– ಭಾರತದ 15 ನಗರಗಳ ಟಾರ್ಗೆಟ್ ಮಾಡಿದ್ದ ಲಾಹೋರ್ ಏರ್‌ಡಿಫೆನ್ಸ್ ಢಮಾರ್
ಇಸ್ಲಾಮಾಬಾದ್: ಭಾರತದ ಕ್ಷಿಪಣಿಗಳ ದಾಳಿ ಪಾಕಿಸ್ತಾನ ಅಕ್ಷರಶಃ ಥಂಡಾ ಹೊಡೆದಿದೆ. ಪಾಕ್‌ನ ಹೆಚ್‌ಕ್ಯೂ-9 ವಾಯು ರಕ್ಷಣಾ ಕ್ಷಿಪಣಿ ಉಡಾವಣಾ ಘಟಕಗಳೇ ಭಾರಿ ಹಾನಿಗೊಳಗಾಗಿವೆ. ಭಾರತದ 15 ನಗರಗಳನ್ನು ಪಾಕ್ ಟಾರ್ಗೆಟ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಭಾರತ ದಿಟ್ಟ ಉತ್ತರ ನೀಡಿದ್ದು, ಲಾಹೋರ್‌ನ ಏರ್‌ಡಿಫೆನ್ಸ್ ಅನ್ನು ಉಡೀಸ್ ಮಾಡಿದೆ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರ (ಪಿಒಜೆಕೆ)ದೊಳಗಿನ ಒಂಬತ್ತು ಭಾರತ ವಿರೋಧಿ ಭಯೋತ್ಪಾದಕ ತಾಣಗಳನ್ನು ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಾಶಪಡಿಸಿದೆ. ಇದರ ಜೊತೆಗೆ ಪಾಕ್ ರಕ್ಷಣಾ ಘಟಕವೂ ಹಾನಿಗೊಂಡಿದೆ.
ಬುಧವಾರ ಬೆಳಗಿನ ಜಾವ ನಡೆಸಿದ ನಿಖರ ದಾಳಿಯ ಸರಣಿಯೊಂದಿಗೆ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಗುರಿಯನ್ನು ಹೊಂದಿರುವ ಕಾರ್ಯಾಚರಣೆ ಮುಂದುವರೆದಿದ್ದು, ಈ ಹಂತದಲ್ಲಿ ಭಯೋತ್ಪಾದಕರ ನಿಖರವಾದ ಸಾವುನೋವುಗಳ ಸಂಖ್ಯೆಯನ್ನು ನೀಡುವುದು ಸವಾಲಿನ ಸಂಗತಿಯಾಗಿದೆ.
ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಈ ದಾಳಿಗಳು ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ಪ್ರಮುಖ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡವು. ನಾಲ್ಕು ಗುರಿಗಳು ಪಾಕಿಸ್ತಾನದೊಳಗೆ ಮತ್ತು ಉಳಿದ ಐದು ಗುರಿಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಉಗ್ರ ತಾಣಗಳನ್ನು ನಾಶಪಡಿಸಿವೆ.
ಇತ್ತ ಪಾಕಿಸ್ತಾನಕ್ಕೆ ಸರಬರಾಜು ಮಾಡಿದ ಚೀನಾ ನಿರ್ಮಿತ ರೆಡಾರ್ (Chinese Radars) ವ್ಯವಸ್ಥೆಗಳು ಭಾರತೀಯ ಸೇನೆಯ ವಾಯುದಾಳಿಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. 2022ರ ಮಾರ್ಚ್‌ನಲ್ಲಿಯೂ ಭಾರತದ ಬ್ರಹ್ಮೋಸ್ ಕ್ಷಿಪಣಿಯ ಆಕಸ್ಮಿಕ ದಾಳಿಯನ್ನ ಪತ್ತೆಹಚ್ಚುವಲ್ಲಿ ಪಾಕಿಸ್ತಾನದ ರೆಡಾರ್ ವ್ಯವಸ್ಥೆ ವಿಫಲವಾಗಿತ್ತು. ಇದೀಗ ʻಆಪರೇಷನ್ ಸಿಂಧೂರʼ ಸಂದರ್ಭದಲ್ಲೂ ಭಾರತೀಯ ಕ್ಷಿಪಣಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯಲ್ಲಿ ಲೋಪ ಸಂಭವಿಸಿದ್ದು ಇದೇ ಮೊದಲಲ್ಲ, 2019ರ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ಇದೇ ರೀತಿ ಪಾಕಿಸ್ತಾನದ ರಾಡಾರ್ ವ್ಯವಸ್ಥೆಯಲ್ಲಿ ಲೋಪ ಸಂಭವಿಸಿತ್ತು. ಆಗ ಪಾಕಿಸ್ತಾನ ಚೀನಾ ನಿರ್ಮಿತ ರಾಡಾರ್‌ಗಳ ಮೊರೆ ಹೋಗಿತ್ತು. ಮೊದಲ ಬ್ಯಾಚ್‌ನ 6 ರೆಡಾರ್ ಸಿಸ್ಟಂಗಳನ್ನು 2015 ಮತ್ತು 2016ರಲ್ಲಿ ಚೀನಾ ಪಾಕ್‌ಗೆ ಹಸ್ತಾಂತರ ಮಾಡಿತ್ತು. ಅಷ್ಟೇ ಅಲ್ಲದೇ ಚೀನಾದಿಂದ ಪಾಕ್ 9 LY-80 LOMADS (ಕಡಿಮೆ ಮತ್ತು ಮಧ್ಯಮ ಎತ್ತರದ ವಾಯು ರಕ್ಷಣಾ ವ್ಯವಸ್ಥೆಗಳು) ಖರೀದಿಸಿತ್ತು. ಇದನ್ನು ವಿಶ್ವದ ಅತ್ಯಂತ ಮುಂದುವರಿದ ರಕ್ಷಣಾ ವ್ಯವಸ್ಥೆಗಳಲ್ಲಿ ಒಂದು ಎಂದು ಚೀನಾ ಬುರುಡೆ ಬಿಟ್ಟಿತ್ತು. ಇದೀಗ ʻಆಪರೇಷನ್ ಸಿಂಧೂರʼ ತಡೆಯುವಲ್ಲಿ ವಿಫಲವಾದ ಬಳಿಕ ಪಾಕ್ ನಿರೀಕ್ಷೆ ಸುಳ್ಳಾಗಿದೆ.
ಭಾರತದ ಸೂಪರ್‌ಸಾನಿಕ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ತೀವ್ರ ವೇಗ ಮತ್ತು ಎತ್ತರದ ಕಾರಣದಿಂದಾಗಿ ರೆಡಾರ್‌ಗಳಿಗೆ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ ಎನ್ನುವುದು ಬ್ರಹ್ಮೋಸ್ ಕ್ಷಿಪಣಿ ಪ್ರಕರಣದಿಂದ ಬೆಳಕಿಗೆ ಬಂದಿತ್ತು. ರಿಯಲ್ ಟೈಂನಲ್ಲಿ ರೆಡಾರ್‌ಗಳಿಗೆ ಪತ್ತೆ ಹಚ್ಚಲು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಭಾರತ ಇಂದು ರಫೇಲ್ ವಿಮಾನ ಮೂಲಕ ಕ್ಷಿಪಣಿಯನ್ನು ಹಾರಿಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ.