– ಸಂಪೂರ್ಣ ಬೆತ್ತಲಾಗಿ ಹೋಗೋರಿಗೆ ಮಾತ್ರ ಸಿಗುತ್ತೆ ಎಂಟ್ರಿ
ಬೀಚ್‌ಗಳು ನ್ಯೂ ಜನರೇಷನ್‌ನ ಫೇವರಿಟ್. ಪಡ್ಡೆಗಳಿಗಂತೂ ಹಾಟ್ ಸ್ಪಾಟ್. ಹದವಾಗಿ ನೆತ್ತಿ ಸುಡುವ ಬಿಸಿಲಲ್ಲಿ, ಮಾಗದ ಮನಸಿನ ಏರಿಳಿತದ ಅಲೆಗಳ ಅನುಭವದಲಿ, ಅರ್ಧಂಬರ್ಧ ತೊಟ್ಟ ಬಟ್ಟೆ, ಕಣ್ಣಿಗೆ ಕೂಲಿಂಗ್ಲಾಸ್ ಹಾಕ್ಕೊಂಡು ಕಡಲ ತೀರದ ಸುಂದರ ನೋಟ ಕಣ್ತುಂಬಿಕೊಳ್ಳುವುದು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಬೆಚ್ಚನೆಯ ಮುದ ನೀಡುವ ನುಣುಪಾದ ಮರಳಿಗೆ ಮೈ ತಾಕಿಸಿ ಹೊರಳಾಡುತ್ತ, ಹೀಗೆ ಬಂದು ಹಾಗೆ ಹೋಗುವ ತಂಪನೆಯ ಉಪ್ಪಿನಲೆಗಳೊಂದಿಗೆ ಆಟವಾಡುತ್ತ ಕಾಲ ಕಳೆಯೋದರ ಮಜವೇ ಬೇರೆ. ಬೀಚ್‌ನಲ್ಲಿ ಬಿಕಿನಿ ತೊಟ್ಟು ಸುಳಿದಾಡುವ ಬ್ಯೂಟಿಗಳ ನೋಡಿದಾಗ ಪಡ್ಡೆಗಳಲ್ಲಿ ಅಡಗಿದ ಪೋಲಿತನ ಅಲೆಯಂತೆ ಆಗಾಗ ಉಕ್ಕಿ ಮರೆಯಾಗುತ್ತೆ. ಕಡಲತೀರ ಅನ್ನೋದೆ ಒಂಥರಾ ಸ್ಪೆಷಲ್.
ಮೇಲೆ ಹೇಳಿದ್ದು ಒಂದು ವರ್ಷನ್. ಇನ್ನೊಂದು ವರ್ಷನ್ ಕೇಳಿದ್ರೆ ಎಂಥವರೂ ಗಲ್ಲಕ್ಕೆ ಬೆರಳಿಟ್ಟು ‘ಹೌದಾ!’ ಅಂತ ಅಚ್ಚರಿ ವ್ಯಕ್ತಪಡಿಸೋದು ಗ್ಯಾರಂಟಿ. ಅದೇನು ಅಂತೀರಾ? ತುಂಡುಡುಗೆ, ಬಿಕಿನಿ ತೊಟ್ಟು ಬೀಚ್‌ಗಳಲ್ಲಿ ಓಡಾಡುವವರನ್ನು ನೋಡರ‍್ತೀರಾ. ಆದರೆ, ಬಟ್ಟೆಯೇ ಇಲ್ಲದೇ ಬೆತ್ತಲಾಗಿ ಜನರು ಓಡಾಡುವ ಬೀಚ್ ಬಗ್ಗೆ ಕೇಳಿದ್ದೀರಾ? ಈ ಬೀಚ್‌ಗೆ ಎಂಟ್ರಿ ಕೊಟ್ಟರೆ, ‘ನಿಮ್ಮ ಬಟ್ಟೆ ಬಿಚ್ಚಿಡಿ ಪ್ಲೀಸ್..’ ಎಂಬ ಸೂಚನಾ ಫಲಕಗಳು ಕಾಣಿಸುತ್ತವೆ. ಬೀಚ್‌ಗೆ ಬರುವವರು ಬಟ್ಟೆಯಿಲ್ಲದೇ ಸಂಪೂರ್ಣ ಬೆತ್ತಲಾಗಿಯೇ ಹೋಗಬೇಕು. ಇದು ಉತ್ಪ್ರೇಕ್ಷೆಯಲ್ಲ.
