ನವದೆಹಲಿ: ಗಡಿಯಲ್ಲಿ ಪಾಕಿಸ್ತಾನ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘಿಸುವ ಮೂಲಕ ಭಾರತವನ್ನು ಕೆಣಕುತ್ತಿದೆ. ಎಲ್‌ಒಸಿಯಲ್ಲಿ ಅಪ್ರಚೋದಿತ ಸತತ 7ನೇ ರಾತ್ರಿಯೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಉರಿ ಮತ್ತು ಅಖ್ನೂರ್ ವಲಯಗಳ ಕಡೆಗೆ ಪಾಕಿಸ್ತಾನ ಸೇನೆಯು ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದೆ. ಈ ಗುಂಡಿನ ದಾಳಿಗೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುತ್ತಿದೆ. ಪಾಕಿಸ್ತಾನದ ಪಡೆಗಳು ಬುಧವಾರ ರಾತ್ರಿ ಅಂತರರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ಪ್ರಾರಂಭಿಸಿದವು.
ಮಂಗಳವಾರ ಕದನ ವಿರಾಮ ಉಲ್ಲಂಘನೆಗಳ ಕುರಿತು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಸಂಭಾಷಣೆ ನಡೆಸಿದರು. ಅಪ್ರಚೋದಿತ ಗುಂಡಿನ ದಾಳಿಯ ವಿರುದ್ಧ ಪಾಕಿಸ್ತಾನ ಸೇನೆಗೆ ಎಚ್ಚರಿಕೆ ನೀಡಿದ್ದಾರೆ.
ಕದನ ವಿರಾಮ ಉಲ್ಲಂಘನೆಗಳು 2003 ರ ಕದನ ವಿರಾಮ ಒಪ್ಪಂದಕ್ಕೆ ವಿರುದ್ಧವಾಗಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸಲಹೆ ನೀಡಿದ್ದಾರೆ.