ಧರ್ಮದ ಹೆಸರಿನಲ್ಲಿ ಅನ್ಯಾಯದ ವರ್ತನೆಯಲ್ಲಿ ತೊಡಗಬೇಡಿ: ಪ್ರತಿಭಟನಾಕಾರರಿಗೆ ಮಮತಾ ಬ್ಯಾನರ್ಜಿ ಮನವಿ

Public TV
2 Min Read
Mamata Banerjee 4

– ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ.ಬಂಗಾಳದಲ್ಲಿ ಪ್ರತಿಭಟನೆ, ಹಿಂಸಾಚಾರ

ಕೋಲ್ಕತ್ತಾ: ತಮ್ಮ ಸರ್ಕಾರವು ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Waqf Act) ರಾಜ್ಯದಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ. ಧರ್ಮದ ಹೆಸರಿನಲ್ಲಿ ಯಾವುದೇ ಅನ್ಯಾಯದ ವರ್ತನೆಯಲ್ಲಿ ತೊಡಗಬೇಡಿ ಎಂದು ಅವರು ಸಮುದಾಯಗಳಿಗೆ ಮನವಿ ಮಾಡಿದ್ದಾರೆ.

ವಕ್ಫ್ ಕಾಯ್ದೆ ವಿರುದ್ಧ ಮುರ್ಷಿದಾಬಾದ್ ಮತ್ತು ಇತರ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರದ ಬಳಿಕ ಅವರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲಾ ಧರ್ಮದ ಜನರಿಗೆ ನನ್ನ ಪ್ರಾಮಾಣಿಕ ಮನವಿ. ದಯವಿಟ್ಟು ಶಾಂತವಾಗಿರಿ, ಸಂಯಮದಿಂದಿರಿ. ಧರ್ಮದ ಹೆಸರಿನಲ್ಲಿ ಯಾವುದೇ ಅನ್ಯಾಯದ ನಡವಳಿಕೆಯಲ್ಲಿ ತೊಡಗಬೇಡಿ. ಪ್ರತಿಯೊಬ್ಬ ಮಾನವ ಜೀವವೂ ಅಮೂಲ್ಯ. ರಾಜಕೀಯಕ್ಕಾಗಿ ಗಲಭೆಗಳನ್ನು ಪ್ರಚೋದಿಸಬೇಡಿ. ಗಲಭೆಗಳನ್ನು ಪ್ರಚೋದಿಸುವವರು ಸಮಾಜಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಅವರು X ಪೋಸ್ಟ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳ| ಹಿಂಸಾಚಾರಕ್ಕೆ ತಿರುಗಿದ ವಕ್ಫ್‌ ಪ್ರತಿಭಟನೆ – ವಾಹನಗಳಿಗೆ ಬೆಂಕಿ, ರೈಲುಗಳ ಮೇಲೆ ಕಲ್ಲು

Violent Protests Erupt in Bengal Over Waqf Act Railway Tracks Blocked As Protests

ಅನೇಕರು ವಿರೋಧಿಸುವ ಕಾನೂನನ್ನು ನಾವು ಜಾರಿ ಮಾಡಿಲ್ಲ ಎನ್ನುವುದು ನೆನಪಿಡಬೇಕು. ಕಾನೂನನ್ನು ಕೇಂದ್ರ ಸರ್ಕಾರ ಮಾಡಿದೆ. ಆದ್ದರಿಂದ ನೀವು ಬಯಸುವ ಉತ್ತರವನ್ನು ಕೇಂದ್ರ ಸರ್ಕಾರದಿಂದ ಪಡೆಯಬೇಕು. ಈ ವಿಷಯದ ಬಗ್ಗೆ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಾವು ಈ ಕಾನೂನನ್ನು ಬೆಂಬಲಿಸುವುದಿಲ್ಲ. ಈ ಕಾನೂನನ್ನು ನಮ್ಮ ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ. ಹೀಗಾಗಿ, ಗಲಭೆ ಯಾವುದಕ್ಕಾಗಿ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಜನರು ನನ್ನ ಮನವೊಲಿಕೆಗೆ ಮಣಿಯಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಗಲಭೆಯನ್ನು ಪ್ರಚೋದಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಮತಾ ಎಚ್ಚರಿಸಿದರು. ಇದನ್ನೂ ಓದಿ: Mumbai Attack| ರಾಣಾ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ ನಿಗೂಢ ವ್ಯಕ್ತಿಗಳು!

Waqf

ವಕ್ಫ್ ತಿದ್ದುಪಡಿ ಕಾನೂನಿನ ವಿರುದ್ಧ ಮಾಲ್ಡಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣಗಳು ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಹಿಂಸಾಚಾರ ಭುಗಿಲೆದ್ದು, ಪೊಲೀಸ್ ವ್ಯಾನ್‌ಗಳು ಸೇರಿದಂತೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು, ರಸ್ತೆಗಳನ್ನು ನಿರ್ಬಂಧಿಸಲಾಯಿತು. ಘಟನೆಯಲ್ಲಿ ಕನಿಷ್ಠ 10 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ವಾಹನ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.

ಶನಿವಾರ ಬೆಳಿಗ್ಗೆಯಿಂದಲೇ ಮುರ್ಷಿದಾಬಾದ್‌ನ ಜಂಗಿಪುರ ಮತ್ತು ಸುಟಿ ಪ್ರದೇಶಗಳಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಘಟನಾ ಸ್ಥಳದಿಂದ ಬಂದ ದೃಶ್ಯಗಳಲ್ಲಿ ಹಲವಾರು ವಾಹನಗಳು ಸುಟ್ಟು ಹಾನಿಗೊಳಗಾಗಿರುವುದು ಕಂಡುಬಂದಿದೆ. ಪೊಲೀಸರ ಪ್ರಕಾರ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ 110 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಬಂಧಿಸಲಾಗಿದೆ. ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದ ಮಾಲ್ಡಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿಲ್ಲ. ಇದನ್ನೂ ಓದಿ: ಶಿರೋಮಣಿ ಅಕಾಲಿ ದಳ ಅಧ್ಯಕ್ಷರಾಗಿ ಸುಖಬೀರ್ ಸಿಂಗ್ ಬಾದಲ್ ಮರು ಆಯ್ಕೆ

Share This Article