ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ (Champions Trophy Final) ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದೆ. ಈ ಮೂಲಕ ಭಾರತಕ್ಕೆ (Team India) 252 ರನ್‌ಗಳ ಗುರಿ ನೀಡಿದೆ.
WHAT A BALL BY KULDEEP. 🤯pic.twitter.com/zFgXsZPGab
— Mufaddal Vohra (@mufaddal_vohra) March 9, 2025
ಟೀಂ ಇಂಡಿಯಾ ಸ್ಪಿನ್ ಬೌಲರ್‌ಗಳ ಘಾತುಕ ದಾಳಿಯ ಹೊರತಾಗಿಯೂ ಮೈಕಲ್ ಬ್ರೇಸ್‌ವೆಲ್ (Michael Bracewell) ಹಾಗೂ ಡೇರಿಲ್ ಮಿಚೆಲ್ (Daryl Mitchell) ಅವರ ಅಮೋಘ ಅರ್ಧಶತಕಗಳ ನೆರವಿನಿಂದ 250 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ಕಿವೀಸ್, ಫೀಲ್ಡಿಂಗ್ ಮಾಡುವ ಅವಕಾಶವನ್ನು ಭಾರತಕ್ಕೆ ಬಿಟ್ಟುಕೊಟ್ಟಿತು. ಆರಂಭಿಕರಾಗಿ ಕಣಕ್ಕಿಳಿದ ರಚಿನ್ ರವೀಂದ್ರ (Rachin Ravindra) ಹಾಗೂ ವಿಲ್ ಯಂಗ್ ಜೋಡಿ ಸ್ಪೋಟಕ ಇನ್ನಿಂಗ್ಸ್ ಕಟ್ಟುವ ಪ್ರಯತ್ನಕ್ಕೆ ಮುಂದಾದರು. ಅಂತೆಯೇ ಮೊದಲ ವಿಕೆಟ್‌ಗೆ 47 ಎಸೆತಗಳಲ್ಲಿ 57 ರನ್‌ಗಳ ಜೊತೆಯಾಟ ನೀಡಿತ್ತು. ಆದ್ರೆ ವಿಲ್ ಯಂಗ್ ವಿಕೆಟ್ ಬೀಳುತ್ತಿದ್ದಂತೆ ಅಗ್ರ ಕ್ರಮಾಂಕದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ರು.
ಜೀವ ತುಂಬಿದ ಮಿಚೆಲ್, ಫಿಲಿಪ್ಸ್ ಜೊತೆಯಾಟ:
ಇನ್ನೂ 23.2 ಓವರ್‌ಗಳಲ್ಲಿ 108 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಿವೀಸ್‌ಗೆ ಗ್ಲೇನ್ ಫಿಲಿಪ್ಸ್ ಹಾಗೂ ಡೇರಿಲ್ ಮಿಚೆಲ್ ಅವರ ಜೊತೆಯಾಟ ಜೀವ ತುಂಬಿತು. ಟೀಂ ಇಂಡಿಯಾ ಸ್ಪಿನ್ನರ್‌ಗಳ ಎದುರು ರನ್ ಕದಿಯಲು ತಿಣುಕಾಡಿದ ಈ ಜೋಡಿ 87 ಎಸೆತಗಳಲ್ಲಿ 57 ರನ್ ಗಳಿಸಿತು. ಇದರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಟಾಮ್ ಲಾಥಮ್, ಮಿಚೆಲ್ ಜೋಡಿಯಿಂದ 33 ರನ್ ಹಾಗೂ ಮೈಕಲ್ ಬ್ರೇಸ್‌ವೆಲ್ ಜೊಡಿಯಿಂದ 46 ರನ್‌ಗಳ ಸಣ್ಣ ಪ್ರಮಾಣದ ಜೊತೆಯಾಟ ಕಿವೀಸ್ ತಂಡ 200 ರನ್‌ಗಳ ಗಡಿದಾಟಲು ನೆರವಾಯಿತು.
ಕಿವೀಸ್ ಪರ ಡೇರಿಲ್ ಮಿಚೆಲ್ 63 ರನ್ (101 ಎಸೆತ, 3 ಬೌಂಡರಿ), ಮೈಕಲ್ ಬ್ರೇಸ್‌ವೆಲ್ ಅಜೇಯ 53 ರನ್ (40 ಎಸೆತ, 2 ಸಿಕ್ಸರ್, 3 ಬೌಂಡರಿ), ರಚಿನ್ ರವೀಂದ್ರ 37 ರನ್, ಗ್ಲೆನ್ ಫಿಲಿಪ್ಸ್ 34 ರನ್, ವಿಲ್ ಯಂಗ್ 15 ರನ್, ಕೇನ್ ವಿಲಿಯಮ್ಸನ್ 11 ರನ್, ಟಾಮ್ ಲಾಥಮ್ 14 ರನ್, ಮಿಚೆಲ್ ಸ್ಯಾಂಟ್ನರ್ 8 ರನ್, ಕೊಡುಗೆ ನೀಡಿದರು.
ಟೀಂ ಇಂಡಿಯಾ ಪರ ವರುಣ್ ಚಕ್ರವರ್ತಿ, ಕುಲ್‌ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.