ಶ್ರೀನಗರ: ಈ ಸಾಲಿನ ಅಮರನಾಥ ಯಾತ್ರೆಯ (Amaranath Yatra) ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆ ಹಾಗೂ ಅವಶ್ಯ ದಾಖಲೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
2025ರ ಅಮರನಾಥ ಯಾತ್ರೆ ಜೂ.29 ರಿಂದ ಪ್ರಾರಂಭವಾಗಿ ಆ.19 ರವೆರೆಗೆ ನಡೆಯಲಿದ್ದು, ಇಂದಿನಿಂದ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಸಮುದ್ರಮಟ್ಟದಿಂದ 12,756 ಅಡಿ ಎತ್ತರದ ಗುಹೆಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಶಿವಲಿಂಗದ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಅಮರನಾಥ ಯಾತ್ರೆಗೆ ನೋಂದಣಿ ಹೇಗೆ?
ಯಾತ್ರಿಕರು ಶ್ರೀ ಅಮರನಾಥ ದೇವಾಲಯ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ದೇಶಾದ್ಯಂತ ಗೊತ್ತುಪಡಿಸಿದ 540 ಬ್ಯಾಂಕ್ ಶಾಖೆಗಳ ಮೂಲಕ ಆಫ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜಾತಿ ಗಣತಿ ದಂಗಲ್ – ಒಕ್ಕಲಿಗ ಶಾಸಕರ ಸಭೆ ಕರೆದ ಡಿಸಿಎಂ
ಆನ್‌ಲೈನ್ ನೋಂದಣಿ ಹಂತಗಳು:
1.https://jksasb.nic.in/ಗೆ ಭೇಟಿ ನೀಡಿ.
2. 2025ರ ಯಾತ್ರಾ ನೋಂದಣಿ ಮೇಲೆ ಕ್ಲಿಕ್ ಮಾಡಿ.
3. ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ:
– ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
– ಇದೇ ಏ.15ರ ನಂತರ ನೀಡಲಾದ ಕಡ್ಡಾಯ ಆರೋಗ್ಯ ಪ್ರಮಾಣಪತ್ರ
– ಗುರುತಿನ ಚೀಟಿ
4. ನೋಂದಣಿಯನ್ನು ಪೂರ್ಣಗೊಳಿಸಲು 220 ರೂ. ಪಾವತಿಸಬೇಕು.
ಆಫ್‌ಲೈನ್ ಮೋಡ್:
ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ಇತರ ಬ್ಯಾಂಕ್‌ಗಳ ನಿರ್ದಿಷ್ಟ ಶಾಖೆಗಳಲ್ಲಿ ಆಫ್‌ಲೈನ್ ನೋಂದಣಿಯನ್ನು ಮಾಡಿಕೊಳ್ಳಬಹುದು. ವೈಯಕ್ತಿಕವಾಗಿ ನೋಂದಾಯಿಸುವಾಗ ಮೂಲ ದಾಖಲೆಗಳು ಮತ್ತು ಕಡ್ಡಾಯವಾಗಿ ಆರೋಗ್ಯ ಪ್ರಮಾಣಪತ್ರವನ್ನು ಕೊಂಡೊಯ್ಯಬೇಕು. ಅಧಿಕೃತವಾಗಿ ವೈದ್ಯರು ಅಥವಾ ಸಂಸ್ಥೆಗಳು ನೀಡುವ ಕಡ್ಡಾಯ ಆರೋಗ್ಯ ಪ್ರಮಾಣಪತ್ರವಿಲ್ಲದೆ ಯಾರಿಗೂ ಯಾತ್ರೆಗೆ ತೆರಳಲು ಅವಕಾಶವಿರುವುದಿಲ್ಲ. ಈ ಪ್ರಮಾಣಪತ್ರವು ನೀವು ಎತ್ತರದ ಚಾರಣವನ್ನು ತಡೆದುಕೊಳ್ಳಲು ದೈಹಿಕವಾಗಿ ಸದೃಢರಾಗಿದ್ದೀರಿ ಎಂಬುವುದನ್ನು ಖಚಿತಪಡಿಸುತ್ತದೆ.
ಆರೋಗ್ಯ ಪ್ರಮಾಣಪತ್ರವು ಇದೇ ಏ.15ರ ನಂತರದ್ದಾಗಿರಬೇಕು. 13 ವರ್ಷಕ್ಕಿಂತ ಕಡಿಮೆ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಯಾತ್ರಿಕರಿಗೆ ಅವಕಾಶವಿಲ್ಲ.
ಯಾತ್ರಿಕರಿಗೆ ಅನುಸರಿಸಬೇಕಾದ ಕೆಲವು ನಿಯಮಗಳು:
ಕನಿಷ್ಠ ಒಂದು ತಿಂಗಳ ಮೊದಲು ದೈಹಿಕವಾಗಿ ಸದೃಢರಾಗಿರಲು ತರಬೇತಿಯನ್ನು ಪ್ರಾರಂಭಿಸಿ.
ಉಣ್ಣೆ ಬಟ್ಟೆ, ವಾಟರ್‌ಪ್ರೂಫ್ ಶೂ, ರೇನ್‌ಕೋಟ್ ಮತ್ತು ಟಾರ್ಚ್ ಅನ್ನು ಕೊಂಡೊಯ್ಯಿರಿ.
ಯಾತ್ರಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಅನುಸರಿಸಿ.
ಪ್ಲಾಸ್ಟಿಕ್ ಚೀಲಗಳನ್ನು ಕೊಂಡೊಯ್ಯುವುದು ಬೇಡ.
ಯಾತ್ರೆಯ ಸಮಯದಲ್ಲಿ ಧೂಮಪಾನ, ಮದ್ಯಪಾನ ಮಾಡುವುದನ್ನು ತಪ್ಪಿಸಿ.
ಕೆಟ್ಟ ಹವಾಮಾನದ ಸಮಯದಲ್ಲಿ ಯಾತ್ರೆಯನ್ನು ಕೈಗೊಳ್ಳಬೇಡಿ.
ಯಾತ್ರೆಯ ದಿನಾಂಕ
ಪ್ರಾರಂಭ: ಜೂನ್ 29, 2025
ಅಂತಿಮ ದಿನಾಂಕ: ಆಗಸ್ಟ್ 19, 2025
ಮಾರ್ಗಗಳು: ಪಹಲ್ಗಾಮ್ ಮಾರ್ಗ, ಬಾಲ್ಟಾಲ್ ಮಾರ್ಗ
ಅಮರನಾಥ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಲಭ್ಯವಿದ್ದು, ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಹೆಲಿಕಾಪ್ಟರ್ ಸೇವೆಗಾಗಿ ಕಳೆದ ವರ್ಷ ವಿಧ-ವಿಧವಾದ ದರ ನಿಗದಿ ಮಾಡಲಾಗಿತ್ತು. ಈ ಬಾರಿಯೂ ಕೂಡ ಒಂದೊಂದು ದರ ನಿಗದಿ ಮಾಡಲಾಗಿದ್ದು, ಶ್ರೀನಗರ ಏರ್‌ಪೋರ್ಟ್‌ನಿಂದ ಸ್ಟ್ಯಾಂಡರ್ಡ್ ಪ್ಯಾಕೇಜ್ 36,000 ರೂ. ಹಾಗೂ ಡಿಲಕ್ಸ್ ಪ್ಯಾಕೇಜ್ 41,000 ರೂ. ನಿಗದಿ ಮಾಡಲಾಗಿದೆ.ಇದನ್ನೂ ಓದಿ: ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ‘ಸೀತಾ ವಲ್ಲಭ’ ನಟಿ