ಯಾವುದು ಆ ಬೀಚ್? ಎಲ್ಲಿದೆ? ಯಾಕೆ ಅಲ್ಲಿ ಇಂಥ ನಿಯಮ? ಇದರ ಉದ್ದೇಶ ಏನು? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಆ ಬಗ್ಗೆ ಇಲ್ಲಿದೆ ವಿವರ.
ಜರ್ಮನ್‌ನಲ್ಲಿ ನ್ಯೂಡಿಸ್ಟ್ ಬೀಚ್
ಜರ್ಮನಿಯ (Germany) ಪ್ರಸಿದ್ಧ ಬಾಲ್ಟಿಕ್ ಕರಾವಳಿಗೆ ಪ್ರವಾಸ ಹೋಗಲು ಯೋಜಿಸಿರುವವರು, ಪ್ರಕೃತಿವಾದಿ ಜೀವನಶೈಲಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸಿದ್ಧರಾಗಿರಿ. ಏಕೆಂದರೆ ಇಲ್ಲಿ ಗೊತ್ತುಪಡಿಸಿದ ನಗ್ನ ಪ್ರದೇಶಗಳಲ್ಲಿ ಬಟ್ಟೆಗಳನ್ನು ಧರಿಸುವಂತಿಲ್ಲ. ಕರಾವಳಿ ನಗರವಾದ ರೋಸ್ಟಾಕ್‌ನಲ್ಲಿ ಹೊಸ ನಿಯಮವೊಂದನ್ನು ಜಾರಿ ಮಾಡಲಾಗಿದೆ. ಇಲ್ಲಿ ಬಟ್ಟೆ ಧರಿಸಿ ಓಡಾಡುವವರನ್ನು ಬೀಚ್ ವಾರ್ಡನ್‌ಗಳು ಹೊರಹಾಕುತ್ತಾರೆ.
ಇಲ್ಲಿ ಬಟ್ಟೆ ಬಿಚ್ಚಿ ಪ್ಲೀಸ್..
ಪ್ರಕೃತಿ ಅನ್ನೋದೆ ಬಯಲು, ಬೆತ್ತಲು ಎನ್ನುವುದು ಪರಿಸರವಾದಿಗಳ ಕಲ್ಪನೆ. ಅವರ ಚಿಂತನೆಗಳಿಗೆ ಗೌರವ ಕೊಡಬೇಕೆಂಬ ಉದ್ದೇಶದಿಂದ ಜರ್ಮನ್‌ನಲ್ಲಿ ನಗ್ನ ಕಡಲತೀರಗಳಿವೆ. ಇಲ್ಲಿ ಸೆನ್ಸಾರ್‌ಗಳಿಲ್ಲ. ಇಲ್ಲಿ ಸಂಕೋಚವನ್ನು ಗಾಳಿಗೆ ತೂರಿ, ಪ್ರಕೃತಿ ಜೊತೆ ಬಾಂಧವ್ಯ ಬೆಸೆಯಬೇಕು. ನಗ್ನರಾಗಿಯೇ ಕಡಲತೀರದ ಪ್ರಕೃತಿ ಸೌಂದರ್ಯ ಸವಿಯಬೇಕು. ಆ ಮೂಲಕ ನೇಚರ್‌ಗೆ ಇನ್ನಷ್ಟು ಹತ್ತಿರವಾಗಬೇಕು ಎಂಬ ಕಲ್ಪನೆಯಲ್ಲಿ ಈ ಬೀಚ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಕಡಲತೀರಗಳಿಗೆ ಬರುವವರಿಗೆ ಆರಂಭದಲ್ಲೇ, ‘ಇಲ್ಲಿ ಬಟ್ಟೆ ಬಿಚ್ಚಿ ಪ್ಲೀಸ್..’ ಎಂಬ ಸೂಚನಫಲಕ ಕಾಣುತ್ತದೆ. ಇಲ್ಲಿ ನಿಯಮ ಪಾಲಿಸದವರಿಗೆ ಪ್ರವೇಶವಿಲ್ಲ.
