ಬೀದರ್: ಜನಿವಾರ (Janivara) ಧರಿಸಿದ್ದಕ್ಕೆ ಸಿಇಟಿ ಪರೀಕ್ಷೆಯಿಂದ (CET) ವಂಚಿತನಾಗಿದ್ದ ಸುಚಿವ್ರತ್ ಕುಲಕರ್ಣಿ ಭೌತಶಾಸ್ತ್ರ (Physics) ಮತ್ತು ರಸಾಯನಶಾಸ್ತ್ರ (Chemistry) ವಿಷಯದ ಸರಾಸರಿ ಅಂಕಗಳನ್ನು ಆಧಾರವಾಗಿ ಪರಿಗಣಿಸಿ ಗಣಿತ ಅಂಕ ನೀಡುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಪತ್ರ ಬರೆದಿದ್ದಾನೆ.
ಸುಚಿವ್ರತ್ ಕುಲಕರ್ಣಿಗೆ ಉನ್ನತ ಶಿಕ್ಷಣ ಇಲಾಖೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಅಥವಾ ಹಾಲಿ ಬರೆದಿರುವ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪರೀಕ್ಷೆಯಲ್ಲಿ ಪಡೆದ ಅಂಕದ ಆಧಾರದ ಮೇಲೆ ನೀಡುವ ಗಣಿತ ವಿಷಯದ ಅಂಕ ನಿಗದಿ ಮಾಡುವ ಆಯ್ಕೆ ನೀಡಿತ್ತು. ಈ ಆಯ್ಕೆಯ ಪೈಕಿ ಸುಚಿವ್ರತ್ ಎರಡನೇ ಆಯ್ಕೆಯನ್ನು ಆರಿಸಿಕೊಳ್ಳುವುದಾಗಿ ಹೇಳಿದ್ದಾನೆ.
ಪತ್ರದಲ್ಲಿ ಏನಿದೆ?
ನಾನು ಸುಚಿವ್ರತ್ ಕುಲಕರ್ಣಿ ಬೀದರ್ ನಿವಾಸಿಯಾಗಿದ್ದೇನೆ. ಏ.17 ರಂದು ಬೀದರ್ ನಗರದ ಸಾಯಿಸ್ಫೂರ್ತಿ ಪಿಯುಸಿ ಕಾಲೇಜಿನಲ್ಲಿರುವ ಕೇಂದ್ರಕ್ಕೆ ನಾನು ಸಿಇಟಿ ಗಣಿತ (Mathematics) ಪರೀಕ್ಷೆ ಬರೆಯಲು ಹೋಗಿರುತ್ತೇನೆ. ಆದರೆ ಈ ವೇಳೆ ಅಲ್ಲಿದ್ದ ಸಿಬ್ಬಂದಿ ನಾನು ತೊಟ್ಟಿದ್ದ ಜನಿವಾರ ತೆಗೆಯುವಂತೆ ಹೇಳಿದ್ದರು. ನಾನು ಬ್ರಾಹ್ಮಣ ಸಮಾಜದ ವಿದ್ಯಾರ್ಥಿಯಾಗಿದ್ದು ಜನಿವಾರ ತೆಗೆಯಲು ಸಾಧ್ಯವಿಲ್ಲ. ಮೇಲಾಗಿ KEA ಪರೀಕ್ಷಾ ನಿಯಮದಲ್ಲಿ ಸಹ ಜನಿವಾರ ತೆಗೆಯುವ ಸೂಚನೆ ಇಲ್ಲ. ಜನಿವಾರ ತೆಗೆಯುವುದು ಅಥವಾ ತೆಗೆಸುವುದು ಧರ್ಮ ಅವಮಾನವಾಗಿದೆ. ನಾನು ಜನಿವಾರ ತೆಗೆಯುವುದಿಲ್ಲ ಎಂದು ಹೇಳಿರುತ್ತೇನೆ. ಆಗ ಸಿಬ್ಬಂದಿಗಳು ನಾನು ಜನಿವಾರ ತೆಗೆಯದಿದ್ದಕ್ಕೆ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡದೇ ವಾಪಸ್ ಕಳಿಸಿದ್ದಾರೆ.
ಪರೀಕ್ಷಾ ಕೇಂದ್ರದವರ ಈ ಕ್ರಮ ತಪ್ಪು ಹಾಗೂ KEA ನಿಯಮದ ವಿರುದ್ಧವಿದೆ ಎಂದು ಹೇಳಿ ಎಲ್ಲೆಡೆ ಬೃಹತ್ ಪ್ರತಿಭಟನೆ ನಡೆದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನನ್ನ ಮೇಲಿನ ಅನ್ಯಾಯ ಸರಿಪಡಿಸಲು ಹೇಳಿತು. ಪುನಃ ಸಿಇಟಿ ಗಣಿತ ವಿಷಯದ ಪರೀಕ್ಷೆ ಬರೆಯಲು ಅಥವಾ ಈಗಾಗಲೇ ಬರೆದಿದ್ದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಸರಾಸರಿ ಅಂಕಗಳ ಆಧಾರದಲ್ಲಿ ಗಣಿತ ವಿಷಯದ ಪರೀಕ್ಷೆಯ ಮೌಲ್ಯಮಾಪನ ಮಾಡಿ ಅಂಕ ನೀಡುವ ಘೋಷಣೆ ಮಾಡಿರುತ್ತದೆ.
ಸರ್, ನಾನು ಮತ್ತು ನನ್ನ ಪಾಲಕರು ಸಮಾಲೋಚನೆ ಮಾಡಿ ಸರ್ಕಾರದ ಆಯ್ಕೆಯಲ್ಲಿ ಒಂದನ್ನು ಒಪ್ಪಿರುತ್ತೇವೆ. ನನ್ನ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದ ಸರಾಸರಿ ಅಂಕಗಳನ್ನು ಆಧಾರವಾಗಿ ಪರಿಗಣಿಸಿ ಗಣಿತ ವಿಷಯದ ಅಂಕ ನೀಡುವಂತೆ ಈ ಮೂಲಕ ಕೋರಲಾಗಿದೆ. ನನ್ನ ನಿರ್ಧಾರ ತಮಗೆ ತಿಳಿಸಿರುತ್ತೇನೆ. ನನಗೆ ಈ ಅವಕಾಶ ನೀಡಿ ನ್ಯಾಯ ಒದಗಿಸಿದ ಕರ್ನಾಟಕ ಸರ್ಕಾರಕ್ಕೆ ನಾನು ಮತ್ತು ನನ್ನ ಪರಿವಾರದವರಿಗೆ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇವೆ. ನನ್ನ ಪರವಾಗಿ ಧ್ವನಿ ಎತ್ತಿದ ಎಲ್ಲರಿಗೂ ವಂದಿಸುತ್ತೇನೆ.