ಕೇರಳ | ವಿದ್ಯಾರ್ಥಿಗಳ ನಡುವೆ ಮಾರಾಮಾರಿ – 10ನೇ ತರಗತಿ ಬಾಲಕ ಸಾವು

Public TV
1 Min Read
Class 10 Boy Dies After Clash Between Students In Kerala

ತಿರುವನಂತಪುರಂ: ಕೇರಳದ (Kerala) ಕೋಝಿಕ್ಕೋಡ್ ಜಿಲ್ಲೆಯ ಖಾಸಗಿ ಟ್ಯೂಷನ್ ಸೆಂಟರ್ ಬಳಿ ನಡೆದ ವಿದ್ಯಾರ್ಥಿಗಳ ನಡುವಿನ ಮಾರಾಮಾರಿಯಲ್ಲಿ ಗಾಯಗೊಂಡಿದ್ದ 10ನೇ ತರಗತಿ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಮೃತ ವಿದ್ಯಾರ್ಥಿಯನ್ನು ಮಹಮ್ಮದ್ ಶಹಬಾಸ್ (16) ಎಂದು ಗುರುತಿಸಲಾಗಿದೆ. ಫೆ.23 ರಂದು ಟ್ಯೂಷನ್ ಸೆಂಟರ್‌ನಲ್ಲಿ ನಡೆದ ಬೀಳ್ಕೊಡುಗೆ ಪಾರ್ಟಿಯ ಸಂದರ್ಭದಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಮಹಮ್ಮದ್‌ ತಲೆಗೆ ತೀವ್ರ ಪೆಟ್ಟಾಗಿತ್ತು. ಆತನಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಾ.1ರ ಮುಂಜಾನೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಐವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಕೊಲೆ ಆರೋಪ ಹೊರಿಸಿ, ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿಯವರು, ವಿದ್ಯಾರ್ಥಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಇಲಾಖಾ ತನಿಖೆ ಆರಂಭಿಸುವಂತೆ ಶಿಕ್ಷಣ ನಿರ್ದೇಶಕರಿಗೆ ಆದೇಶಿಸಿದ್ದಾರೆ.

ಫೆ.23ರಂದು ಮಹಮ್ಮದ್ ಶಹಬಾಸ್ ಸೇರಿದಂತೆ ಸುಮಾರು 15 ವಿದ್ಯಾರ್ಥಿಗಳ ಗುಂಪು ಹಾಗೂ ಇನ್ನೊಂದು ಗುಂಪಿನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಗಲಾಟೆ ನಡೆದಿತ್ತು. ಆರಂಭದಲ್ಲಿ, ಶಹಬಾಸ್ ಗಂಭೀರ ಗಾಯಗೊಂಡಂತೆ ಕಾಣಲಿಲ್ಲ. ಆತನನ್ನು ತಾಮರಶ್ಶೇರಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಮನೆಗೆ ಹಿಂದಿರುಗಿದ ನಂತರ, ಅವನ ಸ್ಥಿತಿ ಹದಗೆಟ್ಟು ಕೋಮಾಕ್ಕೆ ಜಾರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Share This Article