ಬಟ್ಟೆ ಧರಿಸಿದ್ರೆ ಹೊರಹಾಕ್ತಾರೆ ಬೀಚ್ ವಾರ್ಡನ್
ಉತ್ತರ ಜರ್ಮನ್‌ನ ಬಾಲ್ಟಿಕ್ ಸಮುದ್ರ ತೀರದ ರೋಸ್ಟಾಕ್‌ನಲ್ಲಿರುವ ಬೀಚ್‌ನಲ್ಲಿ ವಾರ್ಡನ್‌ಗಳು, ನ್ಯಾಚುರಿಸ್ಟ್‌ಗಳನ್ನು ನೇಮಿಸಲಾಗಿರುತ್ತದೆ. ಬೀಚ್‌ಗಳಿಗೆ ಬಟ್ಟೆ ಧರಿಸಿ ಬರುವವರನ್ನು ಇವರು ತಡೆಯುವ ಅಧಿಕಾರವನ್ನು ಹೊಂದಿರುತ್ತಾರೆ. ನಗ್ನತೆಯನ್ನು ಒಪ್ಪಿ ಬರುವವರಿಗೆ ಮಾತ್ರ ನಗ್ನ ಕಡಲತೀರಗಳಲ್ಲಿ ವಿಹರಿಸಲು ಅನುಮತಿ ಇರುತ್ತದೆ. ಅದಕ್ಕಾಗಿ ಸ್ಥಳೀಯ ಪುರಸಭೆ ಕೌನ್ಸಿಲ್ 23 ಪುಟಗಳ ನಿಮಗಳನ್ನು ಹೊರಡಿಸಿದೆ.
ನ್ಯಾಚುರಿಸ್ಟ್‌ಗಳಿಗೆ (ನೈಸರ್ಗಿಕವಾದಿಗಳು) ಮೀಸಲಾದ ಪ್ರದೇಶಗಳಲ್ಲಿ ಕೆಲವರು ಬಟ್ಟೆ ಧರಿಸಿ ಓಡಾಡಿ ಅನಾನುಕೂಲ ವಾತಾವರಣ ಉಂಟು ಮಾಡಿದ್ದರಂತೆ. ಈ ಬಗ್ಗೆ ಮೇಲ್ವಿಚಾರಕರಿಗೆ ಹಲವು ದೂರಗಳು ಹೋಗಿದ್ದವಂತೆ. ಇನ್ಮುಂದೆ ಇಂತಹ ಅನಾನುಕೂಲ ವಾತಾವರಣ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂಬ ಉದ್ದೇಶದಿಂದ ವಾರ್ಡನ್‌ಗಳನ್ನು ನಿಯೋಜಿಸಲಾಗಿದೆ. ಬೀಚ್‌ನಲ್ಲಿ ನಿಯಮ ಉಲ್ಲಂಘಿಸುವವರನ್ನು ಮುಲಾಜಿಲ್ಲದೇ ಹೊರಹಾಕುವ ಅಧಿಕಾರವನ್ನು ಬೀಚ್ ವಾರ್ಡನ್‌ಗಳಿಗೆ ನೀಡಲಾಗಿದೆ.
ಕಂಡೀಷನ್ ಅಪ್ಲೈ
ನ್ಯಾಚುರಿಸಂ ಜಗತ್ತಿಗೆ ಹೊಸಬರಾದವರು ಕೆಲವು ನಿಯಮಗಳನ್ನು ಗೌರವಿಸುವುದು ಅತ್ಯಗತ್ಯ. ನಗ್ನ ಬೀಚ್‌ಗೆ (Nudist Beach) ಭೇಟಿ ನೀಡುವವರು ಈ ನಿಯಮಗಳನ್ನು ಮೀರುವಂತಿಲ್ಲ.
