ಕಾರವಾರ: ದೇವರುಗಳಿಗೆ ಹೂವು, ಹಣ್ಣು ಕಾಯಿ ಅರ್ಪಿಸೋದು ಸಾಮಾನ್ಯ. ಆದರೆ, ಇಲ್ಲೊಂದು ದೇವರಿಗೆ ಬೀಡಿ, ಸಿಗರೇಟು ಹಾಗೂ ಹೆಂಡವೇ ನೈವೇದ್ಯ ಅರ್ಪಣೆ ಮಾಡುತ್ತಾರೆ. ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಎನ್ನದೇ ಎಲ್ಲಾ ಜನಾಂಗದ ಭಕ್ತರು ಈ ದೇವರ ದರ್ಶನ ಮಾಡುತ್ತಾರೆ. ಸರ್ವ ಧರ್ಮದ ಸಮನ್ವಯ ಕಾಪಾಡುವ ಈ ವಿಶೇಷ ದೇವರು ಇರೋದಾದ್ರೂ ಎಲ್ಲಿ ಅಂತೀರಾ ಈ ಸ್ಟೋರಿ ಓದಿ.
ಈ ವಿಶೇಷ ದೇವರು ಇರೋದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದ (Karwar) ಕಾಳಿ ಸಂಗಮದಲ್ಲಿ. ಈ ದೇವರ ಹೆಸರು ಕಾಪ್ರಿ ದೇವ (Capri Fair) ಎಂದು. ದೇವರಿಗೆ ಹರಕೆ ರೂಪದಲ್ಲಿ ಕೋಳಿ, ಸಿಗರೇಟು, ಮದ್ಯದ ಬಾಟಲಿಗಳನ್ನು ಭಕ್ತಿಯಿಂದ ದೇವರಿಗೆ ಅರ್ಪಿಸಿ ಇಲ್ಲಿ ಭಕ್ತರು ಪೂಜೆ ಮಾಡುತ್ತಾರೆ.
ಮದ್ಯ ಪ್ರಿಯ ದೈವ ಎಂದೇ ಪ್ರಸಿದ್ಧವಾಗಿರುವ ಈ ದೇವರು ಸರ್ವ ಜನಾಂಗದ ಆರಾಧ್ಯ ದೈವ. ಈ ದೇವಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದ್ದು, ಬ್ರಿಟೀಷರ ಕಾಲದಲ್ಲಿ ಗುಲಾಮನಾಗಿ ಬಂದ ಕಾಪ್ರಿ ಎಂಬ ವಿದೇಶಿ ಪ್ರಜೆ ಕಾರವಾರದ ಕಾಳಿ ನದಿ ಸಂಗಮದಲ್ಲಿ ನೆಲೆ ನಿಲ್ಲುತ್ತಾನೆ. ಮೂಲತ ಕ್ರಿಶ್ಚಿಯನ್ ಆಗಿದ್ದರೂ, ಎಲ್ಲಾ ಧರ್ಮವನ್ನು ಈತ ಮೈಗೂಡಿಸಿಕೊಂಡಿದ್ದನಂತೆ. ಕಾಳಿ ನದಿ ಸಂಗಮದಲ್ಲಿ ಈತ ಬಡವರಿಗೆ ಸಹಾಯ ಮಾಡುತ್ತಾ, ಯೋಗ ಧ್ಯಾನವನ್ನು ಮಾಡುತ್ತಾ ಇದ್ದನಂತೆ. ಇದಲ್ಲದೇ ಈತ ಮದ್ಯ ಕುಡಿಯುವ ಜೊತೆಗೆ, ಸಿಗರೇಟು ಸಹ ಸೇದುತಿದ್ದ. ಇಷ್ಟಾರ್ಥ ನೆರವೇರಿಸುವ ಈತನನ್ನು ಕಂಡು ಆಶಿರ್ವಾದ ಬೇಡುವ ಜನ ಮದ್ಯ, ಸಿಗರೇಟು ನೀಡುತಿದ್ದರು.
ಒಂದು ದಿನ ಈತ ಮೃತಪಟ್ಟಿದ್ದು, ನಂತರ ಇದೇ ಭಾಗದ ಓರ್ವನ ಕನಸಿನಲ್ಲಿ ಬಂದು ತನಗೊಂದು ದೇವಾಲಯ ಕಟ್ಟಬೇಕು. ಅಲ್ಲಿ ನಾನು ನೆಲಸುತ್ತೇನೆ ಎಂದನಂತೆ. ಬಳಿಕ ಆತ ಇದ್ದ ಕಾಳಿ ಸಂಗಮದಲ್ಲೇ ದೇವಾಲಯ ನಿರ್ಮಾಣ ಮಾಡಲಾಗಿದೆ. ತೊಂದರೆ ಎಂದು ಹರಕೆ ಕಟ್ಟಿಕೊಳ್ಳುವ ಜನರು ಇಲ್ಲಿಗೆ ಬಂದು ಮದ್ಯ, ಸಿಗರೇಟು, ಕೋಳಿ ಹರಕೆ ಕಟ್ಟಿಕೊಂಡು ಹರಕೆ ತೀರಿದ ನಂತರ ಕಾಪ್ರಿ ದೇವನಿಗೆ ಸಮರ್ಪಿಸುತ್ತಾರೆ. ಈತ ಕ್ರಿಶ್ಚಿಯನ್ ಆದ್ದರಿಂದ ದೇವಸ್ಥಾನದ ಮುಂಭಾಗ ಕ್ಯಾಂಡಲ್ ಬೆಳಗಿಸುತ್ತಾರೆ. ಇದಲ್ಲದೇ ಕೋಳಿ, ಕುರಿಯನ್ನು ಸಹ ನೀಡುತ್ತಾರೆ.
ಗೋವಾ, ಮಹಾರಾಷ್ಟ್ರದಿಂದ ಈ ದೇವರ ದರ್ಶನ ಪಡೆಯಲು ಇಲ್ಲಿಗೆ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಎರಡು ದಿನ ನಡೆಯುವ ಜಾತ್ರೆಗೆ ಭಕ್ತರು ಬಂದು ಹರಕೆ ತೀರಿಸುತ್ತಾರೆ. ಪುಷ್ಟ ಎಂಬ ಭಕ್ತೆಯೊಬ್ಬರು ನನಗೆ ಕ್ಯಾನ್ಸರ್ ಇತ್ತು, ಗುಣಮುಖವಾಗಲು ಈ ದೇವರಲ್ಲಿ ಹರಕೆ ಕಟ್ಟಿಕೊಂಡೆ ನಂತರ ಗುಣವಾಯ್ತು ಎನ್ನುತ್ತಾರೆ. ಇದಲ್ಲದೇ ಈ ದೈವದಿಂದ ಒಳಿತು ಕಂಡ ಭಕ್ತರು ಹಲವರಿದ್ದು ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಬಂದು ಪೂಜೆಯಲ್ಲಿ ಭಾಗಿಯಾಗುತ್ತಾರೆ.
ಗುಲಾಮನಾಗಿ ಭಾರತಕ್ಕೆ ಬಂದ ಈತ ತನ್ನ ಒಳ್ಳೆತನ, ಸೇವಾ ಮನೋಭಾವದಿಂದ ಜನರ ಮನಸ್ಸು ಗೆದ್ದು ಮೃತನಾದ ನಂತರ ದೈವದ ಸ್ಥಾನಕ್ಕೆ ಏರಿದ್ದಾನೆ.