ಬೊಮ್ಮಾಯಿ ಸರ್ಕಾರದ ಕಾರ್ಯಕ್ರಮವನ್ನು ಹೇಳಿದ್ದಕ್ಕೆ ಪ್ರದೀಪ್‌ ಈಶ್ವರ್‌ಗೆ ಸಿಟ್ಟು: ಪಿಸಿ ಮೋಹನ್‌

Public TV
2 Min Read
pradeep eshwar

– ಪ್ರದೀಪ್ ಲಕ್ಷ್ಮಣ ರೇಖೆ ದಾಟಿದ ಮೇಲೆ ಮಧ್ಯ ಪ್ರವೇಶ ಮಾಡಿದೆ

ಬೆಂಗಳೂರು: ಬೊಮ್ಮಾಯಿ (Basavaraj Bommai) ಸರ್ಕಾರದ ಕಾರ್ಯಕ್ರಮವನ್ನು ಆಯೋಜಕರು ಹೇಳಿದ್ದರು. ಇದಕ್ಕೆ ಪ್ರದೀಪ್ ಈಶ್ವರ್‌ (Pradeep Eshwar) ವಿರೋಧ ಮಾಡಿದ್ದರು. ಇದರಿಂದ ಅಲ್ಲಿ ಗೊಂದಲ ಆಯ್ತು ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್‌ (PC Mohan) ಹೇಳಿದ್ದಾರೆ.

ಶುಕ್ರವಾರ ರವೀಂದ್ರ ಕಲಾಕೇತ್ರದಲ್ಲಿ ಆಯೋಜನೆಗೊಂಡಿದ್ದ ಕೈವಾರ ತಾತಯ್ಯ (Kaivara Tatayya) ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಿಂದ (Congress) ಬಲಿಜ ಸಮುದಾಯಕ್ಕೆ ಅನ್ಯಾಯವಾಗಿದೆ. ಪ್ರಚಾರದ ಗೀಳಿಗೆ ಪ್ರದೀಪ್ ಈಶ್ವರ್‌ ಮಾತನಾಡುತ್ತಿದ್ದಾರೆ. ಪ್ರದೀಪ್‌ ಅವರಿಗೆ ಹತಾಶೆಯಾಗಿದ್ದು,  ಅವರ ಹತಾಶೆಯನ್ನು ನಿನ್ನೆ ಹೊರಗೆ ಹಾಕಿದ್ದಾರೆ ಎಂದರು.

ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆದಾಗ ಕೈವಾರ ತಾತಯ್ಯ ಕಾರ್ಯಕ್ರಮ ಚೆನ್ನಾಗಿ ಮಾಡಿದ್ದರು. ಪ್ರದೀಪ್ ಈಶ್ವರ್ ಬಿಜೆಪಿ ಬಗ್ಗೆ ಮಾತಾಡೋದು, ಸಿದ್ದರಾಮಯ್ಯ ಸರ್ಕಾರ ಅದು ಇದು ಅಂತ ಮಾತಾಡೋಕೆ ಪ್ರಾರಂಭ ಮಾಡಿದರು. ಆಗ ಜನರೇ ಅವರ ವಿರುದ್ದ ಮಾತನಾಡಲು ಶುರು ಮಾಡಿದರು. ಪ್ರದೀಪ್ ಲಕ್ಷ್ಮಣ ರೇಖೆ ದಾಟಿದ ಮೇಲೆ ನಾನು ಮಧ್ಯ ಪ್ರವೇಶ ಮಾಡಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಜ್ಯದಲ್ಲಿರೋದು ಸಿದ್ದರಾಮಯ್ಯನ ಸರ್ಕಾರ… ನಿಮ್ಮಪ್ಪನ ಸರ್ಕಾರ ಅಲ್ಲ – ಬಿಜೆಪಿ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಪ್ರದೀಪ್‌ ಈಶ್ವರ್‌

ಕಾಂಗ್ರೆಸ್ ಸರ್ಕಾರ ಬಲಿಜ ಸಮುದಾಯವನ್ನು 3A ಗೆ ಯಾಕೆ ಸೇರಿಸಿದ್ದು? ನಮ್ಮ ಸಮುದಾಯಕ್ಕೆ ಯಡಿಯೂರಪ್ಪ ಕೊಡುಗೆ ಇದೆ. ಅದರ ಬಗ್ಗೆ ಮಾತಾಡಿದ್ರೆ ಇವರಿಗೇನು ಸಮಸ್ಯೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನವರು ಬಲಿಜ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಈ ಕಾಂಗ್ರೆಸ್‌ ಸರ್ಕಾರ ಶಾಶ್ವತವಲ್ಲ. ಇನ್ನೆರಡು ವರ್ಷ ಆದ ಮೇಲೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪ್ರದೀಪ್ ಈಶ್ವರ್ ತಮ್ಮ ವರ್ತನೆ ಸರಿಪಡಿಸಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ಯಡಿಯೂರಪ್ಪ, ಬೊಮ್ಮಾಯಿ ನಮ್ಮ ಸಮುದಾಯಕ್ಕೆ ಸಹಾಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಬಲಿಜ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಪ್ರದೀಪ್‌ ಈಶ್ವರ್‌ 500 ಕೋಟಿ ರೂ. ಕೊಡಿಸಿ. ಬಲಿಜ ಸಮುದಾಯಕ್ಕೆ ಅನ್ಯಾಯ ಮಾಡಿದ್ದೇ ಕಾಂಗ್ರೆಸ್. ಅ ನೋವು ಸಮುದಾಯಕ್ಕೆ ಇದೆ. ಅದನ್ನು ಕಾರ್ಯಕ್ರಮದಲ್ಲಿ ಹೇಳಿರಬಹುದು. ನಿನ್ನೆಯ ಕಾರ್ಯಕ್ರಮಕ್ಕೆ ಸಿಎಂ, ಮಂತ್ರಿಯಾರು ಬರಲಿಲ್ಲ. ಇದು ಕಾಂಗ್ರೆಸ್ ಸರ್ಕಾರದ ಅಸಡ್ಡೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಅವರೇನು ಚಿಕ್ಕ ಮಗು ಅಲ್ಲ. ಶಾಸಕರಾಗಿ ಹೀಗೆ ಮಾತನಾಡುವುದು ಸರಿನಾ ಅಂತ ಅವರೇ ತಿಳಿದುಕೊಳ್ಳಬೇಕು. ಅವರು ಮಾತಾಡಿದ್ದನ್ನು ಕೇಳಿ ನನಗೇ ಶಾಕ್ ಆಯ್ತು. ಮುಂದೆ ಇಂತಹ ಕಾರ್ಯಕ್ರಮಗಳಿಗೆ ಅವರನ್ನು ಕರೆಯಬೇಕಾ ಅಂತ ಯೋಚನೆ ಮಾಡಿ ಅಂತ ಆಯೋಜಕರಿಗೆ ಹೇಳುತ್ತೇನೆ. ಬಲಿಜ ಸಮುದಾಯ ಬಿಜೆಪಿ ಜೊತೆ ‌ಇದೆ ಎಂದರು.

Share This Article