* ದಿಟ್ಟಿಸಿ ನೋಡಬಾರದು: ಎದುರಿಗೆ ಬೆತ್ತಲಾಗಿ ಓಡಾಡುವವರನ್ನು ದಿಟ್ಟಿಸಿ ನೋಡುವಂತಿಲ್ಲ. ಇತರರಿಗೆ ಅನಾನುಕೂಲ ಆಗದಂತೆ ನಡೆದುಕೊಳ್ಳಬೇಕು.
* ಫೋಟೊ ತೆಗೆಯಬಾರದು: ಒಪ್ಪಿಗೆ ನೀಡದ ಹೊರತು ಫೋಟೊಗಳನ್ನು ತೆಗೆಯುವಂತಿಲ್ಲ. ಈ ವಲಯದಲ್ಲಿ ಫೋಟೊ ತೆಗೆಯುವುದಕ್ಕೆ ನಿಷೇಧವಿದೆ.
* ಕೆಟ್ಟ ಕಾಮೆಂಟ್‌ಗಳನ್ನು ಮಾಡುವಂತಿಲ್ಲ: ಯಾರೊಬ್ಬರ ಬಗ್ಗೆಯೂ ಕೆಟ್ಟ ರೀತಿಯಲ್ಲಿ ಮಾತನಾಡುವಂತಿಲ್ಲ.
ಜರ್ಮನಿಯು ರೋಸ್ಟಾಕ್‌ನಲ್ಲಿಯೇ ಸರಿಸುಮಾರು 15 ಕಿಲೋಮೀಟರ್‌ಗಳಷ್ಟು ಕಡಲತೀರಗಳನ್ನು ಹೊಂದಿದೆ. ಇದನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. 1.ನ್ಯಾಚುರಿಸ್ಟ್ಗಳಿಗೆ ಮಾತ್ರ, 2.ಮಿಶ್ರ ಬಳಕೆಗೆ ಮತ್ತು 3. ಬಟ್ಟೆ ಧರಿಸುವವರಿಗೆ ಮಾತ್ರ ಎಂದು ವರ್ಗೀಕರಿಸಲಾಗಿದೆ. ನ್ಯಾಚುರಿಸ್ಟ್ಗಳಿಗೆ ಮಾತ್ರ ಎಂದು ಗೊತ್ತುಪಡಿಸಿದ ನಗ್ನ ಕಡಲತೀರಕ್ಕೆ ಹೋಗುವವರು ಬಟ್ಟೆ ಧರಿಸದೇ ನಗ್ನರಾಗಿಯೇ ಹೋಗಬೇಕು. ಉಳಿದ ಎರಡು ವಿಭಾಗಗಳಲ್ಲಿ ಬಟ್ಟೆ ಧರಿಸಬೇಕೋ ಅಥವಾ ಬೇಡವೋ ಎಂಬ ಆಯ್ಕೆಯನ್ನು ಪ್ರವಾಸಿಗರಿಗೆ ಬಿಡಲಾಗಿದೆ.
