ನಕಲಿ ಪಾಸ್‍ಪೋರ್ಟ್ ಕೇಸ್: ಚೋಟಾ ರಾಜನ್‍ಗೆ 7ವರ್ಷ ಜೈಲು ಶಿಕ್ಷೆ

Public TV
2 Min Read
Chhota Rajan

ನವದೆಹಲಿ: ನಕಲಿ ಪಾಸ್‍ಪೋರ್ಟ್  ಪ್ರಕರಣದ ಅಪರಾಧಿ ಭೂಗತ ಪಾತಕಿ 55 ವರ್ಷದ ರಾಜೇಂದ್ರ ಸಹದೇವ್ ನಿಖಲ್ಜೆ ಅಲಿಯಾಸ್ ಚೋಟಾ ರಾಜನ್‍ಗೆ ಸಿಬಿಐ ವಿಶೇಷ ಕೋರ್ಟ್ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸೋಮವಾರ ತೀರ್ಪು ನೀಡಿದ್ದ ನ್ಯಾಯಾಧೀಶ ವೀರೇಂದ್ರ ಕುಮಾರ್ ಗೋಯಲ್ ಇಂದು ರಾಜನ್ ಸೇರಿ ಒಟ್ಟು ನಾಲ್ವರು ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

ಏನಿದು ಪ್ರಕರಣ?
3 ಮಂದಿ ಸರ್ಕಾರಿ ಅಧಿಕಾರಿಗಳ ನೆರವಿನಿಂದ ಮೋಹನ್ ಕುಮಾರ್ ಎಂಬ ಹೆಸರಿನ ನಕಲಿ ಪಾಸ್‍ಪೋರ್ಟ್ ಅನ್ನು ಹೊಂದಿದ್ದ ಆರೋಪ ಚೋಟಾ ರಾಜನ್ ಮೇಲಿತ್ತು. ಈ ಕೇಸ್ ಬಗ್ಗೆ ಸಿಬಿಐ ತಂಡ ತನಿಖೆ ನಡೆಸಿ ಚೋಟಾ ಹಾಗೂ ಮೂವರು ನಿವೃತ್ತ ಸರ್ಕಾರಿ ಅಧಿಕಾರಿಗಳ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದರು. 2016ರ ಜೂನ್ 8ರಂದು ಈ ಸಂಬಂಧ ಪಾಸ್‍ಪೋರ್ಟ್ ಅಧಿಕಾರಿಗಳಾದ ಜಯಶ್ರೀ ದತ್ತಾತ್ರೇಯ ರಹಾಟೆ, ದೀಪಕ್ ನಟವರ್‍ಲಾಲ್ ಷಹಾ ಹಾಗೂ ಲಲಿತಾ ಲಕ್ಷ್ಮಣ್ ಮತ್ತು ಚೋಟಾರಾಜನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪಾಸ್‍ಪೋರ್ಟ್ ಕಾಯಿದೆ ಅನ್ವಯ ಮೌಲ್ಯಯುತ ಭದ್ರತಾ ದಾಖಲೆಗಳ ನಕಲು, ಕ್ರಿಮಿನಲ್ ಪ್ರಕರಣ ಹಾಗೂ ಪಿತೂರಿ ಪ್ರಕರಣವೆಂದು ಪರಿಗಣಿಸಿ ಆರೋಪಿಸಲಾಗಿತ್ತು.

ಚೋಟಾರಾಜನ್‌ಗೆ ಮೋಹನ್‌ಕುಮಾರ್‌ ಎಂಬ ಹೆಸರಿನಲ್ಲಿ ಜಯಶ್ರೀ, ಷಹಾ ಹಾಗೂ ಲಕ್ಷ್ಮಣ್ 1998–99ರಲ್ಲಿ ಬೆಂಗಳೂರಿನಲ್ಲಿ ಪಾಸ್‍ಪೋರ್ಟ್ ನೀಡಿದ್ದಾರೆ ಎಂದು ವಿರುದ್ಧ ಸಿಬಿಐ ತನ್ನ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು.

ರಾಜನ್ ಬೆಂಗಳೂರಿನ ಪ್ರಾದೇಶಿಕ ಪಾಸ್‍ಪೋರ್ಟ್ ಕಚೇರಿಯಿಂದ ಮೋಹನ್ ಕುಮಾರ್ ಹೆಸರಿನಲ್ಲಿ ಪಾಸ್‍ಪೋರ್ಟ್ ಪಡೆದಿದ್ದರೆ, ಇನ್ನೊಂದು ಪಾಸ್‍ಪೋರ್ಟನ್ನು ಸಿಡ್ನಿಯ ಭಾರತೀಯ ದೂತಾವಾಸ ಕೇಂದ್ರದಿಂದ ಪಡೆದುಕೊಂಡಿದ್ದ.

ಚೋಟಾ ರಾಜನ್ ವಿರುದ್ಧ ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ ಹಾಗೂ ಗುಜರಾತ್ ರಾಜ್ಯಗಳು ಸೇರಿದಂತೆ ಸುಮಾರು 70 ಪ್ರಕರಣಗಳನ್ನು ಸಿಬಿಐ ದಾಖಲಿಸಿತ್ತು. ಪ್ರಸ್ತುತ ಈಗ ಚೋಟಾ ರಾಜನ್ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಮಂಡ್ಯ ಪಾಸ್‍ಪೋರ್ಟ್: ಚೋಟಾ ರಾಜನ್ ತನಿಖಾ ಸಂಸ್ಥೆಗಳ ಕಣ್ತಪ್ಪಿಸುವ ಉದ್ದೇಶದಿಂದ ನಕಲಿ ಪಾಸ್‍ಪೋರ್ಟ್ ಗಳನ್ನು ಬಳಸಿ ವ್ಯವಹಾರ ನಡೆಸುತ್ತಿದ್ದ. ಇಂಡೋನೇಷಿಯಾದಲ್ಲಿ ಬಂಧನದ ವೇಳೆ ಕರ್ನಾಟಕದ ಮಂಡ್ಯ ಜಿಲ್ಲೆಯ ಹೆಸರುಳ್ಳ ನಕಲಿ ಪಾಸ್‍ಪೋರ್ಟ್ ಈತನ ಬಳಿಯಿತ್ತು. ಆಸ್ಟ್ರೇಲಿಯಾದ ಸಿಡ್ನಿಯಿಂದ ಇಂಡೋನೇಷಿಯಾಗೆ ಚೋಟಾ ರಾಜನ್ ತೆರಳುತ್ತಿರುವ ಬಗ್ಗೆ ತನಿಖಾ ಸಂಸ್ಥೆಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಆದರೆ ಪಾಸ್ ಪೋರ್ಟ್ ಪರಿಶೀಲನೆ ವೇಳೆ ಮೋಹನ್ ಕುಮಾರ್ ಎಂಬ ಹೆಸರಿನ ವ್ಯಕ್ತಿಯನ್ನು ಬಾಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದಾಗಿ ಆರಂಭದಲ್ಲಿ ತನಿಖಾ ಸಂಸ್ಥೆಗಳಲ್ಲಿ ಗೊಂದಲ ಹುಟ್ಟಿಸಿತ್ತು. ಅಂತಿಮವಾಗಿ 2015ರ ಅಕ್ಟೋಬರ್‍ನಲ್ಲಿ ಚೋಟಾ ರಾಜನನ್ನು ಬಾಲಿ ಪೊಲೀಸರು ಬಂಧಿಸಿದರು.

Share This Article
Leave a Comment

Leave a Reply

Your email address will not be published. Required fields are marked *