18 ಶಾಸಕರ ಅಮಾನತು ಆದೇಶ ಹಿಂಪಡೆಯಲಿ- ಸರ್ಕಾರದ ಭಂಡತನದ ವಿರುದ್ಧ ಜಿಲ್ಲಾವಾರು ಹೋರಾಟ: ವಿಜಯೇಂದ್ರ

Public TV
3 Min Read
vijayendra press meet

ಬೆಂಗಳೂರು: ಸ್ಪೀಕರ್ ಅವರು ನಮ್ಮ ಶಾಸಕರನ್ನು ಅಮಾನತು ಮಾಡಿ ರಾಜ್ಯ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ಇದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. 18 ಶಾಸಕರನ್ನು ಅಮಾನತು ಮಾಡುವ ಆದೇಶವನ್ನು ಸ್ಪೀಕರ್ ಅವರು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸುವ ಕುರಿತ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರ, ಅಸಾಂವಿಧಾನಾತ್ಮಕ, ಏಕಪಕ್ಷೀಯ ಹಾಗೂ ಮನಸೋಇಚ್ಛೆಯಿಂದ ತೆಗೆದುಕೊಂಡ ತೀರ್ಮಾನ ಎಂದು ಆಕ್ಷೇಪಿಸಿದರು. ಸ್ಪೀಕರ್ ಅವರು ಶಾಸಕರು ಮಾತ್ರವಲ್ಲ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಖಂಡಿಸಿದರು.

ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಮೀಸಲಾತಿ ಕೊಟ್ಟ ಸರ್ಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಪ್ರಕಟಿಸಿದರು. ಸದನದ ಒಳಗೆ ಮತ್ತು ಹೊರಗೆ ಇದರ ವಿರುದ್ಧ ಹೋರಾಟ ನಡೆಸಿ ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದು ವಿಜಯೇಂದ್ರ ಘೋಷಿಸಿದರು.

ಹಿಂದೂಗಳಲ್ಲಿ ಹಾಗಿದ್ದರೆ ಬಡವರೇ ಇಲ್ಲವೇ..
ನಮ್ಮ ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಕೊಡಲು ಅವಕಾಶವಿಲ್ಲ. ಇದರ ನಡುವೆ ಮೀಸಲಾತಿ, ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ 20 ಲಕ್ಷ ಬದಲು 30 ಲಕ್ಷ ಕೊಡುವುದಾಗಿ ತಿಳಿಸುವುದು, ಮುಸ್ಲಿಂ ಹೆಣ್ಮಕ್ಕಳಿಗೆ ಆತ್ಮರಕ್ಷಣೆ ಕಲೆಗೆ ಸಂಬಂಧಿಸಿ ಬಜೆಟ್‍ನಲ್ಲಿ ಹಣ ಮೀಸಲಿಟ್ಟಿರುವುದು ಸರಿಯೇ ಎಂದು ವಿಜಯೇಂದ್ರ ಪ್ರಶ್ನಿಸಿದರು.

ಹಿಂದೂಗಳಲ್ಲಿ ಹಾಗಿದ್ದರೆ ಬಡವರೇ ಇಲ್ಲವೇ ಎಂದು ಕೇಳಿದರು. ಅವರಿಗೆ ಹೊರದೇಶಕ್ಕೆ ಉನ್ನತ ಶಿಕ್ಷಣಕ್ಕೆ ಹೋಗುವ ಕನಸುಗಳಿಲ್ಲವೇ? ರಾಜ್ಯ-ದೇಶದಲ್ಲಿ ಹಿಂದೂ ಹೆಣ್ಮಕ್ಕಳು ಲವ್ ಜಿಹಾದ್‍ಗೆ ಬಲಿ ಆಗುತ್ತಿದ್ದಾರೆ. ಕಾಮಗಾರಿಯಲ್ಲಿ ಮುಸ್ಲಿಂ ಮೀಸಲಾತಿ ಅಸಾಂವಿಧಾನಿಕ ಎಂದು ಟೀಕಿಸಿದರು. ಧರ್ಮ ಆಧಾರಿತ ಮೀಸಲಾತಿ ಕೊಡಲಾಗದು ಎಂದು ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ. ಇದನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ವಿವರಿಸಿದರು.

ಈ ಸಂಬಂಧ ಸುಪ್ರೀಂ ಕೋರ್ಟ್ ಸೇರಿ ವಿವಿಧ ಕೋರ್ಟ್‍ಗಳ ತೀರ್ಪನ್ನೂ ಉಲ್ಲೇಖಿಸಿದರು. ಈ ತೀರ್ಪುಗಳು ನಮ್ಮ ಅನುಭವಿ ಮುಖ್ಯಮಂತ್ರಿಗಳಿಗೆ ತಿಳಿದಿದೆ. ಇದು ಸಂವಿಧಾನ ವಿರೋಧಿ ಎಂಬುದು ಗೊತ್ತಿದ್ದರೂ ನಾಡಿನ ಹಿಂದೂಗಳ ಮೇಲೆ ದೌರ್ಜನ್ಯ-ಅವಮಾನ ಮಾಡುವ ನಿರ್ಧಾರ ಖಂಡಿತ ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.

ಹೋರಾಟದ ಕುರಿತು ಪಕ್ಷದ ಮುಖಂಡರ ಜೊತೆ ಚರ್ಚಿಸಿದ್ದೇವೆ. ಅತಿ ಶೀಘ್ರದಲ್ಲಿ ಹೋರಾಟದ ರೂಪುರೇಷೆಯನ್ನು ಪ್ರಕಟಿಸುತ್ತೇವೆ. ಸದನದಲ್ಲಿ ಹಗಲು-ರಾತ್ರಿ ಧರಣಿ ಬಗ್ಗೆ ಚರ್ಚೆ ನಡೆದಿದೆ. ಜಿಲ್ಲೆಗಳಲ್ಲಿ ಸೋಮವಾರದಿಂದ ಹೋರಾಟ ನಡೆಯಲಿದೆ. ರಾಜ್ಯದಲ್ಲಿ ಜನಜಾಗೃತಿ ಮೂಡಿಸುವ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸ್ಪೀಕರ್ ಅವರು ಯಾವ ಕಾರಣಕ್ಕಾಗಿ ನಮ್ಮ 18 ಶಾಸಕರನ್ನು ಅಮಾನತುಗೊಳಿಸುವ ನಿರ್ಧಾರ ಘೋಷಿಸಿದ್ದಾರೆ? ಎಂದ ಅವರು, ಹಣಕಾಸಿನ ಸಚಿವರೂ ಆದ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರವು ಈ ರಾಜ್ಯದಲ್ಲಿರುವ ಮುಸಲ್ಮಾನರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ.4 ಮೀಸಲಾತಿ ನೀಡುವ ತೀರ್ಮಾನ ಕೈಗೊಂಡಿದೆ. ಬಜೆಟ್‍ನಲ್ಲೂ ಅಲ್ಪಸಂಖ್ಯಾತರ ಓಲೈಕೆ- ಹಿಂದೂಗಳನ್ನು ಅವಮಾನಿಸುವ ಅನೇಕ ಘೋಷಣೆ ಮಾಡಿದ್ದಾರೆ. ಹಿಂದೂ ವಿರೋಧಿ ನೀತಿಗಳನ್ನು ಸಿದ್ದರಾಮಯ್ಯನವರು ಅನುಸರಿಸುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ನಿರಂತರ ಹೋರಾಟ ಮಾಡುತ್ತ ಬಂದಿದ್ದೇವೆ ಎಂದರು.

18 ಶಾಸಕರು ಹಾಗಿದ್ದರೆ ಭಯೋತ್ಪಾದಕರೇ?
ಸ್ಪೀಕರ್ ಅವರು ನಮ್ಮ ರಕ್ಷಣೆಗೆ ಬರಬೇಕಿತ್ತು. 6 ತಿಂಗಳು 18 ಜನಪ್ರತಿನಿಧಿಗಳನ್ನು ಅಮಾನತು ಮಾಡುವ ಸ್ಪೀಕರ್ ಅವರ ನಡೆಯು ಸರಿಯಲ್ಲ. ಅಮಾನತಾದವರು ವಿಧಾನಸಭಾ ಲಾಬಿ, ಸಭಾಂಗಣ ಪ್ರವೇಶಿಸುವಂತಿಲ್ಲ ಎಂದಿದ್ದಾರೆ. ಹಾಗಿದ್ದರೆ ಅವರು ಭಯೋತ್ಪಾದಕರೇ, ನಕ್ಸಲೈಟರೇ ಎಂದು ವಿಜಯೇಂದ್ರ ಪ್ರಶ್ನಿಸಿದರು. ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಿದ್ದಾರೆ. ಇದು ಶಾಸಕರ ಹಕ್ಕು ಮೊಟಕುಗೊಳಿಸುವ, ಹಕ್ಕು ಕಿತ್ತುಕೊಳ್ಳುವ ಕಾರ್ಯ ಎಂದು ಆಕ್ಷೇಪಿಸಿದರು.

ಕ್ಷೇತ್ರಾಭಿವೃದ್ಧಿಗೆ ಎರಡು ಕಾಸು ಬಿಡುಗಡೆ ಮಾಡುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ. ಸ್ಪೀಕರ್ ಆದೇಶ ಅಸಾಂವಿಧಾನಾತ್ಮಕ, ಮನಸೋಇಚ್ಛೆಯದು ಎಂದು ಆರೋಪಿಸಿದರು. ನಿನ್ನೆ ನಮ್ಮ ಶಾಸಕರು ಬಾವಿಗಿಳಿದು ಹೋರಾಟ ನಡೆಸುತ್ತಿರುವಾಗ ಏಕಾಏಕಿಯಾಗಿ ಅಮಾನತು ಮಾಡಿದ್ದು, ಸಂಪೂರ್ಣ ಕಾನೂನುಬಾಹಿರ ಎಂದು ಟೀಕಿಸಿದರು. ಸಂವಿಧಾನದ ಬಗ್ಗೆ ಪಾಠ ಹೇಳುವ, ಪದೇಪದೇ ಡಾ. ಅಂಬೇಡ್ಕರರ ಹೆಸರು ದುರುಪಯೋಗ ಪಡಿಸಿಕೊಳ್ಳುವ ಮುಖ್ಯಮಂತ್ರಿಗಳು, ಕಾಂಗ್ರೆಸ್ ಮುಖಂಡರು ಬಜೆಟ್‍ನಲ್ಲಿ ತೆಗೆದುಕೊಂಡ ನಿರ್ಧಾರಗಳು ಕೇವಲ ಅಲ್ಪಸಂಖ್ಯಾತರ ಓಲೈಕೆಯಷ್ಟೇ ಅಲ್ಲ. ಹಿಂದೂಗಳನ್ನು ಅಪಮಾನಿಸುವ ನಿರ್ಧಾರ ಎಂದು ದೂರಿದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಹನಿಟ್ರ್ಯಾಪ್ ಕುರಿತ ಸಚಿವರ ಹೇಳಿಕೆ-ಮುಸ್ಲಿಮರಿಗೆ ಸಂವಿಧಾನವಿರೋಧಿಯಾಗಿ ಮೀಸಲಾತಿ ವಿಚಾರ ಮುಂದಿಟ್ಟು ನಾವು ಹೋರಾಟ ಮಾಡಿದ್ದೇವೆ. ಸ್ಪೀಕರ್ ನಡವಳಿಕೆ ತುಘಲಕ್ ದರ್ಬಾರ್‌ನಂತಿದೆ. ಹಿಟ್ಲರ್ ಸಂಸ್ಕೃತಿಯನ್ನು ನಾವು ನೋಡುತ್ತಿದ್ದೇವೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರು ಬೂಟುಗಾಲು ಹಾಕಿ ಬಾಗಿಲು ಒದ್ದು ಹಾಕಿದ್ದು, ಜಮೀರ್ ಅಹ್ಮದ್ ಸ್ಪೀಕರ್ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆಸಿದ್ದನ್ನು ಸದನದಲ್ಲಿ ನೋಡಿದ್ದೇವೆ ಎಂದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ತಿನಲ್ಲಿ ಪಕ್ಷಗಳ ಬಲ, ಮೇಲ್ಮನೆಯಲ್ಲಿ ಹೋರಾಟ ಕುರಿತು ಮಾಹಿತಿ ನೀಡಿದರು. ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Share This Article