ನಗ್ನತೆಯನ್ನು ಆನಂದಿಸೋ ಜರ್ಮನ್ನರು
ಜರ್ಮನಿಯಲ್ಲಿ ನಗ್ನತೆ ಪ್ರತಿಪಾದನೆ ಹೊಸದೇನಲ್ಲ. ಇದಕ್ಕೆ ದೀರ್ಘಕಾಲದ ಇತಿಹಾಸ ಇದೆ. ನ್ಯಾಚುರಿಸಂ ಎಂಬುದು 19 ನೇ ಶತಮಾನದ ಉತ್ತರಾರ್ಧದ ಸಾಂಸ್ಕೃತಿಕ ಆಂದೋಲನವಾಗಿದೆ. ಇದನ್ನು ಫ್ರೀಕೋರ್‌ಪರ್‌ಕಲ್ಟೂರ್ (ಎಫ್‌ಕೆಕೆ) ಅಥವಾ ಮುಕ್ತ ದೇಹ ಸಂಸ್ಕೃತಿ ಎಂದು ಕರೆಯಲಾಗುತ್ತದೆ. ಹಿಂದಿನಿAದಲೂ ಜರ್ಮನ್ನರು ಗೊತ್ತುಪಡಿಸಿದ ಕಡಲತೀರಗಳು, ಉದ್ಯಾನಗಳು ಮತ್ತು ಫುಟ್‌ಪಾತ್‌ನಲ್ಲಿ ಓಡಾಡುವಾಗಲೂ ಸಾಮಾಜಿಕ ನಗ್ನತೆಯನ್ನು ಆನಂದಿಸಿದ್ದಾರೆ. ಆದರೆ, ಈಗಿನ ಯುವ ಪೀಳಿಗೆಯು ಈ ಸಂಪ್ರದಾಯದಿಂದ ವಿಮುಖವಾಗುತ್ತಿದೆ. ಪರಂಪರೆಯ ಸಂಸ್ಕೃತಿಯನ್ನು ಅಭ್ಯಾಸ ಮಾಡುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದು ನ್ಯಾಚುರಿಸ್ಟ್‌ಗಳ ವಾದ. ಬದಲಾಗುತ್ತಿರುವ ಕಾಲದಲ್ಲಿ ರೋಸ್ಟಾಕ್ ಈಗಾಗಲೇ ತನ್ನ ಅಧಿಕೃತ ನ್ಯಾಚುರಿಸ್ಟ್ ವಲಯಗಳನ್ನು 37 ರಿಂದ 27 ಕ್ಕೆ ಇಳಿಸಿದೆ.
130 ವರ್ಷಗಳ ಹಿಂದಿನಿಂದಲೂ ನಗ್ನತೆ ಎನ್ನುವುದು ಆಂದೋಲನವಾಗಿ ನಡೆದುಕೊಂಡು ಬಂದಿದೆ. ನಗ್ನತೆ ಎಂಬ ಪ್ರಕೃತಿವಾದವು ದೈಹಿಕ ಮತ್ತು ಮಾನಸಿಕ ಕ್ಷೇಮವನ್ನು ಹೆಚ್ಚಿಸುತ್ತದೆ ಎಂದು ನ್ಯಾಚುರಿಸ್ಟ್‌ಗಳು ಪ್ರತಿಪಾದಿಸುತ್ತಾರೆ. ಆದರೆ ಪ್ರಸ್ತುತ ದಿನಗಳಲ್ಲಿ, ಜರ್ಮನ್ ಅಸೋಸಿಯೇಷನ್ ಫಾರ್ ಫ್ರೀ ಬಾಡಿ ಕಲ್ಟರ್ (ಡಿಎಫ್‌ಕೆ) ಕೇವಲ 30,000 ಸದಸ್ಯರನ್ನು ಹೊಂದಿದೆ. 25 ವರ್ಷಗಳ ಹಿಂದೆ ಸದಸ್ಯರ ಸಂಖ್ಯೆ 65,000 ಇತ್ತು. ಕ್ಯಾಂಪ್‌ಗ್ರೌಂಡ್‌ಗಳನ್ನು ನಡೆಸುವ, ವಾಲಿಬಾಲ್ ಮತ್ತು ಪೆಟಾಂಕ್‌ನಂತಹ ಕ್ರೀಡೆಗಳನ್ನು ಆಯೋಜಿಸುವ ಅನೇಕ ನಗ್ನ ಸಂಘಟನೆಗಳು ಪ್ರಸ್ತುತ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನೇ ಹೊಂದಿವೆ. ಈ ಒಂದು ಪಾರಂಪರಿಕ ಪದ್ಧತಿಯಿಂದ ಜನರು ವಿಮುಖರಾಗುತ್ತಿರುವ ಬಗ್ಗೆ ನ್ಯಾಚುರಿಸ್ಟ್‌ಗಳು ಕಳವಳ ವ್ಯಕ್ತಪಡಿಸಿದ್ದಾರೆ.