ನವದೆಹಲಿ: ಪಾಕ್ (Pakistan) ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ (Indian Army) ನಡೆಸಿದ `ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಿರಂತರವಾದದ್ದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಹೇಳಿದರು.
ಪಹಲ್ಗಾಮ್ ದಾಳಿಯಲ್ಲಿ (Pahalgam Terrorist Attack) ಪ್ರಾಣಬಿಟ್ಟ 26 ಜನರ ಸಾವಿಗೆ ಪ್ರತೀಕಾರವಾಗಿ ಭಾರತೀಯ ಸೇನೆ `ಆಪರೇಷನ್ ಸಿಂಧೂರ’ (Operation Sindoor) ಹೆಸರಿನಲ್ಲಿ ಮಂಗಳವಾರ ತಡರಾತ್ರಿ ಪಾಕ್‌ನ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ.ಇದನ್ನೂ ಓದಿ: ʻಆಪರೇಷನ್ ಸಿಂಧೂರʼದಲ್ಲಿ 100 ಉಗ್ರರ ಹತ್ಯೆ – ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರದಿಂದ ಮಾಹಿತಿ
ಇಂದು ನಡೆದ ಸರ್ವಪಕ್ಷ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, `ಆpಪರೇಷನ್ ಸಿಂಧೂರ’ದಲ್ಲಿ ಕನಿಷ್ಠ 100 ಭಯೋತ್ಪಾದಕರ ಹತ್ಯೆಯಾಗಿದೆ. ಈ ಕಾರ್ಯಾಚರಣೆ ಹೀಗೆ ಮುಂದುವರಿಯಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದ್ದು, ಅವರು ಹೇಳಿದಂತೆ ಇದು ಒಂದು ನಿರಂತರ ಕಾರ್ಯಾಚರಣೆಯಾಗಿದೆ. ಸಶಸ್ತ್ರ ಪಡೆಗಳು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ 9 ಭಯೋತ್ಪಾದಕ ಅಡಗುತಾಣಗಳು ಧ್ವಂಸಗೊಂಡಿವೆ. ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರತಿಪಕ್ಷಗಳು ಭರವಸೆ ನೀಡಿವೆ. `ಆಪರೇಷನ್ ಸಿಂಧೂರ’ ಯಶಸ್ಸಿಗೆ ಪಕ್ಷಾತೀತವಾಗಿ ಎಲ್ಲರೂ ಭಾರತೀಯ ಸೇನೆಯನ್ನು ಅಭಿನಂದಿಸಿದರು ಎಂದು ತಿಳಿಸಿದರು.
ಸದ್ಯ ದೇಶವು ಎದುರಿಸುತ್ತಿರುವ ಪ್ರಮುಖ ಸವಾಲನ್ನು ಗುರುತಿಸಿ ಪ್ರತಿಯೊಬ್ಬ ನಾಯಕರು ಜವಾಬ್ದಾರಿ ಮತ್ತು ಪ್ರಬುದ್ಧತೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಂಡರೆ ಭಾರತ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಆದರೆ ಈಗಾಗಲೇ ಆಪರೇಷನ್ ಸಿಂಧೂರಕ್ಕೆ ಪ್ರತಿಯಾಗಿ, ಪಾಕಿಸ್ತಾನಿ ಸೇನೆಯು ಪೂಂಚ್-ರಾಜೌರಿ ಪ್ರದೇಶದ ನಿಯಂತ್ರಣ ರೇಖೆಯುದ್ದಕ್ಕೂ ಫಿರಂಗಿ ದಾಳಿ ನಡೆಸಿ 15 ನಾಗರಿಕರನ್ನು ಬಲಿಪಡೆದುಕೊಂಡಿದೆ ಎಂದರು.ಇದನ್ನೂ ಓದಿ: ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು – ಖರ್ಗೆ ಅಸಮಾಧಾನ