ಆಸ್ಪತ್ರೆ, ಮೂಲಸೌಕರ್ಯ ಗುರಿಯಾಗಿಸಿ ಪಾಕ್‌ ಮಿಸೈಲ್‌ ದಾಳಿ, ತಕ್ಕ ಉತ್ತರ ಕೊಟ್ಟಿದ್ದೇವೆ: ವ್ಯೋಮಿಕಾ ಸಿಂಗ್

Public TV
2 Min Read
Vyomika Singh

ನವದೆಹಲಿ: ಪಾಪಿ ಪಾಕಿಸ್ತಾನ (Pakistan) ಗಡಿ ಮೀರಿ ಭಾರತದ ಮೇಲೆ ದಾಳಿ ಮಾಡುತ್ತಿದೆ. ಶೆಲ್ ದಾಳಿ ನಡೆಸಿ ಅಮಾಯಕರನ್ನ ಗುರಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಜಮ್ಮು-ಕಾಶ್ಮೀರದಲ್ಲಿ (Jammu And Kashmir) ಬೆಳಗ್ಗಿನವರೆಗೂ ಬ್ಲಾಕ್‌ಔಟ್ ಘೋಷಿಸಲಾಗಿತ್ತು.

ಮೂಲಸೌಕರ್ಯಗಳಿಗೆ ಹಾನಿ:
ಇಂದು ರಕ್ಷಣಾ ಸಚಿವಾಲಯ ನಡೆಸಿದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಂಗ್‌ ಕಮಾಂಡರ್‌ ವ್ಯೂಮಿಕಾ ಸಿಂಗ್‌ (Vyomika Singh), ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಅವರಂತಿಪುರ ಹಾಗೂ ಉಧಂಪುರದಲ್ಲಿರುವ ಆಸ್ಪತ್ರೆ, ಶಾಲೆ ಇತರ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದರು.

ಅಲ್ಲದೇ ದಾಳಿ ನಡೆಸಲು ತನ್ನ ಸೈನ್ಯವನ್ನು ಮುಂದಕ್ಕೆ ಸಾಗಿಸುತ್ತಿದೆ, ಇದು ಪರಿಸ್ಥಿತಿಯನ್ನ ಮತ್ತಷ್ಟು ಉಲ್ಬಣಗೊಳಿಸುವ ಆಕ್ರಮಣಕಾರಿ ಉದ್ದೇಶವನ್ನ ಸೂಚಿಸುತ್ತದೆ. ಭಾರತೀಯ ಸಶಸ್ತ್ರ ಪಡೆಗಳು ಹೆಚ್ಚಿನ ಕಾರ್ಯಾಚರಣೆಯ ಸನ್ನದ್ಧತೆಯಲ್ಲಿವೆ. ಎಲ್ಲಾ ಪ್ರತಿಕೂಲ ಕ್ರಮಗಳನ್ನು ಪರಿಣಾಮಕಾರಿಯಾಗಿ ಎದುರಿಸಲಾಗಿದೆ ಮತ್ತು ದಿಟ್ಟ ಉತ್ತರ ಸಹ ನೀಡಲಾಗಿದೆ. ಪಾಕಿಸ್ತಾನ ಮತ್ತೂ ದಾಳಿಗೆ ಪ್ರೈತ್ನಿಸಿದ್ರೆ ನಮ್ಮ ಸೇನೆ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.

ಪಾಕ್‌ ವಾಯುನೆಲೆಗಳು ಛಿದ್ರ:
ಇನ್ನೂ ಭಾರತ ನಡೆಸಿದ ವಾಯುದಾಳಿಯಲ್ಲಿ ಸಿಯಾಲ್‌ಕೋಟ್, ಪಸ್ರೂರ್ ರಾಡಾರ್ ಸೈಟ್, ರಹೀಮ್ ಯಾರ್ ಖಾನ್, ಮುರಿದ್‌, ರಫೀಕ್, ಚುನಿಯನ್, ಚಕ್ಲಾಲಾ, ಸುಕ್ಕೂರ್ ಮೊದಲಾದ ಪಾಕಿಸ್ತಾನ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಜೊತೆಗೆ ಭಾರತದ ಮೇಲೆ ಪದೇ ಪದೇ ದಾಳಿಗೆ ಯತ್ನಿಸುತ್ತಿದ್ದ ಡ್ರೋನ್‌ ಲಾಂಚ್‌ಪ್ಯಾಡನ್ನೇ ಉಡೀಸ್‌ ಮಾಡಿದೆ ಎಂದು ಫೋಟೋ ಮತ್ತು ವಿಡಿಯೋ ಸಮೇತ ವಿವರಿಸಿದರು.

ಅಮೃತಸರದಲ್ಲಿ ಪಾಕ್‌ ಡ್ರೋನ್‌ ಉಡೀಸ್‌:
ಭಾರತೀಯ ಸೇನೆಯು ಪಾಕಿಸ್ತಾನದ ಡ್ರೋನ್‌ಗಳನ್ನು ಅಮೃತಸರದ ಖಾಸಾ ಕಂಟೋನ್ಮೆಂಟ್‌ನಲ್ಲಿ ಹೊಡೆದುರುಳಿಸಿದೆ. ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಪಾಕಿಸ್ತಾನವು ಡ್ರೋನ್ ದಾಳಿಗಳ ಮೂಲಕ ಗಡಿಗಳಲ್ಲಿ ತೊಂದರೆ ಸೃಷ್ಟಿಸುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ. ಶನಿವಾರ ಮುಂಜಾನೆ 5 ಗಂಟೆಗೆ ಖಾಸಾ ಕಂಟೋನ್ಮೆಂಟ್ ಬಳಿ ಹಾರುತ್ತಿದ್ದ ಹಲವು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.

ಜೆ&ಕೆ ಗುರಿಯಾಗಿಸಿ ಡ್ರೋನ್ ದಾಳಿ
ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿ ಪಾಕಿಸ್ತಾನ ಶನಿವಾರವೂ ಹಲವಾರು ಡ್ರೋನ್ ದಾಳಿಗಳನ್ನು ನಡೆಸಿದೆ. ಶನಿವಾರ ಬೆಳಗಿನ ಜಾವ ಪಾಕಿಸ್ತಾನವು ಜಮ್ಮು ವಾಯುನೆಲೆ ಮತ್ತು ಉಧಂಪುರ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ, ಅಲ್ಲದೇ ಜಮ್ಮುವಿನ ಪ್ರಸಿದ್ಧ ಶಂಭು ದೇವಾಲಯದ ಮೇಲೂ ಕ್ಷಿಪಣಿ ದಾಳಿಗೆ ಪಾಕ್‌ ಯತ್ನಿಸಿದೆ. ಆದ್ರೆ ಭಾರತ ಈ ದಾಳಿಯನ್ನು ವಿಫಲಗೊಳಿಸಿದೆ. ಉಧಂಪುರದಲ್ಲಿ ಪಾಕಿಸ್ತಾನದ ಕ್ಷಿಪಣಿ ಬಿದ್ದಿದೆ. ಅದರ ಅವಶೇಷಗಳನ್ನು ಹೊರತೆಗೆಯಲಾಗಿದೆ.

Share This Article