ಮಂಡ್ಯ: ಅಂಬುಲೆನ್ಸ್ ಪಲ್ಟಿ ಹೊಡೆದು ಇಬ್ಬರು ಗಾಯಗೊಂಡಿರುವ ಘಟನೆ ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಆಂಬ್ಯುಲೆನ್ಸ್ ಚಾಲಕ ರವಿ ಮತ್ತು ಸಹಾಯಕ ಸುರೇಶ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಮಂಗಳವಾರ ರಾತ್ರಿ ನಾಗಮಂಗಲದಿಂದ ರೋಗಿಯೊಬ್ರನ್ನ ಕರೆದುಕೊಂಡು ಬಂದು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ವಾಪಾಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಾತ್ರಿ 2:30 ಸುಮಾರಿಗೆ ಬಸರಾಳು ಬಳಿ ಹೋಗುತ್ತಿದ್ದ ವೇಳೆ ಕಾಡುಹಂದಿ ಅಡ್ಡ ಬಂದಿದೆ. ಈ ಕಾಡುಹಂದಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಆಂಬ್ಯುಲೆನ್ಸ್ ಪಲ್ಟಿ ಹೊಡೆದಿದೆ.
ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ವಾಹನದೊಳಗೆ ಸಿಲುಕಿ ಒದ್ದಾಡುತ್ತಿದ್ದ ಇಬರನ್ನು ನೈಟ್ ಬೀಟ್ ಪೊಲೀಸರು ರಕ್ಷಣೆ ಮಾಡಿ ಬಸರಾಳು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.